ಇಸ್ರೋದಿಂದ ಎನ್‌ವಿಎಸ್‌-03 ಉಪಗ್ರಹ ಉಡಾವಣೆ ಯಶಸ್ವಿ ; ಭಾರತದ ಸ್ವಂತ ಜಿಪಿಎಸ್‌ ವ್ಯವಸ್ಥೆ ‘ನಾವಿಕ್’ಗೆ ಬಲ

ನವದೆಹಲಿ: ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾದ ‘ನಾವಿಕ್’ (NavIC), ಶುಕ್ರವಾರದಂದು ತನ್ನ ಕನಿಷ್ಠ ಕಾರ್ಯಾಚರಣಾ ಸಂರಚನೆಯಾದ ನಾಲ್ಕು ಉಪಗ್ರಹಗಳ ಇರುವಿಕೆಯ ಸ್ಥಿತಿಯನ್ನು ಮರಳಿ ಪಡೆದುಕೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಎನ್‌ವಿಎಸ್‌-03 (NVS-03) ನ್ಯಾವಿಗೇಷನ್ ಉಪಗ್ರಹವನ್ನು ಜಿಎಸ್‌ಎಲ್‌ವಿ (GSLV) ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಇದರಿಂದ ನಾವಿಕ್ ವ್ಯವಸ್ಥೆಯ ಕಾರ್ಯಾಚರಣೆಗೆ ಅಗತ್ಯವಿರುವ ನಾಲ್ಕು ಉಪಗ್ರಹಗಳ ಸಾಮರ್ಥ್ಯ ಮರುಸ್ಥಾಪನೆಯಾಗಿದೆ. ಉಡಾವಣೆಗೊಂಡ ಉಪಗ್ರಹವನ್ನು ನಿಗದಿತ  ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ.
ಎರಡನೇ ತಲೆಮಾರಿನ ಎನ್‌ವಿಎಸ್‌-03 ಉಪಗ್ರಹವು ಸ್ವದೇಶಿ ಹಾಗೂ ಹೊರಗಿನಿಂದ ಖರೀದಿಸಲಾದ ಪರಮಾಣು ಗಡಿಯಾರಗಳನ್ನು ಹೊಂದಿದೆ. ಈ ಉಪಗ್ರಹದಿಂದ ನಾಗರಿಕ ಬಳಕೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನುಕೂಲವಾಗಲಿದೆ. ರೈಲುಗಳು, ವಾಹನಗಳು ಹಾಗೂ ಸರಕು ಸಾಗಣೆ ಹಡಗುಗಳ ಚಲನವಲನವನ್ನು ನೈಜ ಸಮಯದಲ್ಲಿ ಪತ್ತೆಹಚ್ಚುವಂತಹ (Real-time Tracking) ಕಾರ್ಯಗಳಿಗೆ ನಾವಿಕ್ ವ್ಯವಸ್ಥೆಯನ್ನು ಬಳಸಬಹುದಾಗಿದೆ. ನಾವಿಕ್ (NavIC-Navigation with Indian Constellation) ಎಂದರೆ ಭಾರತದ ಸ್ವಂತ ಉಪಗ್ರಹ ಆಧಾರಿತ ದಿಕ್ಸೂಚಿ ಮತ್ತು ಸ್ಥಳನಿರ್ಧಾರ ವ್ಯವಸ್ಥೆ. ಇದು ಅಮೆರಿಕದ ಜಿಪಿಎಸ್‌ (GPS) ವ್ಯವಸ್ಥೆಗೆ ಪರ್ಯಾಯವಾಗಿ ಭಾರತ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ.
ಭಾರತದ ‘ಒಂದು ರಾಷ್ಟ್ರ, ಒಂದು ಸಮಯ’ (One Nation, One Time) ಯೋಜನೆಯಲ್ಲಿಯೂ ನಾವಿಕ್ ಉಪಗ್ರಹ ಸಮೂಹ ಪ್ರಮುಖ ಪಾತ್ರ ವಹಿಸಲಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಯಶಸ್ವಿ ಉಡಾವಣೆಯ ಬಳಿಕ ತಿಳಿಸಿದ್ದಾರೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎನ್‌ವಿಎಸ್‌-01 ಸೇರಿದಂತೆ ಮೂರು ನ್ಯಾವಿಗೇಷನ್ ಉಪಗ್ರಹಗಳಿಗೆ ಎನ್‌ವಿಎಸ್‌-03 ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಭಾರತೀಯ ಪ್ರಮಾಣಿತ ಸಮಯ (IST) ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇತ್ತೀಚೆಗೆ ಸರ್ಕಾರವು ‘ಲೀಗಲ್ ಮೆಟ್ರಾಲಜಿ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಿಯಮಗಳು, 2026’ ಅನ್ನು ಅಧಿಸೂಚಿಸಿದೆ. ಈ ಹಿನ್ನೆಲೆಯಲ್ಲಿ, ದೇಶಾದ್ಯಂತ ಏಕರೂಪದ ಭಾರತೀಯ ಪ್ರಮಾಣಿತ ಸಮಯ (IST) ವ್ಯವಸ್ಥೆಯನ್ನು ಬಲಪಡಿಸಲು ಈ ಉಪಗ್ರಹ ಮಹತ್ವದ ಕೊಡುಗೆ ನೀಡಲಿದೆ.
ಭಾರತದ ಸ್ವಂತ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾಗಿರುವ ನಾವಿಕ್, ಅಮೆರಿಕದ ಜಿಪಿಎಸ್‌ಗೆ (GPS) ಪರ್ಯಾಯವಾಗಿ ರೂಪುಗೊಂಡಿದೆ. ಆದರೆ ಜಿಪಿಎಸ್‌ನಂತೆ ಜಾಗತಿಕ ವ್ಯಾಪ್ತಿ ಹೊಂದಿರದೆ, ಭಾರತದ ಭೂಪ್ರದೇಶ ಹಾಗೂ ದೇಶದ ಗಡಿಯಾಚೆಗೆ ಸುಮಾರು 1,500 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ಒದಗಿಸುವ ಪ್ರಾದೇಶಿಕ ವ್ಯವಸ್ಥೆಯಾಗಿದೆ.
24 ಗಂಟೆಗಳ ಕೌಂಟ್‌ಡೌನ್ ಬಳಿಕ ಯಶಸ್ವಿ ಉಡಾವಣೆ
ಶುಕ್ರವಾರ ರಾತ್ರಿ 11:51ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ 50 ಮೀಟರ್ ಎತ್ತರದ ಜಿಎಸ್‌ಎಲ್‌ವಿ ರಾಕೆಟ್ ಎನ್‌ವಿಎಸ್‌-03 ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿತು. ಇದಕ್ಕೂ ಮುನ್ನ 24 ಗಂಟೆಗಳ ಕೌಂಟ್‌ಡೌನ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು.
ಉಡಾವಣೆಯಾದ ಸುಮಾರು 18 ನಿಮಿಷಗಳ ಬಳಿಕ ರಾಕೆಟ್‌ನ ಮೂರು ಹಂತಗಳ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು. ಅದರಲ್ಲೂ ಸಂಕೀರ್ಣವಾಗಿರುವ ಕ್ರಯೋಜನಿಕ್ ಮೇಲಿನ ಹಂತದ ಕಾರ್ಯಾಚರಣೆ ನಿರೀಕ್ಷೆಯಂತೆ ನಡೆದಿದ್ದು, ಮುಖ್ಯ ಉಪಗ್ರಹವು ರಾಕೆಟ್‌ನಿಂದ ಬೇರ್ಪಟ್ಟು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು.
ಇದು ಜಿಎಸ್‌ಎಲ್‌ವಿ ರಾಕೆಟ್‌ನ 20ನೇ ಉಡಾವಣೆಯಾಗಿದ್ದು, ಎನ್‌ವಿಎಸ್‌-03 ಉಪಗ್ರಹವನ್ನು ನಿಗದಿತ ಕಕ್ಷೆಗೆ ನಿಖರವಾಗಿ ಸೇರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ನಾವಿಕ್: ಭಾರತದ ಕಾರ್ಯತಂತ್ರದ ರಾಷ್ಟ್ರೀಯ ಆಸ್ತಿ
ಉಡಾವಣೆಯ ಯಶಸ್ಸಿನ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, ಈಗಾಗಲೇ ಎನ್‌ವಿಎಸ್‌-01 ಸೇರಿದಂತೆ ಮೂರು ಉಪಗ್ರಹಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಎನ್‌ವಿಎಸ್‌-03 ಸೇರ್ಪಡೆಯೊಂದಿಗೆ ನಾವಿಕ್ ವ್ಯವಸ್ಥೆಯ ಸ್ಥಾನ ನಿರ್ಧಾರ, ನ್ಯಾವಿಗೇಷನ್ ಮತ್ತು ಸಮಯ (Position, Navigation and Timing – PNT) ಸೇವೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ಹೇಳಿದರು.
ನಾವಿಕ್ (Navigation with Indian Constellation) ಭಾರತದ ಕಾರ್ಯತಂತ್ರದ ರಾಷ್ಟ್ರೀಯ ಆಸ್ತಿಯಾಗಿದೆ. ಇದು ರೈಲುಗಳು, ವಾಹನಗಳು ಮತ್ತು ಸರಕು ಸಾಗಣೆ ಹಡಗುಗಳ ನೈಜ ಸಮಯದ ಚಲನವಲನ ಪತ್ತೆ ಸೇರಿದಂತೆ ನಾಗರಿಕ ಬಳಕೆಗೂ ಇದು ನೆರವಾಗಲಿದೆ ಎಂದು ಅವರು ವಿವರಿಸಿದರು.
‘ಒಂದು ರಾಷ್ಟ್ರ, ಒಂದು ಸಮಯ’ ಯೋಜನೆಯ ಪ್ರಮುಖ ಭಾಗವಾಗಿ ನಾವಿಕ್ ಉಪಗ್ರಹ ಸಮೂಹ ಕಾರ್ಯನಿರ್ವಹಿಸಲಿದೆ ಎಂದ ಅವರು, ಈಗಾಗಲೇ ಸ್ವದೇಶಿ ನಿರ್ಮಿತ ಪರಮಾಣು ಗಡಿಯಾರವೊಂದನ್ನು ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ಉಡಾವಣೆ ಮಾಡಲಾಗಿದ್ದ ಇಒಎಸ್‌-05 (EOS-05) ಭೂಚಿತ್ರಣ ಉಪಗ್ರಹವೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದರಿಂದ ಬಾಹ್ಯಾಕಾಶ ಸಂಸ್ಥೆಗೆ ಅತ್ಯುತ್ತಮ ದತ್ತಾಂಶಗಳು ಲಭಿಸುತ್ತಿವೆ ಎಂದು ನಾರಾಯಣನ್ ಮಾಹಿತಿ ನೀಡಿದರು.
ಎನ್‌ವಿಎಸ್‌-03 ಉಡಾವಣೆಯಲ್ಲಿ ರಾಕೆಟ್‌ನ ಎಲ್ಲ ವ್ಯವಸ್ಥೆಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿವೆ. ಉಪಗ್ರಹವನ್ನು ನಿಗದಿತ ಕಕ್ಷೆಗೆ ನಿಖರವಾಗಿ ಸೇರಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದು ಅವರು ಹೇಳಿದರು.
ಅತ್ಯಂತ ಕಡಿಮೆ ಅವಧಿಯಲ್ಲಿಉಡಾವಣೆ
ಎನ್‌ವಿಎಸ್‌-03 ಉಡಾವಣೆಯ ಮತ್ತೊಂದು ವಿಶೇಷವೆಂದರೆ, ಸತತ ಎರಡು ಜಿಎಸ್‌ಎಲ್‌ವಿ ಉಡಾವಣೆಗಳ ನಡುವಿನ ಅವಧಿಯನ್ನು ಕೇವಲ 56 ದಿನಗಳಿಗೆ ಇಳಿಸಿರುವುದು. ಇದು ಜಿಎಸ್‌ಎಲ್‌ವಿ ಕಾರ್ಯಾಚರಣೆಗಳಲ್ಲಿನ ಅತ್ಯಂತ ಕಡಿಮೆ ಅವಧಿಯಾಗಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.
ಈ ಮಹತ್ವದ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳು, ಇಡೀ ತಂಡ, ಕೈಗಾರಿಕಾ ಪಾಲುದಾರರು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಅವರು ಅಭಿನಂದಿಸಿದರು. ಇಸ್ರೋ ಬಜೆಟ್‌ನ ಸುಮಾರು ಶೇ.80ರಷ್ಟು ಮೊತ್ತವನ್ನು ಭಾರತೀಯ ಕೈಗಾರಿಕೆಗಳಲ್ಲಿಯೇ ಹೂಡಿಕೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.
32.5 ಡಿಗ್ರಿ ಪೂರ್ವ ರೇಖಾಂಶದ ಕಕ್ಷೆಗೆ ತಲುಪಲಿರುವ ಉಪಗ್ರಹ
ಪ್ರಸ್ತುತ ಎನ್‌ವಿಎಸ್‌-03 ಉಪಗ್ರಹವನ್ನು ಸೇರಿಸಿರುವ ವರ್ಗಾವಣೆ ಕಕ್ಷೆಯು ಭೂಮಿಗೆ ಅತ್ಯಂತ ಸಮೀಪದ ಬಿಂದು (Perigee) 170 ಕಿ.ಮೀ. ಹಾಗೂ ಭೂಮಿಯಿಂದ ಅತ್ಯಂತ ದೂರದ ಬಿಂದು (Apogee) 37,023 ಕಿ.ಮೀ. ಎತ್ತರವನ್ನು ಹೊಂದಿದೆ.
2,232 ಕೆ.ಜಿ. ತೂಕದ ಈ ಉಪಗ್ರಹವು ತನ್ನಲ್ಲಿರುವ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ಅಂತಿಮವಾಗಿ ಭೂಸ್ಥಿರ ಕಕ್ಷೆಯಲ್ಲಿರುವ 32.5 ಡಿಗ್ರಿ ಪೂರ್ವ ರೇಖಾಂಶದ ಸ್ಥಾನವನ್ನು ತಲುಪಲಿದೆ.
ಉಪಗ್ರಹದ ಪ್ರೊಪಲ್ಷನ್ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಈ ಬಾರಿ ವಿಶೇಷ ಮುನ್ನೆಚ್ಚರಿಕೆ ಕ್ರಮವೊಂದನ್ನು ಅನುಸರಿಸಿದೆ. ಈ ಉಪಗ್ರಹವನ್ನು ಉಡಾವಣೆ ಮಾಡುವಾಗಲೇ ಅದರ ಪೈರೋಟೆಕ್ನಿಕ್ ಕವಾಟಗಳನ್ನು (Pyrotechnic Valves) ತೆರೆದ ಸ್ಥಿತಿಯಲ್ಲಿ ಇರಿಸಲಾಗಿತ್ತು. ಇಸ್ರೋ ಇಂತಹ ಸುರಕ್ಷತಾ ಕ್ರಮವನ್ನು ಇದೇ ಮೊದಲ ಬಾರಿಗೆ ಅಳವಡಿಸಿಕೊಂಡಿದೆ.
ಸ್ವದೇಶಿ ನಿರ್ಮಿತ ರುಬಿಡಿಯಂ ಪರಮಾಣು ಗಡಿಯಾರವನ್ನು ಹೊಂದಿರುವ ಎನ್‌ವಿಎಸ್‌-03 ಉಪಗ್ರಹವು ನಾವಿಕ್ ವ್ಯವಸ್ಥೆಯ ಪ್ರಮುಖ ಸೇರ್ಪಡೆಯಾಗಿದೆ. ಇದು ಎಲ್‌1 (L1), ಎಲ್‌5 (L5) ಹಾಗೂ ಎಸ್‌ (S) ಬ್ಯಾಂಡ್‌ಗಳಲ್ಲಿ ಸಂಕೇತಗಳನ್ನು ರವಾನಿಸಲಿದೆ. ಇದರಿಂದ ಭಾರತದ ಪ್ರಾದೇಶಿಕ ಸ್ಥಾನ ನಿರ್ಧಾರ ಸೇವೆಗಳ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement