ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳು, ದಾಳಿಗೂ ಮುನ್ನ ಮುಂಬೈನ ಅಂಧೇರಿ ಪೂರ್ವ ಪ್ರದೇಶದ ಸಾಧಾರಣ ಹೋಟೆಲ್ವೊಂದರಲ್ಲಿ ಐದು ದಿನಗಳ ಕಾಲ ತಂಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಹರಿಯಾಣದ ಹಿಸಾರ್ ನಿವಾಸಿಗಳೆಂದು ಹೋಟೆಲ್ನಲ್ಲಿ ತಮ್ಮನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ನೈಜ ಗುರುತನ್ನು ಮರೆಮಾಚಿ ದಾಳಿಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಹೋಟೆಲ್ನ ದಿನಕ್ಕೆ ಸುಮಾರು 1,500 ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿತ್ತು ಎಂದುವರದಿಯೊಂದು ತಿಳಿಸಿದೆ.
ಫೂಲ್ ಸಿಂಗ್ ಮತ್ತು ರೆಹಾನ್ ಸಿಂಗ್ ಎಂಬ ಇಬ್ಬರು ಆರೋಪಿಗಳು ಅಕ್ಟೋಬರ್ 14ರ ಬೆಳಿಗ್ಗೆ ಹೋಟೆಲ್ಗೆ ಬಂದು ತಂಗಿದ್ದರು. ಅಕ್ಟೋಬರ್ 18ರಂದು ಸಂಜೆ ಕೊಠಡಿ ಖಾಲಿ ಮಾಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿತ್ತು. ಹೋಟೆಲ್ನಿಂದ ಹೊರಟ ಬಳಿಕ ಆರೋಪಿಗಳು ಮತ್ತೆ ಅಲ್ಲಿಗೆ ವಾಪಸಾಗಿರಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಪ್ರತಿದಿನ ಆಟೊದಲ್ಲಿ ತೆರಳಿ ಸ್ಥಳಗಳ ಪರಿಶೀಲನೆ
ವರದಿ ಉಲ್ಲೇಖಿಸಿದ ಮೂಲಗಳ ಪ್ರಕಾರ, ಈ ವ್ಯಕ್ತಿಗಳು ಪ್ರತಿದಿನ ಆಟೋ-ರಿಕ್ಷಾದಲ್ಲಿ ಹೋಟೆಲ್ನಿಂದ ಹೊರಹೋಗುತ್ತಿದ್ದರು. ದಾಳಿ ನಡೆಸುವ ಸ್ಥಳಗಳನ್ನು ಪರಿಶೀಲಿಸುವುದು ಮತ್ತು ದಾಳಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಅವರು ತಂಗಿದ್ದ ಸ್ಥಳದಲ್ಲಿ, ತಮಗೆ ಪೂರೈಸಲಾದ ಪಿಸ್ತೂಲನ್ನು ಪರೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದ (misfired) ಘಟನೆಯೊಂದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದಾಗ್ಯೂ, ನಡೆದ ಘಟನೆಯನ್ನು ಅವರು ಯಾರಿಗೂ ತಿಳಿಯದಂತೆ ಮುಚ್ಚಿಡುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಲಾಗಿದೆ.
ಮುಂಬೈ ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ವಿಚಾರಣೆಯ ಸಮಯದಲ್ಲಿ ಪರೀಕ್ಷಾ ಗುಂಡಿನ ದಾಳಿಯ ಸ್ಥಳವನ್ನು ಬಹಿರಂಗಪಡಿಸಿದ್ದಾನೆ. ಅಭ್ಯಾಸದ ಸಮಯದಲ್ಲಿ ಒಬ್ಬ ಶಂಕಿತ ಎರಡು ಸುತ್ತು ಗುಂಡು ಹಾರಿಸಿದ್ದ. ಇನ್ನೊಬ್ಬ ಒಂದು ಸುತ್ತು ಗುಂಡು ಹಾರಿಸಿದ್ದ ಎಂದು ವರದಿ ಹೇಳಿದೆ.
ದಾಳಿ ನಡೆಸುವ ಮೊದಲು ಬಂದೂಕು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಆರೋಪಿ ಬಯಸಿದ್ದ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಹೀಗಾಗಿ ಅಭ್ಯಾಸದ ಸಮಯದಲ್ಲಿ ಇಬ್ಬರೂ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ತಮ್ಮ ಅಂಧೇರಿ ಹೋಟೆಲ್ ಕೋಣೆಯಲ್ಲಿ ಅದನ್ನು ಪರೀಕ್ಷಿಸುತ್ತಿದ್ದಾಗ ಬಂದೂಕಿನಿಂದ ಮಿಸ್ ಫೈರ್ ಆಗಿತ್ತು ಎಂಬುದು ಪೊಲೀಸರಿಗೆ ತಿಳಿದುಬಂದಿದೆ. ಮೂಲಗಳ ಪ್ರಕಾರ, ಹಾಸಿಗೆಯ ಮೇಲೆ ಗುಂಡು ಮಿಸ್ಫೈರ್ ಆಗಿದೆ. ಈ ಘಟನೆಯು ಹೋಟೆಲ್ ಸಿಬ್ಬಂದಿ ಅಥವಾ ಕೋಣೆಯ ಹೊರಗಿನ ಯಾರ ಗಮನವನ್ನೂ ಸೆಳೆಯಲಿಲ್ಲ.
ಅಕ್ಟೋಬರ್ 18ರಂದು ಆರೋಪಿಗಳು ಹೋಟೆಲ್ನಿಂದ ತೆರಳಿದ ಎರಡು ದಿನಗಳ ಬಳಿಕ, ಅಂದರೆ ಅಕ್ಟೋಬರ್ 20ರಂದು ಪೊಲೀಸರು ಹೋಟೆಲ್ಗೆ ಭೇಟಿ ನೀಡಿದಾಗಲೇ ಸಿಬ್ಬಂದಿಗೆ ಈ ಬೆಳವಣಿಗೆಗಳ ಬಗ್ಗೆ ತಿಳಿದುಬಂದಿದೆ.
ಮತ್ತೆ ಇಬ್ಬರು ಶಂಕಿತರ ಬಂಧನ
ಮುಂಬೈ ಪೊಲೀಸರು ಬುಧವಾರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಶಂಕಿತರನ್ನು ಬಂಧಿಸಿದ್ದು, ಒಟ್ಟು ಬಂಧಿತ ಸಂಖ್ಯೆ 10 ಕ್ಕೆ ತಲುಪಿದೆ. ಇಬ್ಬರನ್ನು ಹರಿಯಾಣದ ಸೋನಿಪತ್ನಲ್ಲಿರುವ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಟ್ರಾನ್ಸಿಟ್ ರಿಮಾಂಡ್ ಕೋರುವ ನಿರೀಕ್ಷೆಯಿದೆ. ಅನುಮತಿ ನೀಡಿದರೆ, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮುಂಬೈಗೆ ಕರೆತರಲಾಗುತ್ತದೆ.
ವರದಿಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ಶಂಕಿತರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇತರ ಆರೋಪಿಗಳೊಂದಿಗೆ ಅವರ ಸಂಪರ್ಕ ಮತ್ತು ಘಟನೆಯನ್ನು ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಅವರ ಆಪಾದಿತ ಪಾತ್ರವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮೂವರು ಪ್ರಮುಖ ಆರೋಪಿಗಳ ಬಂಧನ
ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈ ವಾರದ ಆರಂಭದಲ್ಲಿ ರಾಜಸ್ಥಾನದ ಕೋಟಾದಲ್ಲಿ ಬಂಧಿಸಲಾಗಿದೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಸೋಮವಾರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೋಟಾ ನಗರದ ಪೊಲೀಸರು ಮೂವರನ್ನೂ ಬಂಧಿಸಿ, ಬಳಿಕ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಬುಧವಾರ ಮುಂಜಾನೆ ಆರೋಪಿಗಳನ್ನು ಮುಂಬೈಗೆ ಕರೆತರಲಾಯಿತು. ಬಳಿಕ ಅವರನ್ನು ಅಧಿಕೃತವಾಗಿ ಬಂಧಿಸಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಬಂಧಿತರನ್ನು ಹರಿಯಾಣದ ಸೋನಿಪತ್ ಮೂಲದ ರೆಹಾನ್ ಅಲಿಯಾಸ್ ಸುಕ್ಕಾ (18), ಬಿಹಾರದ ಬೇಗುಸರಾಯ್ ಮೂಲದವನಾಗಿದ್ದು ಮುಂಬೈನಲ್ಲಿ ವಾಸಿಸುತ್ತಿದ್ದ ರಿತಿಕ್ ಕುರ್ಮಿ ಅಲಿಯಾಸ್ ರೋಷನ್ (22) ಹಾಗೂ ಹರಿಯಾಣದ ಫೂಲ್ ಸಿಂಗ್ (18) ಎಂದು ಗುರುತಿಸಲಾಗಿದೆ.
ಜುಹು ಪ್ರದೇಶದಲ್ಲಿ ನಟನ ಕಾರಿನ ಮೇಲೆ ಗುಂಡಿನ ದಾಳಿ
ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿತ್ತು. ಕನಿಷ್ಠ ಇಬ್ಬರು ವ್ಯಕ್ತಿಗಳು ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿ, ಬಳಿಕ ಮೋಟಾರ್ಸೈಕಲ್ನಲ್ಲಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ನಟ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ಕಾರಿನ ಚಾಲಕ ಮತ್ತು ಘಟನೆಯ ವೇಳೆ ಸ್ಥಳದಲ್ಲಿದ್ದ ಓರ್ವ ವ್ಯಕ್ತಿ ಗಾಯಗೊಂಡಿದ್ದರು.
ಮುಂಬೈ ಪೊಲೀಸರ ಪ್ರಕಾರ, ನಟನ ಕಾರಿನ ಮೇಲೆ ಐದರಿಂದ ಆರು ಸುತ್ತು ಗುಂಡು ಹಾರಿಸಲಾಗಿತ್ತು. ದಾಳಿಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಮೋಟಾರ್ಸೈಕಲ್ವೊಂದು ಬಳಿಕ ಅಂಧೇರಿ ಪ್ರದೇಶದಲ್ಲಿ ಅನಾಥವಾಗಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶ, ಆರೋಪಿಗಳ ಸಿದ್ಧತೆ ಮತ್ತು ಅವರಿಗೆ ಶಸ್ತ್ರಾಸ್ತ್ರ ಒದಗಿಸಿದವರ ಕುರಿತು ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ