ನವದೆಹಲಿ: ತರಗತಿಯೊಳಗೆ ಶಿಕ್ಷಕಿ ಎದುರೇ ಏಕಾಏಕಿ ಕುಸಿದು ಬಿದ್ದ ಮೂರನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪೂರ್ವ ದೆಹಲಿಯ ಮಯೂರ ವಿಹಾರದ ಲವ್ಲಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಬಾಲಕಿ ಕುಸಿದು ಬೀಳುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಸುಮಾರು 9:52ರ ವೇಳೆಗೆ ಪೊಲೀಸರಿಗೆ ತುರ್ತು ಕರೆ (PCR Call) ಬಂದಿದ್ದು, ತಕ್ಷಣವೇ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಶಾಲೆಯ ಸಿಬ್ಬಂದಿ ಬಾಲಕಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಶಿಕ್ಷಕಿ ಎದುರೇ ಕುಸಿದು ಬಿದ್ದ ಬಾಲಕಿ
ಶಾಲೆಯ ಪ್ರಾಂಶುಪಾಲೆ ಡಾ. ಭಾವನಾ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದು, ತರಗತಿಯಲ್ಲಿ ಶಿಕ್ಷಕಿ ಎದುರು ನಿಂತಿದ್ದ ಬಾಲಕಿ ಏಕಾಏಕಿ ಕುಸಿದು ಬಿದ್ದಿದ್ದಾಳೆ ಎಂದು ತಿಳಿಸಿದ್ದಾರೆ.
ಕೂಡಲೇ ಶಾಲೆಯ ಸಿಬ್ಬಂದಿ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದರಿಂದ ಉನ್ನತ ವೈದ್ಯಕೀಯ ಸೌಲಭ್ಯವಿರುವ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಬಾಲಕಿಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಘಟನೆಯ ಪ್ರಾಥಮಿಕ ತನಿಖೆಯ ಭಾಗವಾಗಿ ಪೊಲೀಸರು ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಸಿಸಿಟಿವಿ ದೃಶ್ಯದಲ್ಲಿ ಬಾಲಕಿ ತರಗತಿಯೊಳಗೆ ನಿಂತುಕೊಂಡಿದ್ದು, ಶಿಕ್ಷಕಿಯ ಸಮೀಪಕ್ಕೆ ಹೋಗಲು ಪ್ರಯತ್ನಿಸುತ್ತಿರುವಾಗಲೇ ಏಕಾಏಕಿ ಕುಸಿದು ಬೀಳುವುದು ಕಂಡುಬಂದಿದೆ.
ಬಾಲಕಿ ನೆಲಕ್ಕೆ ಕುಸಿಯುತ್ತಿದ್ದಂತೆ ಶಿಕ್ಷಕಿ ತಕ್ಷಣವೇ ಆಕೆಯ ಬಳಿಗೆ ಧಾವಿಸಿ, ಮೇಲಕ್ಕೆತ್ತಿ ಕುರ್ಚಿಯಲ್ಲಿ ಕೂರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಲವು ವಿದ್ಯಾರ್ಥಿಗಳು ಬಾಲಕಿಯ ಸುತ್ತಲೂ ಸೇರಿದ್ದಾರೆ. ಇನ್ನು ಕೆಲವರು ಶಾಲೆಯ ಅಧಿಕಾರಿಗಳಿಗೆ ವಿಷಯ ತಿಳಿಸಲು ತರಗತಿಯಿಂದ ಹೊರಗೆ ಓಡಿದ್ದಾರೆ. ಈ ಎಲ್ಲ ದೃಶ್ಯಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಭಾಗವಾಗಿ ಮೃತಪಟ್ಟ ಬಾಲಕಿಯ ಪೋಷಕರು ಹಾಗೂ ಸಂಬಂಧಪಟ್ಟ ಶಾಲಾ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ