ಬೆಂಗಳೂರು: ನಗರದ ಪಂಚತಾರಾ ಹೋಟೆಲ್ನ ಈಜುಕೊಳದಲ್ಲಿ ಇಬ್ಬರು ಪ್ರಜೆಗಳು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಇಬ್ಬರನ್ನು ರಕ್ಷಿಸಲು ಮುಂದಾದ ಅಮೆರಿಕದ ಪ್ರಜೆ ಹಾಗೂ ಹೋಟೆಲ್ನ ಸಿಬ್ಬಂದಿ ಗಾಯಗೊಂಡಿದ್ದಾರೆಎಂದು ಹೇಳಲಾಗಿದೆ.
ನಗರದ ಐಷಾರಾಮಿ ಪಂಚತಾರಾ ಹೋಟೆಲ್ ಕಾನ್ರಾಡ್ನಲ್ಲಿ (Conrad Hotel) ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಜರ್ಮನಿ ಮೂಲದ 57 ವರ್ಷದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ (Alexander Maximilian Theiss) ಹಾಗೂ ಸ್ಲೊವಾಕಿಯಾ ಮೂಲದ 45 ವರ್ಷದ ಜುರಾಜ್ ಹೋರ್ವತ್ (Juraj Horvat) ಎಂದು ಗುರುತಿಸಲಾಗಿದೆ. ಇಬ್ಬರೂ ಹೋಟೆಲ್ನಲ್ಲಿ ತಂಗಿದ್ದರು.
ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಅವರು ಲುಫ್ತಾನ್ಸಾ (Lufthansa) ವಿಮಾನಯಾನ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜುರಾಜ್ ಹೋರ್ವತ್ ಅವರು ಜಾಗತಿಕ ತಂತ್ರಜ್ಞಾನ ಸಂಸ್ಥೆ ಐಬಿಎಂ (IBM)ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು.
ಹೋಟೆಲ್ನ ಮೂರನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಶುಕ್ರವಾರ ಸಂಜೆ ಇಬ್ಬರೂ ಈಜಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಅವರನ್ನು ರಕ್ಷಿಸಲು ಮುಂದಾದ ಹೋಟೆಲ್ನಲ್ಲಿ ತಂಗಿದ್ದ 41 ವರ್ಷದ ಅಮೆರಿಕದ ಪ್ರಜೆ ಮ್ಯಾಥ್ಯೂ ಡಿಸಾಂಟಿಸ್ (Mathew Desantis) ಹಾಗೂ ಹೋಟೆಲ್ನ ಈಜುಕೊಳದ ಅಟೆಂಡರ್ ಆಗಿರುವ 28 ವರ್ಷದ ರಾಹುಲ್ ತಿವಾರಿ ಅವರಿಗೂ ಗಾಯಗಳಾಗಿವೆ.ಗಾಯಾಳುಗಳಿಬ್ಬರನ್ನೂ ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ