ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

ಶಿವಮೊಗ್ಗ: ನಗರದ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಭಾರೀ ಆತಂಕದ ಘಟನೆಯೊಂದು ಸಂಭವಿಸಿದೆ. ಇದೇ ಮೊದಲ ಬಾರಿಗೆ ತಾಯಿ ಶ್ರೀ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಸಕ್ರೆಬೈಲು ಆನೆ ಬಿಡಾರದ ‘ಸೋಮಣ್ಣ’ ಎಂಬ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ್ದರಿಂದ ಆನೆಯ ಮೇಲಿದ್ದ ಮಾವುತ ಹಾಗೂ ಕಾವಾಡಿ ಕೆಳಗೆ ಬಿದ್ದಿದ್ದು, ಆನೆಯ ಬೆನ್ನ ಮೇಲಿದ್ದ ಬೆಳ್ಳಿ ಅಂಬಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಉರುಳಿಬಿದ್ದಿದೆ. ಅಂಬಾರಿಯ ಭಾರಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮೆರವಣಿಗೆಯನ್ನು ಅಲ್ಲಿಗೇ ಮೊಟಕುಗೊಳಿಸಲಾಗಿದೆ.
ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೆರವಣಿಗೆ ವೀಕ್ಷಿಸಲು ಜಮಾಯಿಸಿದ್ದ ಸಾವಿರಾರು ಜನರ ನಡುವೆ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಸ್ವಲ್ಪದರಲ್ಲೇ ಅಂತರದಲ್ಲಿ ತಪ್ಪಿದೆ.

ಶಿವಮೊಗ್ಗದ ಕೋಟೆ ಶ್ರೀ ಭೀಮೇಶ್ವರ ಹಾಗೂ ಚಂದ್ರಮೌಳೇಶ್ವರ ದೇವಾಲಯಗಳ ಆವರಣದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ ಜಂಬೂಸವಾರಿ ಮೆರವಣಿಗೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು

ಸಕ್ರೆಬೈಲು ಬಿಡಾರದ ಆನೆ ಸೋಮಣ್ಣ ಬೆಳ್ಳಿ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿತ್ತು. ಸುಮಾರು 200 ಮೀಟರ್ ದೂರ ಕ್ರಮಿಸುತ್ತಿದ್ದಂತೆ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಓಡಲಾರಂಭಿಸಿದೆ. ಜನಸಂದಣಿ ಅಥವಾ ವಾದ್ಯಘೋಷಗಳ ಭಾರೀ ಶಬ್ದಕ್ಕೆ ಆನೆ ಬೆದರಿರಬಹುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಆರಂಭದಲ್ಲಿ ಶಾಂತವಾಗಿ ಸಾಗುತ್ತಿದ್ದ ಆನೆ ಸೋಮಣ್ಣ ಆನೆ ಕ್ಷಣಾರ್ಧದಲ್ಲಿ ಹಿಮ್ಮುಖವಾಗಿ ತಿರುಗಿ, ಅತ್ತಿತ್ತ ಓಡಲಾರಂಭಿಸಿದೆ. ಆನೆಯ ದಿಢೀರ್ ವರ್ತನೆಯಿಂದ ಗಾಬರಿಗೊಂಡ ಅದರ ಮೇಲಿದ್ದ ಮಾವುತ ಹಾಗೂ ಕಾವಾಡಿಗರು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಆನೆಯ ಬೆನ್ನ ಮೇಲಿದ್ದ ತಾಯಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯೂ ಕಳಚಿಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಉರುಳಿಬಿದ್ದಿದೆ. ಅಂಬಾರಿಯ ಭಾರಕ್ಕೆ ಕಾರಿನ ಮೇಲ್ಭಾಗ ತೀವ್ರವಾಗಿ ಜಖಂಗೊಂಡಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ; ಇಬ್ಬರು ಪ್ರಯಾಣಿಕರ ಬಂಧನ

ಅಂಬಾರಿ ಹೊತ್ತ ಆನೆ ಬೆದರಿ ನಗರದ ಕಿರಿದಾದ ರಸ್ತೆಗಳು ಹಾಗೂ ಗಲ್ಲಿಗಳತ್ತ ಓಡುತ್ತಿದ್ದಂತೆ, ಜಂಬೂಸವಾರಿ ವೀಕ್ಷಿಸಲು ನೆರೆದಿದ್ದ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಯಿತು. ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಆದರೆ, ಯಾವುದೇ ಪ್ರಾಣಹಾನಿ ಸಂಭವಿಸದೆ ಭಾರೀ ಅನಾಹುತವೊಂದು ತಪ್ಪಿದೆ.
ಅರಣ್ಯ ಇಲಾಖೆ, ಮಾವುತರ ಸಮಯಪ್ರಜ್ಞೆಯಿಂದ ನಿಯಂತ್ರಣಕ್ಕೆ ಬಂದ ಆನೆ
ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ತಜ್ಞ ವೈದ್ಯರು, ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಕಿರಿದಾದ ರಸ್ತೆಗಳು ಮತ್ತು ಗಲ್ಲಿಗಳಲ್ಲಿ ಓಡುತ್ತಿದ್ದ ಸೋಮಣ್ಣ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹಿಂಬಾಲಿಸಿ ಕೆಲ ಸಮಯದಲ್ಲೇ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಬಳಿಕ ಆನೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಪ್ರಮುಖ ಸುದ್ದಿ :-   ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಮುಹೂರ್ತ ನಿಗದಿ

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಕಳೆದ ಹಲವು ವರ್ಷಗಳಿಂದ ‘ಸಾಗರ’ ಎಂಬ ಆನೆ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿತ್ತು. ಆದರೆ, ಈ ಬಾರಿ ಈ ಆನೆಯ ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಕೊನೆಯ ಕ್ಷಣದಲ್ಲಿ ಸಕ್ರೆಬೈಲು ಆನೆ ಬಿಡಾರದ ‘ಸೋಮಣ್ಣ’ ಆನೆಗೆ ಬೆಳ್ಳಿ ಅಂಬಾರಿ ಹೊರುವ ಹೊಣೆ ವಹಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸೋಮಣ್ಣ ಆನೆಯು ತಾಯಿ ಶ್ರೀ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯನ್ನು ಹೊತ್ತು ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ನಗರದ ಜನಸಂದಣಿ ಹಾಗೂ ವಾದ್ಯಘೋಷಗಳ ನಡುವೆ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಆನೆ, ಭಾರೀ ಶಬ್ದ ಅಥವಾ ಜನಸ್ತೋಮಕ್ಕೆ ಗೊಂದಲಕ್ಕೊಳಗಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement