ನವದೆಹಲಿ: ಆಂಧ್ರಪ್ರದೇಶದ ಕರಾವಳಿಗೆ ಬುಧವಾರ ಮುಂಜಾನೆ ಅಪ್ಪಳಿಸಿದ ಪ್ರಬಲ ‘ಅರ್ನಬ್’ ಚಂಡಮಾರುತದ ಭೂಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲು ಆರು ಗಂಟೆಗಳಿಗೂ ಹೆಚ್ಚು ಸಮಯ ಹಿಡಿದಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಬೆಳಗ್ಗೆ 9:50ಕ್ಕೆ ಬಿಡುಗಡೆ ಮಾಡಿದ ಹವಾಮಾನ ವರದಿಯ ಪ್ರಕಾರ, ಭೂಪ್ರವೇಶದ ವೇಳೆ ಮೂರನೇ ಅತ್ಯುನ್ನತ ವರ್ಗದ ‘ಅತಿ ತೀವ್ರ’ ಚಂಡಮಾರುತವಾಗಿರುವ ಅರ್ನಬ್, ಪ್ರಸ್ತುತ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿ ಪ್ರದೇಶಗಳ ಮೇಲೆ ಕೇಂದ್ರೀಕೃತವಾಗಿದೆ.
ಚಂಡಮಾರುತದ ಕೇಂದ್ರ ಭಾಗವೂ ಸಂಪೂರ್ಣವಾಗಿ ಭೂಭಾಗವನ್ನು ಪ್ರವೇಶಿಸಿದ್ದು, ಭೂಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ಐಎಂಡಿ ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯನ್ನು ದಾಟುವ ಸಂದರ್ಭದಲ್ಲಿ ಅರ್ನಬ್ ಚಂಡಮಾರುತವು ಗಂಟೆಗೆ 125ರಿಂದ 135 ಕಿ.ಮೀ. ವೇಗದಲ್ಲಿ ಚಲಿಸಿದ್ದು, ಗಾಳಿಯ ವೇಗವು ಕೆಲವೊಮ್ಮೆ ಗಂಟೆಗೆ 150 ಕಿ.ಮೀ.ವರೆಗೆ ತಲುಪಿದೆ. ಬಳಿಕ ಬೆಳಗ್ಗೆ 8:30ರ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಗಿ ‘ತೀವ್ರ ಚಂಡಮಾರುತ’ದ ಹಂತಕ್ಕೆ ಇಳಿದಿದೆ ಎಂದು ಇಲಾಖೆ ತಿಳಿಸಿದೆ.
1.80 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ
ಅರ್ನಬ್ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ ಮತ್ತು ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಮುನ್ನವೇ 1,80,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಬುಧವಾರ ಬೆಳಗ್ಗೆ 8:30ರವರೆಗೆ ವಿಶಾಖಪಟ್ಟಣಂನಲ್ಲಿ ಗರಿಷ್ಠ 315 ಮಿ.ಮೀ. ಮಳೆಯಾಗಿದೆ. ವಿಜಯನಗರಂನಲ್ಲಿ 301 ಮಿ.ಮೀ., ಅನಕಾಪಲ್ಲಿಯಲ್ಲಿ 275 ಮಿ.ಮೀ., ಶ್ರೀಕಾಕುಳಂನಲ್ಲಿ 257 ಮಿ.ಮೀ. ಹಾಗೂ ಕೃಷ್ಣಾ ಜಿಲ್ಲೆಯಲ್ಲಿ 223 ಮಿ.ಮೀ. ಮಳೆ ದಾಖಲಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಬುಧವಾರ ವಿಶಾಖಪಟ್ಟಣಂ ಮತ್ತು ವಿಜಯವಾಡಕ್ಕೆ ತೆರಳಬೇಕಿದ್ದ ವಿವಿಧ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಒಡಿಶಾದಲ್ಲಿಯೂ ಭಾರಿ ಮಳೆಯಾಗಿದ್ದು, ಕೊರಾಪುಟ್ನಲ್ಲಿ 188 ಮಿ.ಮೀ., ಗಂಜಾಂನಲ್ಲಿ 161 ಮಿ.ಮೀ. ಹಾಗೂ ಗಜಪತಿ ಜಿಲ್ಲೆಯಲ್ಲಿ 135 ಮಿ.ಮೀ. ಮಳೆ ದಾಖಲಾಗಿದೆ.
ವಿದ್ಯುತ್ ವ್ಯತ್ಯಯ, ಮರಗಳು ಧರೆಗೆ
ಆಂಧ್ರಪ್ರದೇಶ ಮತ್ತು ಒಡಿಶಾ ಎರಡೂ ರಾಜ್ಯಗಳಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಆದರೆ, ಚಂಡಮಾರುತದ ಪ್ರಭಾವದಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅನೇಕ ಮರಗಳು ಧರೆಗುರುಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಕೆಲವು ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ಚಂಡಮಾರುತದ ಪರಿಣಾಮ ಬುಧವಾರ ಮತ್ತು ಗುರುವಾರವೂ ಭಾರಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ.
ಚಂಡಮಾರುತಕ್ಕೆ ‘ಅರ್ನಬ್’ ಎಂದು ಹೆಸರಿಟ್ಟಿದ್ದೇಕೆ?
‘ಅರ್ನಬ್’ ಎಂಬ ಹೆಸರನ್ನು ಬಾಂಗ್ಲಾದೇಶ ಪ್ರಸ್ತಾಪಿಸಿತ್ತು. 2020ರಲ್ಲಿ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ಏಷ್ಯಾ ಹಾಗೂ ಪೆಸಿಫಿಕ್ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ಯುಎನ್-ಎಸ್ಕ್ಯಾಪ್) ಉಷ್ಣವಲಯದ ಚಂಡಮಾರುತಗಳ ಸಮಿತಿಯು ಅಂಗೀಕರಿಸಿದ ಅಧಿಕೃತ ಚಂಡಮಾರುತಗಳ ಹೆಸರುಗಳ ಪಟ್ಟಿಯಲ್ಲಿ ಈ ಹೆಸರೂ ಸೇರಿದೆ.
‘ಅರ್ನಬ್’ ಎಂಬ ಪದವು ಬಂಗಾಳಿ ಭಾಷೆಯಲ್ಲಿ ಸಾಮಾನ್ಯವಾಗಿ ಸಾಗರ ಅಥವಾ ಸಮುದ್ರವನ್ನು ಸೂಚಿಸುವ ಅರ್ಥದೊಂದಿಗೆ ಸಂಬಂಧ ಹೊಂದಿದೆ. ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಉಂಟಾಗುವ ಉಷ್ಣವಲಯದ ಚಂಡಮಾರುತಗಳಿಗೆ ಹೆಸರಿಡಲು ಒಟ್ಟು 13 ದೇಶಗಳು ತಮ್ಮ ಹೆಸರುಗಳನ್ನು ಸಲ್ಲಿಸಿವೆ. ಈ ಪಟ್ಟಿಯಲ್ಲಿ ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್, ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ದೇಶಗಳು ಸೇರಿವೆ.
ಪ್ರತಿಯೊಂದು ದೇಶವೂ 13 ಹೆಸರುಗಳನ್ನು ನೀಡಿದ್ದು, ಒಟ್ಟು 169 ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರವನ್ನು ಒಳಗೊಂಡ ಉತ್ತರ ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳು ರೂಪುಗೊಂಡಾಗ ಈ ಹೆಸರುಗಳನ್ನು ನಿಗದಿತ ಕ್ರಮದಲ್ಲಿ ಬಳಸಲಾಗುತ್ತದೆ.
ಚಂಡಮಾರುತಗಳಿಗೆ ಹೆಸರು ನೀಡುವುದರಿಂದ ಪ್ರತಿಯೊಂದು ಹವಾಮಾನ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಗುರುತಿಸಲು, ಅದರ ಚಲನವಲನ ಮತ್ತು ಬೆಳವಣಿಗೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತಗಳು ಸಕ್ರಿಯವಾಗಿರುವ ಸಂದರ್ಭಗಳಲ್ಲಿ ಗೊಂದಲವನ್ನು ತಪ್ಪಿಸಲೂ ಇದು ನೆರವಾಗುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ