ಬೆಂಗಳೂರು: ರಾಜ್ಯದ ಜನತೆಗೆ ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಈಗ ನಂದಿನಿ ಮೊಸರಿನ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ. ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಶುಕ್ರವಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ.
ಹೊಸ ದರದ ಪ್ರಕಾರ, ಅರ್ಧ ಲೀಟರ್ ಮೊಸರಿನ ಬೆಲೆ 28 ರೂ.ನಿಂದ 34 ರೂ.ಗೆ ಏರಿಕೆಯಾಗಿದ್ದರೆ, ಒಂದು ಲೀಟರ್ ಮೊಸರಿನ ದರ 54 ರೂ.ನಿಂದ 68 ರೂ.ಗೆ ಹೆಚ್ಚಳವಾಗಿದೆ. ಅಂದರೆ, ಅರ್ಧ ಲೀಟರ್ ಮೊಸರಿಗೆ 6 ರೂ. ಹಾಗೂ ಒಂದು ಲೀಟರ್ ಮೊಸರಿಗೆ 14 ರೂ. ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.
ಇದಲ್ಲದೆ ವಿವಿಧ ಮಾದರಿಯ ಹಾಲಿನ ದರದಲ್ಲಿಯೂ ಏರಿಕೆ ಮಾಡಲಾಗಿದೆ. ಟೋನ್ಡ್ ಹಾಲಿನ ಬೆಲೆ 46 ರೂ.ನಿಂದ 54 ರೂ.ಗೆ, ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ 47 ರೂ.ನಿಂದ 56 ರೂ.ಗೆ ಹೆಚ್ಚಿಸಲಾಗಿದೆ.
ಹೋಮೋಜಿನೈಸ್ಡ್ ಹಸುವಿನ ಹಾಲಿನ ಬೆಲೆ 50 ರೂ.ನಿಂದ 58 ರೂ.ಗೆ ಏರಿಕೆಯಾಗಿದ್ದರೆ, ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ದರ ತಲಾ 52 ರೂ.ನಿಂದ 64 ರೂ.ಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53 ರೂ.ನಿಂದ 65 ರೂ.ಗೆ ಏರಿಕೆಯಾಗಿದೆ.
ಕೆಎಂಎಫ್ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಿಸಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹಾಲಿನ ದರ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಸರ್ಕಾರವನ್ನು ಆಗ್ರಹಿಸಿದ್ದವು. ಈ ಬಗ್ಗೆ ಕೆಎಂಎಫ್ ಕೂಡ ಸರ್ಕಾರಕ್ಕೆ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿತ್ತು.ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್ಗೆ 33 ರೂಪಾಯಿಯಿಂದ 35 ರೂಪಾಯಿ ನೀಡಲಾಗುತ್ತಿದ್ದು, ಆ ಮೊತ್ತ 40ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ದರ ಏರಿಕೆ
1 ಲೀಟರ್ ಟೋನ್ಡ್ ಹಾಲು (ನೀಲಿ ಪ್ಯಾಕೆಟ್): 46ರಿಂದ 54 ರೂ.ಗೆ ಏರಿಕೆ
1 ಲೀಟರ್ ಹೋಮೋಜಿನೈಸ್ಡ್ ಟೋನ್ಡ್ ಹಾಲು (ಹಸಿರು ಪ್ಯಾಕೆಟ್) : 47ರಿಂದ 55 ರೂ.ಗೆ ಏರಿಕೆ
1 ಲೀಟರ್ ಹೋಮೋಜಿನೈಸ್ಡ್ ಹಸುವಿನ ಹಾಲು: 50ರಿಂದ 58 ರೂ.ಗೆ ಏರಿಕೆ
1 ಲೀಟರ್ ಶುಭಂ ಹಾಲು (ಕಿತ್ತಳೆ ಪ್ಯಾಕೆಟ್): 52 ರಿಂದ 60 ರೂ.ಗೆ ಏರಿಕೆ
1 ಲೀಟರ್ ಸಮೃದ್ಧಿ ಹಾಲು (ನೇರಳೆ ಪ್ಯಾಕೆಟ್) : 55ರಿಂದ 64 ರೂ.ಗೆ ಏರಿಕೆ
1 ಲೀಟರ್ ಸ್ಪೆಷಲ್ ಹಾಲು: 52ರಿಂದ 60 ರೂ.ಗೆ ಏರಿಕೆ
1 ಲೀಟರ್ ಡಬಲ್ ಟೋನ್ಡ್ ಹಾಲು: 43 ರಿಂದ 51 ರೂ.ಗೆ ಏರಿಕೆ
ಅರ್ಧ ಲೀಟರ್ ಮೊಸರು : 28 ರೂ.ನಿಂದ 34 ರೂ.ಗೆ ಏರಿಕೆ
ಒಂದು ಲೀಟರ್ ಮೊಸರು: ₹54 ರಿಂದ ₹68 ಕ್ಕೆ ಏರಿಕೆ


ನಿಮ್ಮ ಕಾಮೆಂಟ್ ಬರೆಯಿರಿ