ಕೆ.ಆರ್.ನಗರ | ಐತಿಹಾಸಿಕ ಅರ್ಕೇಶ್ವರ ದೇಗುಲದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ

ಮೈಸೂರು : ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ್.ನಗರ) ತಾಲೂಕಿನ ಪುರಾತನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಎಡತೊರೆ ಗ್ರಾಮದ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದ ಗೋಡೆಯ ಮೇಲೆ ಅನ್ಯ ಧರ್ಮಗಳ ಚಿಹ್ನೆಗಳನ್ನು ಬಿಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ನಂತರ ತಾಲೂಕು ಆಡಳಿತ ಇಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದೆ ಎಂದು ತಿಳಿದುಬಂದಿದೆ.
ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ಸ್ವಾಮಿ ದೇವಾಲಯದ ಆವರಣದ ಗೋಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ (Cross) ಹಾಗೂ ಹಸಿರು ಬಣ್ಣದಲ್ಲಿ ಮಸೀದಿಯ (Mosque) ಚಿತ್ರಗಳನ್ನು ಬಿಡಿಸಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಸ್ಥಳೀಯ ಯುವಕರು ಇದನ್ನು ಗಮನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಶ್ರದ್ಧಾಕೇಂದ್ರದ ಪವಿತ್ರತೆಗೆ ಧಕ್ಕೆ ತರುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ ಸ್ಥಳೀಯರು, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ತಕ್ಷಣವೇ ಗೋಡೆಯ ಮೇಲಿದ್ದ ಚಿತ್ರಗಳನ್ನು ಅಳಿಸಿಹಾಕಲು ಕ್ರಮ ಕೈಗೊಂಡ ಅವರು ದೇವಾಲಯದ ಪಾರುಪತ್ತೇದಾರ್ ಹಾಗೂ ಚಿತ್ರ ಬಿಡಿಸಿದ ಕಲಾವಿದನ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲೆಗಳಲ್ಲಿ ಅ.22ರ ವರೆಗೆ ಗುಡುಗು ಸಹಿತ ಮಳೆ ಮುನ್ಸೂಚನೆ

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
‘ಕೆ.ಆರ್.ನಗರದ ಪ್ರಸಿದ್ಧ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿ ಇತರ ಧಾರ್ಮಿಕ ಚಿಹ್ನೆಗಳನ್ನು ರಚಿಸಿ, ಶ್ರದ್ಧಾಕೇಂದ್ರದ ಪವಿತ್ರತೆಗೆ ಧಕ್ಕೆ ತರಲು ಯತ್ನಿಸಿರುವುದು ಅತ್ಯಂತ ಖಂಡನೀಯ. ಇದು ಸೂಕ್ಷ್ಮತೆಯ ಅರಿವಿಲ್ಲದ, ಸಂವೇದನಾರಹಿತ ಉದ್ಧಟತನ. ಧಾರ್ಮಿಕ ಸಾಮರಸ್ಯದ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಆಚಾರ-ವಿಚಾರಗಳು ಹಾಗೂ ಪದ್ಧತಿಗಳ ಮೇಲೆ ಸವಾರಿ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಮತ್ತು ಈ ಕುರಿತಂತೆ ಈ ತುಘಲಕ್ ಸರ್ಕಾರದ ಮೌನ ಭಕ್ತಾದಿಗಳ ಭಾವನೆಗಳಿಗೆ ಎಸಗಿದ ದ್ರೋಹವಾಗಿದೆ. ಇವರ ಢೋಂಗಿ ಮುಖವಾಡವನ್ನು ಕಳಚಿ ಅಸಲೀ ಮುಖವನ್ನು ಬಯಲು ಮಾಡಿದೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇತರ ಪ್ರಾರ್ಥನಾ ಮಂದಿರಗಳಲ್ಲಿ ಕಾಣಿಸದ ಇಂತಹ ಕುಚೋದ್ಯಗಳು ಕೇವಲ ಹಿಂದೂ ನಂಬಿಕೆಗಳ ಮೇಲೆಯೇ ಹೇರುವುದು ಯಾಕೆ? ಮಾನ್ಯ ಮುಖ್ಯಮಂತ್ರಿಗಳೇ, ಹಿಂದೂಗಳ ಶಾಂತಿಪ್ರಿಯತೆಯನ್ನು ದೌರ್ಬಲ್ಯ ಎಂದುಕೊಂಡ ವಿಕೃತ ಮನಸ್ಸಿನ ಕುಚೇದ್ಯಗಳಿಗೆ ನಿಮ್ಮ ಸರ್ಕಾರ ತಕ್ಕ ಶಾಸ್ತಿ ಮಾಡದೆ ಹೋದರೆ ಜನರೇ ಆ ಕೆಲಸ ಮಾಡಬೇಕಾದೀತು. ಪ್ರಕೃತ ಪ್ರಕರಣದಲ್ಲಿ ಕೇವಲ ಆ ಚಿಹ್ನೆಗಳನ್ನು ತೆರವುಗೊಳಿಸಿದರೆ ಸಾಲದು, ಪ್ರಚೋದನಾಕಾರಿ ಕೆಲಸ ಮಾಡಿರುವವರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ಬಾಲಕನಿಗೆ ಕಚ್ಚಿದ ಹಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement