ತದಡಿ ದುರಂತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ಮೂವರು ಮೀನುಗಾರರು ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಮೀನುಗಾರಿಕಾ ಸಚಿವ ಕೆ.ಎಸ್. ಬಸವಂತಪ್ಪ ಅವರು ಬುಧವಾರ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಅಲ್ಲದೆ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದಾರೆ. ಘಟನೆಗೆ ಕಾರಣವಾದ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಹಾಗೂ ಮೀನುಗಾರಿಕಾ ಬಂದರುಗಳಲ್ಲಿ ಮೀನಿನ ತ್ಯಾಜ್ಯ ಸ್ವಚ್ಛಗೊಳಿಸುವ ವೇಳೆ ಅಪಾಯಕಾರಿ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದರು.

ತದಡಿ ಮೀನುಗಾರಿಕಾ ಬಂದರಿನಲ್ಲಿ ಮಂಗಳವಾರ ಸಂಜೆ ‘ಕುಜೈಮಾ’ ಹೆಸರಿನ ಮೀನುಗಾರಿಕಾ ಬೋಟ್‌ನಲ್ಲಿ ಹಿಡಿದ ಮೀನುಗಳನ್ನು ಇಳಿಸಿದ ಬಳಿಕ, ‘ಚಮನ್’ ಮೀನಿನ ತ್ಯಾಜ್ಯವನ್ನು ತೆರವುಗೊಳಿಸುವಾಗ ತೊಡಗಿದ್ದ ಮೀನುಗಾರರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಈ ಪೈಕಿ ಮೂವರು ಮೃತಪಟ್ಟಿದ್ದು, ಮತ್ತಿಬ್ಬರು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ಹಿಣಿ ಕಾಗಾಲ್‌ನ ನೌಶಾದ್ (37), ಹುಬ್ಬಣಗಿರಿಯ ಅಮೀನ್ (39) ಹಾಗೂ ವನ್ನಳ್ಳಿಯ ಅಮನ್ ಲಂಗಡೋ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬೆಟಗುಳಿಯ ಯಾಕೂಬ್ (64) ಹಾಗೂ ಸಂತೆಗುಳಿಯ ಖಾದಿರ್ (35) ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ನಾಯ್ಕ ಸೇರಿದಂತೆ ಹಲವು ಮುಖಂಡರು ಹಾಗೂ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ವಿಧಾನ ಪರಿಷತ್ ಚುನಾವಣೆ : ಕರ್ನಾಟಕದಲ್ಲಿ ಅಧಿಕಾರದಲ್ಲಿದ್ರೂ ಶೂನ್ಯ ಸಂಪಾದನೆ ; ಕಾಂಗ್ರೆಸ್‌ಗೆ ಮುಖಭಂಗ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement