ಕಾಕ್ರೋಚ್ ಜನತಾ ಪಾರ್ಟಿಗೆ ಠಕ್ಕರ್ ಕೊಡಲು ʼಲಾಲ್ ಹಿಟ್ ಜನತಾ ಪಾರ್ಟಿʼಯ ಉದಯ ! ಯಾವುದು ಈ ಸಂಘಟನೆ?

ನವದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ, ಅದಕ್ಕೆ ಪರ್ಯಾಯವಾಗಿ ಲಾಲ್ ಹಿಟ್ ಜನತಾ ಪಾರ್ಟಿ’ (Lal Hit Janata Party)ಎಂಬ ಹೊಸ ಸಂಘಟನೆ ದೆಹಲಿಯಲ್ಲಿ ಉದಯಿಸಿದೆ. ಇದು ಜಿರಳೆಗಳನ್ನು ಕೊಲ್ಲಲು ಬಳಸುವ ಪ್ರಸಿದ್ಧ ಕೀಟನಾಶಕ ‘ಲಾಲ್ ಹಿಟ್’ (Lal HIT) ಹೆಸರನ್ನು ಬಳಸಿಕೊಂಡು ರಚನೆಯಾಗಿರುವ ಗುಂಪಿನ ಒಂದು ವ್ಯಂಗ್ಯಾತ್ಮಕ (Satirical) ಹೆಸರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆರಂಭಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಮತ್ತು ಅವರ ಪ್ರತಿಭಟನೆಗಳಿಗೆ ಟಕ್ಕರ್ ನೀಡಲು ದೆಹಲಿಯಲ್ಲಿ ಅಯಾನ್ ಭಟ್ನಾಗರ್ ಎಂಬುವವರ ನೇತೃತ್ವದಲ್ಲಿ ಈ ‘ಲಾಲ್ ಹಿಟ್ ಜನತಾ ಪಾರ್ಟಿ’ಯನ್ನು ಆರಂಭಿಸಲಾಗಿದೆ
ಅಯಾನ್ ಭಟ್ನಾಗರ್ ನೇತೃತ್ವದ ಈ ಸಂಘಟನೆ, ಅಭಿಜೀತ್ ದೀಪ್ಕೆ ಆಯೋಜಿಸುತ್ತಿರುವ ಪ್ರತಿಭಟನೆಗಳನ್ನು ವಿರೋಧಿಸಿದ್ದು, ಸಿಜೆಪಿ ಬೆಂಬಲಿಗರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದೆ.
ವರದಿಗಳ ಪ್ರಕಾರ, ಲಾಲ್ ಹಿಟ್‌ ಜನತಾ ಪಾರ್ಟಿಯ ಮೊದಲ ಸಭೆ ದೆಹಲಿಯ ಮಾಲವೀಯ ಸ್ಮೃತಿ ಭವನದಲ್ಲಿ ಭಾನುವಾರ ನಡೆಯಿತು. ಸಿಜೆಪಿಯ ಪ್ರತಿಭಟನೆಗಳನ್ನು ವಿರೋಧಿಸುವುದು ಹಾಗೂ ಆ ಸಂಘಟನೆ ಎತ್ತುತ್ತಿರುವ ವಿಚಾರಗಳಿಗೆ ಪರ್ಯಾಯ ನಿಲುವನ್ನು ಜನರ ಮುಂದಿಡುವುದು ತಮ್ಮ ಉದ್ದೇಶ ಎಂದು ನೂತನ ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಅಯಾನ್ ಭಟ್ನಾಗರ್, ಸಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಇತರ ಪ್ರತಿಭಟನಾಕಾರರ ನಿಲುವುಗಳನ್ನೂ ಟೀಕಿಸಿದರು. ಇಂತಹ ಪ್ರತಿಭಟನೆಗಳು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುವುದರ ಜತೆಗೆ, ಸ್ಥಳೀಯ ವ್ಯಾಪಾರ-ವಹಿವಾಟಿನ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಲ್ಲ, ಸಿಜೆಪಿ ಪ್ರತಿಭಟನೆಗೆ ಪ್ರತಿರೋಧ
ಲಾಲ್ ಹಿಟ್‌ ಜನತಾ ಪಾರ್ಟಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸ್ಥಾಪಿಸಿಲ್ಲ ಎಂದು ಅಯಾನ್ ಭಟ್ನಾಗರ್ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳನ್ನು ವಿರೋಧಿಸುವುದು ಮತ್ತು ಆ ಸಂಘಟನೆಯ ನಿಲುವುಗಳಿಗೆ ಪ್ರತಿಯಾಗಿ ತಮ್ಮ ವಾದಗಳನ್ನು ಜನರ ಮುಂದಿಡುವುದು ತಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ.
ಸಿಜೆಪಿ ಬೆಂಬಲಿಗರು ಬಹಿರಂಗ ಚರ್ಚೆಗೆ ಬರಬೇಕು ಎಂದೂ ಅವರು ಸವಾಲು ಹಾಕಿದ್ದಾರೆ. ಎರಡೂ ಕಡೆಯವರು ತಮ್ಮ ವಾದಗಳು, ಆಧಾರಗಳು ಮತ್ತು ನಿಲುವುಗಳನ್ನು ಸಾರ್ವಜನಿಕವಾಗಿ ಮಂಡಿಸಲಿ. ಯಾವ ವಿಚಾರದಲ್ಲಿ ಯಾರ ವಾದಕ್ಕೆ ಬಲವಿದೆ ಎಂಬುದು ಚರ್ಚೆಯ ಮೂಲಕ ಜನರಿಗೆ ತಿಳಿಯಲಿ ಎಂಬುದು ಅವರ ವಾದವಾಗಿದೆ. ಪ್ರತಿಭಟನಾಕಾರರ ಒಂದು ವರ್ಗ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಮತ್ತು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಭಟ್ನಾಗರ್ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಕೈಗೆ ಬ್ಯಾಂಡೇಜ್‌, ಭುಜ-ಎದೆಯ ಭಾಗಕ್ಕೆ ಡ್ರೆಸ್ಸಿಂಗ್ ; ಗುಂಡಿನ ದಾಳಿ ಬಳಿಕ ನಟ ಟೈಗರ್ ಶ್ರಾಫ್ ಮೊದಲ ಫೋಟೊ ಬಿಡುಗಡೆ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗೆ ವಿರೋಧ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಸಿಜೆಪಿ ಮತ್ತು ಅದರ ಜೊತೆ ಗುರುತಿಸಿಕೊಂಡಿರುವ ಪ್ರತಿಭಟನಾಕಾರರು ನಡೆಸುತ್ತಿರುವ ಹೋರಾಟವೂ ಈ ಸಂಘಟನೆಯ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳೆಂದು ಹೇಳಲಾಗುತ್ತಿರುವ ವಿಚಾರಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳನ್ನು ಸಿಜೆಪಿ ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.
ಆದರೆ, ಈ ಪ್ರತಿಭಟನೆಗಳನ್ನು ಲಾಲ್ ಹಿಟ್‌ ಜನತಾ ಪಾರ್ಟಿ ವಿರೋಧಿಸಿದೆ. ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿ ಕುರಿತು ಆಕ್ಷೇಪಗಳಿದ್ದರೆ, ಅವುಗಳನ್ನು ನಿಗದಿತ ನಿಯಮಗಳು ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ವ್ಯಕ್ತಪಡಿಸಬೇಕು ಎಂದು ಭಟ್ನಾಗರ್‌ ಹೇಳಿದ್ದಾರೆ.
ವಕೀಲ ಪ್ರಶಾಂತ ಭೂಷಣ ಅವರು ‘ಸರ್ಕಾರ ಬದಲಾವಣೆ’ (ರೆಜಿಮ್ ಚೇಂಜ್) ಕುರಿತು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಅಯಾನ್ ಭಟ್ನಾಗರ್, ಪ್ರತಿಭಟನೆಗಳಿಂದ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರವನ್ನು ಬದಲಾಯಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗವನ್ನು ಪ್ರಶ್ನಿಸುವುದು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಒತ್ತಾಯಿಸುವುದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುತ್ತದೆ ಎಂದು ಅವರು ಹೇಳಿದರು.
ಇಂದು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸುತ್ತಿರುವವರು, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೂ ಬೇಡಿಕೆ ಇಡಬಹುದು ಎಂದು ಭಟ್ನಾಗರ್ ಅಭಿಪ್ರಾಯಪಟ್ಟರು. 50 ಸಾವಿರ ಜನರು ಒಂದೆಡೆ ಸೇರಿದ್ದಾರೆ ಎಂಬ ಕಾರಣಕ್ಕೆ ಒಂದು ಗುಂಪಿನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮತದಾರರ ಪಟ್ಟಿ, ಚುನಾವಣಾ ಪ್ರಕ್ರಿಯೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಹೊಣೆಗಾರಿಕೆ ಕುರಿತಂತೆ ದೇಶದಲ್ಲಿ ನಡೆಯುತ್ತಿರುವ ಚರ್ಚೆಯ ನಡುವೆ, ದೆಹಲಿಯಲ್ಲಿ ಪ್ರತಿಭಟನೆಗಳನ್ನು ವಿರೋಧಿಸುವ ಮತ್ತೊಂದು ಸಂಘಟನೆ ಕಾಣಿಸಿಕೊಂಡಿದೆ. ಇದರಿಂದಾಗಿ ಸಿಜೆಪಿಯ ಹೋರಾಟಕ್ಕೆ ಪ್ರತಿಯಾಗಿ ಸಂಘಟಿತ ಪ್ರತಿರೋಧ ರೂಪುಗೊಳ್ಳುವ ಸಾಧ್ಯತೆ ಎದುರಾಗಿದೆ.

ಪ್ರತಿಭಟನೆಗಳಿಂದ ₹3,000 ಕೋಟಿ ನಷ್ಟದ ಆರೋಪ
ದಸರಾ ಮತ್ತು ದೀಪಾವಳಿ ನಡುವಿನ ಅವಧಿ ವ್ಯಾಪಾರಿಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ದೆಹಲಿಯ ಪ್ರಮುಖ ವಾಣಿಜ್ಯ ಪ್ರದೇಶವಾದ ಕನ್ನಾಟ್ ಪ್ಲೇಸ್ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದರೆ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು ಎಂದು ಭಟ್ನಾಗರ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಪವನ್ ಅವರು, ಪ್ರತಿಭಟನೆಗಳಿಂದ ವ್ಯಾಪಾರ ವಲಯಕ್ಕೆ ಸುಮಾರು ₹3,000 ಕೋಟಿ ನಷ್ಟವಾಗಿದೆ ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಭಟನೆಗಳು ಮುಂದುವರಿದರೆ ಈ ನಷ್ಟ ₹10,000 ಕೋಟಿವರೆಗೂ ಏರಿಕೆಯಾಗಬಹುದು ಎಂಬ ಅಂದಾಜು ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಬಾಲಿವುಡ್‌ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪೊಲೀಸರ ವರ್ತನೆ, ಭದ್ರತಾ ಸಿಬ್ಬಂದಿ ವಿಚಾರವೂ ಪ್ರಸ್ತಾಪ
ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಭಟ್ನಾಗರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯಬೇಕು ಹಾಗೂ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾಂವಿಧಾನಿಕ ವ್ಯವಸ್ಥೆಗಳ ಬಗ್ಗೆ ಗೌರವ ಇರಬೇಕು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಳಸಲಾಗಿದೆ ಎನ್ನಲಾದ ಭಾಷೆಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಜನರು ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಅನುಸರಿಸಬೇಕು ಎಂದು ಸಂಘಟನೆಯ ಸದಸ್ಯರು ಕರೆ ನೀಡಿದ್ದಾರೆ.

ಸಿಜೆಪಿಗೆ ರಾಜಕೀಯ ಸವಾಲಾಗಲಿದೆಯೇ ಹೊಸ ಸಂಘಟನೆ?
ಲಾಲ್ ಹಿಟ್‌ ಜನತಾ ಪಾರ್ಟಿ (Lal Hit Janata Party) ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿಲ್ಲ ಎಂದು ಅಯಾನ್ ಭಟ್ನಾಗರ್ ಪುನರುಚ್ಚರಿಸಿದ್ದಾರೆ. ಸದ್ಯಕ್ಕೆ ಸಿಜೆಪಿಯ ಪ್ರತಿಭಟನೆಗಳನ್ನು ವಿರೋಧಿಸುವುದು, ತನ್ನ ನಿಲುವನ್ನು ಜನರಿಗೆ ತಿಳಿಸುವುದು ಮತ್ತು ಬೆಂಬಲಿಗರನ್ನು ಸಂಘಟಿಸುವುದಕ್ಕೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.
ಸಿಜೆಪಿಯ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲಿ, ಅದಕ್ಕೆ ವಿರುದ್ಧವಾದ ನಿಲುವು ಹೊಂದಿರುವ ಹೊಸ ಸಂಘಟನೆಯ ಉದಯ ಮತ್ತೊಂದು ಬೆಳವಣಿಗೆಯಾಗಿದೆ. ಅಭಿಜೀತ್ ದೀಪ್ಕೆ ಅವರ ನೇತೃತ್ವದ ಪ್ರತಿಭಟನೆಗಳಿಗೆ ಈ ಹೊಸ ಸಂಘಟನೆ ಎಷ್ಟರ ಮಟ್ಟಿಗೆ ಪ್ರತಿರೋಧ ಒಡ್ಡಲಿದೆ, ಸಿಜೆಪಿ ಬಹಿರಂಗ ಚರ್ಚೆಯ ಸವಾಲಿಗೆ ಪ್ರತಿಕ್ರಿಯಿಸಲಿದೆಯೇ ಮತ್ತು ಮುಂದಿನ ದಿನಗಳಲ್ಲಿ ಈ ಸಂಘಟನೆ ತನ್ನ ಚಟುವಟಿಕೆಗಳನ್ನು ಹೇಗೆ ವಿಸ್ತರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement