ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ವಿಜಯಪುರದಲ್ಲಿ ಪತ್ನಿಯ ಎದುರೇ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

ವಿಜಯಪುರ: ನಗರದ ಮುಂಡೇವಾಡಿ ಸಮೀಪದ ಆಸ್ಪತ್ರೆಯೊಂದರ ಹೊರಭಾಗದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಮೃತರನ್ನು ಯಾಸೀನ್ ಜುಬೇರ್ ಎಂದು ಗುರುತಿಸಲಾಗಿದ್ದು, ಎದೆಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಾಂಧಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುಮಾರು 5:15ರ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ ಯಾಸೀನ್ ಅವರು ಗ್ಯಾಂಗ್‌ ಬಾವಡಿ ನಿವಾಸಿಯಾಗಿದ್ದು, ತಮ್ಮ ಪತ್ನಿಯ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು ಎನ್ನಲಾಗಿದೆ.
ವೈದ್ಯಕೀಯ ತಪಾಸಣೆ ಮುಗಿಸಿ ಪತ್ನಿಯೊಂದಿಗೆ ಆಸ್ಪತ್ರೆಯಿಂದ ಹೊರಬಂದು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿದ್ದು, ಬಳಿಕ ಪತ್ನಿಯ ಕಣ್ಣೆದುರೇ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದಾರೆ. ಎದೆಗೆ ಗುಂಡು ತಗುಲುತ್ತಿದ್ದಂತೆ ಯಾಸೀನ್ ನೆಲಕ್ಕುರುಳಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಾಂಧಿ ಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಹಂತಕರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. “ಶಂಕಿತರ ಬಗ್ಗೆ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಅವರ ಪತ್ತೆ ಮತ್ತು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷ ಅಥವಾ ಹಳೆಯ ವೈಷಮ್ಯ ಇರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ. ಆದರೆ, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ತಿಳಿದುಬರಬೇಕಿದೆ.

ಪ್ರಮುಖ ಸುದ್ದಿ :-   ಈಗ ನಂದಿನಿ ತುಪ್ಪ, ಬೆಣ್ಣೆ, ಪನೀರ್ ಬೆಲೆಯಲ್ಲೂ ಭಾರೀ ಹೆಚ್ಚಳ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement