ಕಾರವಾರ: ಮೀನುಗಾರಿಕಾ ಬೋಟ್‌ನಲ್ಲಿ ಉಸಿರುಗಟ್ಟಿ ಇಬ್ಬರು ಮೀನುಗಾರರು ಸಾವು

ಕಾರವಾರ: ಮೀನುಗಾರಿಕಾ ಬೋಟ್‌ನಲ್ಲಿ ಹಿಡಿದ ಮೀನುಗಳಿಂದ ಹೊರಸೂಸಿದ ವಿಷಾನಿಲ ಸೇವನೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುದಗಾ ಬಂದರಿನಲ್ಲಿ ಸಂಭವಿಸಿದೆ.
ಅಂಕೋಲಾ ತಾಲೂಕಿನ ಬೇಲೆಕೇರಿಗೆ ಸೇರಿದ ಮೂಕಾಂಬಿಕಾ ಮೀನುಗಾರಿಕಾ ಬೋಟ್‌ನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಮೃತರನ್ನು ಒಡಿಶಾ ಮೂಲದ ಪುರಂದರ ಬಿಸರಾ (21) ಹಾಗೂ ಆಕಾಶ (24) ಎಂದು ಗುರುತಿಸಲಾಗಿದೆ. ಬೋಟ್‌ನಲ್ಲಿದ್ದ ಇತರ ಇಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಕಾಂಬಿಕಾ ಬೋಟ್‌ನಲ್ಲಿ ಮೀನುಗಾರಿಕೆ ನಡೆಸಿ ‘ಚಮನ್’ ಮೀನುಗಳನ್ನು ಹಿಡಿದು ತರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೋಟ್‌ನಲ್ಲಿದ್ದ ಮೀನುಗಳಿಂದ ಹೊರಸೂಸಿದ ವಿಷಾನಿಲದಿಂದ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೆಲದಿನಗಳ ಹಿಂದಷ್ಟೇ ಗೋಕರ್ಣ ಸಮೀಪದ ತದಡಿ ಬಂದರಿನಲ್ಲೂ ಮೀನುಗಾರಿಕಾ ಬೋಟ್‌ನಲ್ಲಿ ಇದೇ ರೀತಿ ‘ಚಮನ್’ ಮೀನಿನಿಂದ ಹೊರಸೂಸಿದ ವಿಷಾನಿಲದಿಂದ ಮೂವರು ಮೀನುಗಾರರು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆ ಘಟನೆ ಸಂಭವಿಸಿದ ನಾಲ್ಕು ದಿನಗಳ ಅಂತರದಲ್ಲೇ ಕಾರವಾರದ ಮುದಗಾ ಬಂದರಿನಲ್ಲಿ ಮತ್ತೊಂದು ಘಟನೆ ನಡೆದಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಾರದೊಳಗೆ ಮೀನುಗಾರಿಕಾ ಬೋಟ್‌ಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಐವರು ಮೀನುಗಾರರು ಮೃತಪಟ್ಟಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ. ಸರಣಿ ದುರಂತಗಳು ಮೀನುಗಾರಿಕಾ ಬೋಟ್‌ಗಳಲ್ಲಿ ಕಾರ್ಮಿಕರ ಸುರಕ್ಷತೆ, ಮೀನುಗಳಿಂದ ವಿಷಾನಿಲ ಉತ್ಪತ್ತಿಯಾಗುವ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಬೋಟ್‌ಗಳಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸುವ ಅಗತ್ಯದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿವೆ.

ಪ್ರಮುಖ ಸುದ್ದಿ :-   ವಿಡಿಯೋ | ಅಂಕೋಲಾ : ಹಾರವಾಡ ಕಡಲ ತೀರಕ್ಕೆ ಬಂದು ಬಿದ್ದ ರಾಶಿರಾಶಿ ತಾರ್ಲೆ ಮೀನುಗಳು ; ಮುಗಿಬಿದ್ದ ಜನರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement