ಮುಂಬೈ: ದಾರಿ ತಪ್ಪಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಗೆ ತಲುಪಿದ್ದ ಕರ್ನಾಟಕಹಾವೇರಿ ಜಿಲ್ಲೆಯ 70 ವರ್ಷದ ಮಹಿಳೆಯೊಬ್ಬರು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಗೂಗಲ್ ಸರ್ಚ್ ನೆರವಿನಿಂದ 16 ದಿನಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಜಾಕ್ ಬೀ ಎಂಬ ಮಹಿಳೆ ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಸ್ಮರಣಶಕ್ತಿ ಕಳೆದುಕೊಂಡು ಬಳಲುತ್ತಿದ್ದರು. ಅಕ್ಟೋಬರ್ 6ರಂದು ಅವರು ತಮ್ಮ ಊರಿನಲ್ಲಿ ಗೊತ್ತಾಗದೇ ಬೇರೊಂದು ವಾಹನವನ್ನು ಹತ್ತಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಕ್ಕೆ ತಲುಪಿದ್ದರು. ಅಲ್ಲಿ ಅವರನ್ನು ರಕ್ಷಿಸಿದ ಅಚೋಲೆ ಪೊಲೀಸ್ ಠಾಣೆಯ ಸಿಬ್ಬಂದಿ, ವಿರಾರ್ ಫಾಟಾದಲ್ಲಿರುವ ಸಮರ್ಥ ಆಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದರು.
ಮಹಿಳೆಯ ಕುಟುಂಬದವರನ್ನು ಪತ್ತೆಹಚ್ಚಲು ಜೀವನ್ ಆನಂದ್ ಸಂಸ್ಥೆ (ಜೆಎಎಸ್) ತಂಡವು ಗೂಗಲ್ ಸರ್ಚ್ ಮತ್ತು ಚಾಟ್ಜಿಪಿಟಿ ನೆರವು ಪಡೆದುಕೊಂಡಿತು. ಸ್ಥಳೀಯ ಮಾಹಿತಿಯನ್ನು ವಿಶ್ಲೇಷಿಸಿ, ಸ್ಥಳೀಯ ಸಮುದಾಯದ ಸಂಪರ್ಕ ಜಾಲವನ್ನೂ ಬಳಸಿಕೊಂಡ ತಂಡವು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪೊಲೀಸರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಯಿತು.
ಈ ಮೂಲಕ ಮಹಿಳೆಯ ಪುತ್ರಿಯರು ಹಾಗೂ ಸಂಬಂಧಿಕರ ಮಾಹಿತಿ ಲಭ್ಯವಾಯಿತು. ಬಳಿಕ ಸಂಬಂಧಿಕರು ಅಕ್ಟೋಬರ್ 22ರಂದು ರಜಾಕ್ ಬೀ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು ಎಂದು ಜೀವನ್ ಆನಂದ್ ಸಂಸ್ಥೆಯ ಟ್ರಸ್ಟಿ ಕಿಸಾನ್ ಚೌರೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಿಸಾನ್ ಚೌರೆ, “ತಂತ್ರಜ್ಞಾನ ದಾರಿ ತೋರಿಸುತ್ತದೆ, ಮಾನವೀಯ ಕಾಳಜಿ ಕುಟುಂಬಗಳನ್ನು ಒಂದುಗೂಡಿಸುತ್ತದೆ” ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ