ನವದೆಹಲಿ: ಉತ್ತರ ಪ್ರದೇಶ, ಕರ್ನಾಟಕ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಗಳ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಸಾಧನೆಯನ್ನು ಪ್ರಶ್ನಿಸಿದ್ದಾರೆ. ನಾಲ್ಕು ರಾಜ್ಯಗಳ 28 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತಪತ್ರಗಳನ್ನು (ballot papers) ಬಳಸಲಾಗಿತ್ತು ಎಂಬುದನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಪ್ರಶ್ನಿಸುವ ಮೂಲಕ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ನಡೆದ 28 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಪಕ್ಷವು ಸ್ಪರ್ಧಿಸಿತ್ತು; ಇದರಲ್ಲಿ ನಾಲ್ಕು ಸ್ಥಾನಗಳನ್ನು ಅದು ಈ ಹಿಂದೆ ಗೆದ್ದುಕೊಂಡಿತ್ತು. ಆದರೆ, ಕಾಂಗ್ರೆಸ್ ಈವರೆಗಿನ ಫಲಿತಾಂಶದಲ್ಲಿ ಒಂದು ಸ್ಥಾನವನ್ನು ಗೆಲ್ಲಲ್ಲು ವಿಫಲವಾಗಿದೆ.. ಈ ಪೈಕಿ ಕಾಂಗ್ರೆಸ್ಗೆ ಅತಿ ದೊಡ್ಡ ಹಿನ್ನಡೆಯು ಕರ್ನಾಟಕದಲ್ಲಿ ಆಗಿದೆ; ಕರ್ನಾಟಕದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ, ಪಕ್ಷಕ್ಕೆ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ನಾಲ್ಕು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕರ್ನಾಟಕದ 28 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆದಿದೆ. ಈ ಚುನಾವಣೆಗಳು ಮತಪತ್ರಗಳ (ballot papers) ಮೂಲಕ ನಡೆದಿವೆ. ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂದು ಊಹಿಸಿ?” ಎಂದು ಬರೆದಿದ್ದಾರೆ.
ಚುನಾವಣೆಗಳನ್ನು ಮತಪತ್ರಗಳನ್ನು ಬಳಸಿಕೊಂಡು ನಡೆಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ಎತ್ತಿ ತೋರಿಸಿದ್ದಾರೆ. ಮತಯಂತ್ರಗಳಲ್ಲಿ (voting machines) ತಿರುಚುವಿಕೆ ನಡೆದಿದೆ ಎಂದು ಆರೋಪಿಸುತ್ತಾ, ಮತ್ತೆ ಬ್ಯಾಲೆಟ್ ಪೇಪರ್ ಪದ್ಧತಿಗೆ ಮರಳಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷದತ್ತ ಇದು ಪರೋಕ್ಷ ಟೀಕೆಯಾಗಿದೆ.
ಲಭ್ಯವಿರುವ ಚುನಾವಣಾ ಫಲಿತಾಂಶಗಳ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ನಾಲ್ಕೂ ಸ್ಥಾನಗಳನ್ನು ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ (ಎಸ್ಪಿ) ಮೂರು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಹಾರದಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಕೆಲವು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಜನ ಸುರಾಜ್ ಪಕ್ಷವು ವಿಧಾನ ಪರಿಷತ್ತಿನಲ್ಲಿ ಮೊದಲ ಬಾರಿಗೆ ಖಾತೆ ತೆರೆದಿದೆ. ಆರ್ಜೆಡಿ ಒಂದರಲ್ಲಿ ಗೆಲುವು ಸಾಧಿಸಿದೆ.
ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ನಾಲ್ಕೂ ಸ್ಥಾನ
ಕರ್ನಾಟಕದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಎಲ್ಲ ಸ್ಥಾನಗಳನ್ನೂ ಗೆದ್ದುಕೊಂಡಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ನಾಲ್ಕು ಕ್ಷೇತ್ರಗಳಲ್ಲೂ ಸೋಲು ಅನುಭವಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ ಅವರು ಹಾಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಸೋಲಿಸುವ ಮೂಲಕ ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮತ್ತೂರು ಅವರನ್ನು ಸೋಲಿಸಿ ಗೆಲುವು ಸಾಧಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರರ ಕ್ಷೇತ್ರಗಳೆರಡನ್ನೂ ಬಿಜೆಪಿ ಉಳಿಸಿಕೊಂಡಿತು. ಈ ಮೂಲಕ ರಾಜ್ಯದ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಜಯಭೇರಿ ಬಾರಿಸಿತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಈ ಫಲಿತಾಂಶ ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ 5, ಸಮಾಜವಾದಿ ಪಕ್ಷಕ್ಕೆ 3 ಸ್ಥಾನ
ಉತ್ತರ ಪ್ರದೇಶದ 11 ವಿಧಾನ ಪರಿಷತ್ ಸ್ಥಾನಗಳ ಪೈಕಿ ಲಭ್ಯವಿದ್ದ ಇತ್ತೀಚಿನ ಮಾಹಿತಿಯಂತೆ ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಸಮಾಜವಾದಿ ಪಕ್ಷ ಮೂರು ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಉಳಿದ ಸ್ಥಾನಗಳ ಮತ ಎಣಿಕೆ ಮುಂದುವರಿದಿತ್ತು.
ಬರೇಲಿ–ಮೊರಾದಾಬಾದ್, ಮೀರತ್ ಶಿಕ್ಷಕರ ಕ್ಷೇತ್ರ, ಮೀರತ್ ಪದವೀಧರರ ಕ್ಷೇತ್ರ ಮತ್ತು ಲಖನೌ ಶಿಕ್ಷಕರ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿತು. ಸಮಾಜವಾದಿ ಪಕ್ಷವು ವಾರಾಣಸಿ ಶಿಕ್ಷಕರ ಕ್ಷೇತ್ರ ಮತ್ತು ಆಗ್ರಾ–ಅಲಿಗಢ ಶಿಕ್ಷಕರ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು.
ಬಿಹಾರದಲ್ಲಿ ಜನ ಸುರಾಜ್ಗೆ ಮೊದಲ ಗೆಲುವು
ಬಿಹಾರದಲ್ಲಿ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ಹಂತ ಹಂತವಾಗಿ ಪ್ರಕಟವಾಗುತ್ತಿದ್ದವು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಜನ ಸುರಾಜ್ ಪಕ್ಷವು ಮೊದಲ ಬಾರಿಗೆ ವಿಧಾನ ಪರಿಷತ್ ಸ್ಥಾನವನ್ನು ಗೆದ್ದುಕೊಂಡಿತು.
ತಿರುಹುತ್ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಪ್ರಸಾದ ಸಿಂಗ್ ಅವರು ಪಕ್ಷೇತರ ಅಭ್ಯರ್ಥಿ ಭೂಷಣಕುಮಾರ ಝಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು. ಪಾಟ್ನಾ ಪದವೀಧರರ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ನೀರಜಕುಮಾರ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಅಭ್ಯರ್ಥಿಯನ್ನು ಸೋಲಿಸಿದರು.
ದರಭಂಗಾ ಶಿಕ್ಷಕರ ಕ್ಷೇತ್ರದಲ್ಲಿ ಜನ ಸುರಾಜ್ ಪಕ್ಷದ ಅಭ್ಯರ್ಥಿ ಸುರೇಶಪ್ರಸಾದ ರೈ ಅವರು ಹಾಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಮದನಮೋಹನ ಝಾ ಅವರನ್ನು 324 ಮತಗಳ ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಜನ ಸುರಾಜ್ ಪಕ್ಷವು ಬಿಹಾರ ವಿಧಾನ ಪರಿಷತ್ತಿನಲ್ಲಿ ತನ್ನ ಮೊದಲ ಸ್ಥಾನವನ್ನು ಪಡೆದುಕೊಂಡಿತು.
ಪಾಟ್ನಾ ಶಿಕ್ಷಕರ ಕ್ಷೇತ್ರದಲ್ಲಿ ಆರ್ಜೆಡಿ ಅಭ್ಯರ್ಥಿ ಗೆಲುವು ಸಾಧಿಸಿದರು. ಅವರು ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿಜೆಪಿ ನಾಯಕ ನವಲ್ ಕಿಶೋರ ಯಾದವ್ ಅವರನ್ನು ಸೋಲಿಸಿದರು.ಸರಣ್ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ರಾಹುಲ್ ರಾಜ ಅವರು ಹಾಲಿ ವಿಧಾನ ಪರಿಷತ್ ಸದಸ್ಯ ಅಫಾಕ್ ಅಹ್ಮದ್ ಅವರನ್ನು ಸೋಲಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ