ಮುಂಬೈ: ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್ ಅವರು ಸಲ್ಲಿಸಿದ ಬೇಷರತ್ ಕ್ಷಮಾಪಣೆಯನ್ನು ಬಾಂಬೆ ಹೈಕೋರ್ಟ್ ಸೋಮವಾರ (ನವೆಂಬರ್ 2) ಅಂಗೀಕರಿಸಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಭರವಸೆಯನ್ನು ನ್ಯಾಯಾಲಯಕ್ಕೆ ನೀಡಿದ ಹಿನ್ನೆಲೆಯಲ್ಲಿ ಅವರ ಕ್ಷಮಾಪಣೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿತು.
ಮುಖ್ಯ ನ್ಯಾಯಮೂರ್ತಿ ಮಹೇಶಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಮುಂಬೈನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (Foreigners Regional Registration Office–FRRO) ಇಮ್ರಾನ್ ಖಾನ್ ಅವರಿಗೆ ನೀಡಿದ್ದ ‘ಭಾರತ ತೊರೆಯುವಂತೆ ನೀಡಿದ್ದ ನೋಟಿಸ್’ (Leave India Notice) ಜಾರಿಗೊಳಿಸುವುದನ್ನು ತಡೆಹಿಡಿದಿದ್ದ ಮಧ್ಯಂತರ ಆದೇಶದ ಅವಧಿಯನ್ನೂ ವಿಸ್ತರಿಸಿದೆ ಎಂದು ಲಾ ಬೀಟ್ ವರದಿ ಮಾಡಿದೆ.
ವರದಿ ಪ್ರಕಾರ, ನೋಟಿಸ್ಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರಿಗೆ ತಮ್ಮ ನಿಲುವು ಹಾಗೂ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿದ ಬಳಿಕ ಎಫ್ಆರ್ಆರ್ಒ ಈ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ನ್ಯಾಯಾಲಯದ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ. ಅಲ್ಲಿಯವರೆಗೆ ಅವರು ಭಾರತ ತೊರೆಯುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ, ಸಾಗರೋತ್ತರ ಭಾರತೀಯ ನಾಗರಿಕತ್ವ (Overseas Citizen of India–OCI) ಹೊಂದಿರುವವರನ್ನು ಭಾರತೀಯ ನಾಗರಿಕರಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ನಾಗರಿಕರಿಗೆ ಲಭ್ಯವಿರುವ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕು ಒಸಿಐ ಕಾರ್ಡ್ದಾರರಿಗೆ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಇಮ್ರಾನ್ ಖಾನ್ ಹಲವು ವರ್ಷಗಳಿಂದ ಭಾರತದಲ್ಲಿಯೇ ವಾಸಿಸುತ್ತಿದ್ದು, ಇಲ್ಲಿಯೇ ಕೆಲಸ ಮಾಡುತ್ತಾ ಗುರುತಿಸಿಕೊಂಡಿದ್ದಾರೆ ಎಂಬ ಅಂಶವನ್ನೂ ನ್ಯಾಯಪೀಠ ಗಮನಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿಪಡಿಸಲಾಗಿದೆ.
ಇಮ್ರಾನ್ ಖಾನ್ ಅವರು ಎಫ್ಆರ್ಆರ್ಒ ನೀಡಿದ್ದ ಭಾರತ ತೊರೆಯುವ ನೋಟಿಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಅವರಿಗೆ ನೋಟಿಸ್ನಲ್ಲಿ ಸೂಚಿಸಲಾಗಿತ್ತು. ಹಿಂದಿನ ವಿಚಾರಣೆ ವೇಳೆ, ನವೆಂಬರ್ 2ರವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಎಫ್ಆರ್ಆರ್ಒ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.
‘ನೀವು ಅಲ್ಲಿ ಹೋಗಿದ್ದಾದರೂ ಏಕೆ?’ ಎಂದು ಪ್ರಶ್ನಿಸಿದ ಹೈಕೋರ್ಟ್
ವಿಚಾರಣೆ ವೇಳೆ, ಭಾರತದಲ್ಲಿ ಮತದಾನದ ಹಕ್ಕೇ ಇಲ್ಲದ ಒಸಿಐ ಕಾರ್ಡ್ದಾರರಾಗಿರುವ ಇಮ್ರಾನ್ ಖಾನ್ ಅವರು ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇಕೆ ಎಂದು ನ್ಯಾಯಪೀಠ ಪ್ರಶ್ನಿಸಿತು.
ಪ್ರತಿಭಟನೆಯಲ್ಲಿ ಭಾಗವಹಿಸುವ ಉದ್ದೇಶದಿಂದಲೇ ಅವರು ಅಲ್ಲಿಗೆ ತೆರಳಿದ್ದರೇ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ತೆರಳಿದ್ದರೇ ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಸೂಚಿಸಿತು. ಪ್ರತಿಭಟನೆಯ ಆಯೋಜಕರು ಅಥವಾ ಪ್ರತಿಭಟನಾಕಾರರ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿಸ್ಸಂದಿಗ್ಧವಾಗಿ ಹೇಳಬೇಕೆಂದೂ ತಿಳಿಸಿತು.
ಒಸಿಐ ಕಾರ್ಡ್ದಾರರು ಭಾರತೀಯ ನಾಗರಿಕರಿಗೆ ಇರುವ ಹಕ್ಕುಗಳನ್ನು ತಮಗೂ ನೀಡಬೇಕೆಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು. ಭವಿಷ್ಯದಲ್ಲಿ ಇಂತಹ ಯಾವುದೇ ಪ್ರತಿಭಟನೆ ಅಥವಾ ಆಂದೋಲನಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಭರವಸೆಯನ್ನು ಸಲ್ಲಿಸುವಂತೆ ಸೂಚಿಸಿತು. ಆದರೆ, ಕೇವಲ ಭರವಸೆ ನೀಡಿದರೆ ಸಾಲದು, ಅದಕ್ಕೂ ಮೊದಲು ಬೇಷರತ್ ಕ್ಷಮಾಪಣೆ ಸಲ್ಲಿಸಬೇಕು ಎಂದು ಹೇಳಿತು.
ಎಸ್ಐಆರ್ ಪ್ರಕ್ರಿಯೆಯಿಂದ ಇಮ್ರಾನ್ ಖಾನ್ ಅವರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗಿಲ್ಲ. ಹೀಗಿರುವಾಗ ಅವರು ಆ ಪ್ರತಿಭಟನೆಯಲ್ಲಿ ಭಾಗವಹಿಸುವ ಅಗತ್ಯವೇ ಇರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ವಿದೇಶವೊಂದರಲ್ಲಿ ವಾಸಿಸುವ ವ್ಯಕ್ತಿ ಅಲ್ಲಿನ ದೇಶದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿಗಳು ಮತ್ತೊಂದು ಸಂದರ್ಭದಲ್ಲಿ ಹೇಳಿದರು. ಒಸಿಐ ಕಾರ್ಡ್ದಾರರಾಗಿ ಭಾರತದಲ್ಲಿ ನೆಲೆಸಿರುವ ಇಮ್ರಾನ್ ಖಾನ್ ಅವರು ಭಾರತೀಯ ನಾಗರಿಕರಿಗೆ ಲಭ್ಯವಿರುವ ಹಕ್ಕುಗಳನ್ನು ತಮಗೂ ಅನ್ವಯಿಸಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಇಮ್ರಾನ್ ಖಾನ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವೆಂಕಟೇಶ ಧೋಂಡ್, ತಮ್ಮ ಕಕ್ಷಿದಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಕರೆಯಲಾಗಿಲ್ಲ ಅಥವಾ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಪ್ರತಿಭಟನೆಯ ಆಯೋಜಕರು ಅಥವಾ ಪ್ರತಿಭಟನಾಕಾರರೊಂದಿಗೆ ಇಮ್ರಾನ್ ಖಾನ್ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದೂ ಸ್ಪಷ್ಟಪಡಿಸಿದರು.
ಇಮ್ರಾನ್ ಖಾನ್ ತಮ್ಮ ಜೀವನದ ಬಹುತೇಕ ಸಮಯವನ್ನು ಭಾರತದಲ್ಲಿಯೇ ಕಳೆದಿದ್ದಾರೆ. ಅವರು ಜನಿಸಿದ್ದು ಅಮೆರಿಕದಲ್ಲಿ. ಅಲ್ಲಿನ ಮೊದಲ ಎರಡು ವರ್ಷಗಳನ್ನು ಹೊರತುಪಡಿಸಿದರೆ ಉಳಿದ ಜೀವನ ಭಾರತದಲ್ಲಿಯೇ ಕಳೆದಿದ್ದಾರೆ ಎಂದು ಧೋಂಡ್ ತಿಳಿಸಿದರು. 2006ರಿಂದ ಇಮ್ರಾನ್ ಖಾನ್ ಒಸಿಐ ಸ್ಥಾನಮಾನ ಹೊಂದಿದ್ದಾರೆ. ಅದಕ್ಕೂ ಮೊದಲು ಅವರಿಗೆ ಭಾರತೀಯ ಮೂಲದ ವ್ಯಕ್ತಿ (Person of Indian Origin–PIO) ಸ್ಥಾನಮಾನ ನೀಡಲಾಗಿತ್ತು ಎಂದೂ ನ್ಯಾಯಾಲಯದ ಗಮನಕ್ಕೆ ತಂದರು.
ಆದಾಗ್ಯೂ, ಸಾರ್ವಜನಿಕ ವ್ಯಕ್ತಿಯಾಗಿರುವ ಇಮ್ರಾನ್ ಖಾನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇಕೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಧೋಂಡ್, ಭವಿಷ್ಯದಲ್ಲಿ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಭರವಸೆ ನೀಡಲು ತಮ್ಮ ಕಕ್ಷಿದಾರರು ಸಿದ್ಧರಿದ್ದಾರೆ ಎಂದರು.
ಆದರೆ, ನ್ಯಾಯಪೀಠ ಬೇಷರತ್ ಕ್ಷಮಾಪಣೆಯ ಅಗತ್ಯವನ್ನು ಒತ್ತಿಹೇಳಿತು. ಒಸಿಐ ಕಾರ್ಡ್ದಾರರಾಗಿದ್ದರೂ ಭಾರತದಲ್ಲಿ ಗುರುತಿಸಿಕೊಂಡು ಗೌರವ ಪಡೆದಿರುವ ಇಮ್ರಾನ್ ಖಾನ್ ಅವರು ತಮ್ಮ ಪ್ರತಿಭಟನೆಯ ಭಾಗವಹಿಸುವಿಕೆಯ ಸಂದರ್ಭವನ್ನು ಅರ್ಥಮಾಡಿಕೊಂಡು ಕ್ಷಮೆ ಯಾಚಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸಿ, ಕೆಲಸ ಮಾಡಿರುವ ವ್ಯಕ್ತಿಯ ಬಗ್ಗೆ ದೇಶವು ಉದಾರ ಮನೋಭಾವ ತೋರಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಇದೇ ವೇಳೆ ಹೇಳಿದರು.
ಕೇಂದ್ರದ ವಾದ
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ ಸಿಂಗ್ ಅವರು ಇಮ್ರಾನ್ ಖಾನ್ ಅವರ ಅರ್ಜಿಯನ್ನು ವಿರೋಧಿಸಿದರು. ಇಮ್ರಾನ್ ಖಾನ್ ಕೇವಲ ಪ್ರತಿಭಟನೆಯಲ್ಲಿ ಹಾಜರಿರಲಿಲ್ಲ; ಅದಕ್ಕೂ ಮೀರಿದ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಅವರು ವಾದಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಇಮ್ರಾನ್ ಖಾನ್ ಮಾಡಿದ್ದರೆನ್ನಲಾದ ಹೇಳಿಕೆಗಳನ್ನು ಉಲ್ಲೇಖಿಸಿದ ಅನಿಲ ಸಿಂಗ್, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜನರನ್ನು ಪ್ರಚೋದಿಸುವ ಕೆಲಸವನ್ನೂ ಅವರು ಮಾಡಿದ್ದಾರೆ ಎಂದು ಹೇಳಿದರು. ಒಸಿಐ ಕಾರ್ಡ್ದಾರರಿಗೆ ಸೀಮಿತ ಹಕ್ಕುಗಳು ಮಾತ್ರ ಇರುತ್ತವೆ. ವಿದೇಶಿ ಪ್ರಜೆಗಳನ್ನು ಭಾರತದಿಂದ ಹೊರಹೋಗುವಂತೆ ಸೂಚಿಸುವ ಸಾರ್ವಭೌಮ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಜೀವಿತಾವಧಿಯ ವೀಸಾ ಹೊಂದಿರುವ ವ್ಯಕ್ತಿಯೊಬ್ಬರಿಗೂ ನಿರ್ದಿಷ್ಟ ಸಂದರ್ಭಗಳಲ್ಲಿ ಭಾರತ ಪ್ರವೇಶವನ್ನು ನಿರಾಕರಿಸಬಹುದು. ಹೀಗಿರುವಾಗ, ಒಸಿಐ ಕಾರ್ಡ್ದಾರರು ಭಾರತದಲ್ಲಿ ನಿರಂತರವಾಗಿ ವಾಸಿಸುವುದಕ್ಕೆ ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕು ಹೊಂದಿದ್ದಾರೆಂದು ಹೇಳಲು ಸಾಧ್ಯವಿಲ್ಲ ಎಂದು ವಾದಿಸಿದರು. ಭಾರತೀಯ ಸಂವಿಧಾನದ 21ನೇ ವಿಧಿಯು ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುತ್ತದೆಯಾದರೂ, ವಿದೇಶಿ ಪ್ರಜೆಯೊಬ್ಬರಿಗೆ ಭಾರತದಲ್ಲಿ ವಾಸಿಸುವ ಹಕ್ಕನ್ನು ಅದು ನೀಡುವುದಿಲ್ಲ ಎಂದೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರತಿಪಾದಿಸಿದರು.
ಕೇಂದ್ರ ಸರ್ಕಾರದ ಈ ವಾದವನ್ನು ಒಪ್ಪಿದ ನ್ಯಾಯಪೀಠ, ಒಸಿಐ ಕಾರ್ಡ್ದಾರರನ್ನು ಭಾರತೀಯ ನಾಗರಿಕರಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಆದರೆ, ಇಮ್ರಾನ್ ಖಾನ್ ಅವರಿಗೆ ತಮ್ಮ ನಿಲುವು ಅಥವಾ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡುವ ಮೊದಲೇ ಭಾರತ ತೊರೆಯುವಂತೆ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿತು. ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ವ್ಯಕ್ತಿಯ ವಿಚಾರದಲ್ಲಿ ಅವರ ಪ್ರತಿಕ್ರಿಯೆ ಪಡೆಯದೆ ಇಂತಹ ನೋಟಿಸ್ ನೀಡುವುದು ಸಮರ್ಥನೀಯವೇ ಎಂಬ ಪ್ರಶ್ನೆಯನ್ನು ಎತ್ತಿತು.
ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಾರ್ವಭೌಮ ಅಧಿಕಾರವಿದೆ ಎಂಬುದನ್ನು ಒಪ್ಪಿಕೊಂಡ ನ್ಯಾಯಪೀಠ, ಆದರೆ ಪ್ರತಿಯೊಂದು ಪ್ರಕರಣದ ನಿರ್ದಿಷ್ಟ ಸನ್ನಿವೇಶಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೇಳಿತು. ಭಾರತದಲ್ಲಿ ಅರ್ಜಿದಾರರು ದೀರ್ಘಕಾಲದಿಂದ ವಾಸಿಸುತ್ತಿರುವ ಅಂಶವನ್ನೂ ನಿರ್ಲಕ್ಷಿಸಲಾಗದು ಎಂದು ಅಭಿಪ್ರಾಯಪಟ್ಟಿತು.
ಒಸಿಐ ಸ್ಥಾನಮಾನದ ಸೌಲಭ್ಯಗಳನ್ನು ಅನುಭವಿಸುವ ವ್ಯಕ್ತಿಯೊಬ್ಬರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕೆಂದು ನಿರೀಕ್ಷಿಸಲಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ ಸಿಂಗ್ ಹೇಳಿದಾಗ, ಮುಖ್ಯ ನ್ಯಾಯಮೂರ್ತಿಗಳು ‘ವಸುದೈವ ಕುಟುಂಬಕಂ’ ಎಂಬ ತತ್ವವನ್ನು ಉಲ್ಲೇಖಿಸಿದರು.
ಇಮ್ರಾನ್ ಖಾನ್ ಪ್ರತಿಕ್ರಿಯೆ ಪರಿಶೀಲಿಸಿದ ಬಳಿಕ ಎಫ್ಆರ್ಆರ್ಒ ನಿರ್ಧಾರ
ವಿಚಾರಣೆಯ ಅಂತಿಮ ಹಂತದಲ್ಲಿ ಇಮ್ರಾನ್ ಖಾನ್ ಅವರು ಸಲ್ಲಿಸಿದ ಬೇಷರತ್ ಕ್ಷಮಾಪಣೆ ಮತ್ತು ಭವಿಷ್ಯದಲ್ಲಿ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು.
ಒಸಿಐ ಕಾರ್ಡ್ದಾರರು ಭಾರತೀಯ ನಾಗರಿಕರಿಗೆ ಸಮಾನರಲ್ಲ. ಭಾರತೀಯ ನಾಗರಿಕರಂತೆ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕು ಅವರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಮತ್ತೊಮ್ಮೆ ಸ್ಪಷ್ಟಪಡಿಸಿತು. ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಪ್ರತಿಕ್ರಿಯೆ ಅಥವಾ ಉತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತಿಳಿಸಿದರು.
ಇಮ್ರಾನ್ ಖಾನ್ ಅವರ ಪ್ರತಿಕ್ರಿಯೆಯನ್ನು ಪರಿಶೀಲಿಸಿ, ಕಾನೂನಿನ ಪ್ರಕಾರ ಎಫ್ಆರ್ಆರ್ಒ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಭಾರತ ತೊರೆಯುವಂತೆ ನೀಡಿದ್ದ ನೋಟಿಸ್ ಜಾರಿಯಲ್ಲಿರುವುದಿಲ್ಲ. ಈ ಮಧ್ಯಂತರ ರಕ್ಷಣೆಯನ್ನು ನ್ಯಾಯಪೀಠ ವಿಸ್ತರಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ