ದಾಂಡೇಲಿ: ರೈಲ್ವೆ ಅಂಡರ್ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ದಾಂಡೇಲಿ ತಾಲೂಕಿನ ಬರ್ಚಿ–ಕರ್ಕಾ ರಸ್ತೆಯ ಬೇಡರ ಶಿರಗೂರು ಸಮೀಪ ಸಂಭವಿಸಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬ ಹಿರಿಯ ರೈಲ್ವೆ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಅಳ್ನಾವರ–ಅಂಬೇವಾಡಿ ರೈಲ್ವೆ ಸೆಕ್ಷನ್ ವ್ಯಾಪ್ತಿಯ ಎಲ್ಸಿ ನಂ. 11ರಲ್ಲಿ ಕರ್ಕಾ–ಬರ್ಚಿ ರೈಲ್ವೆ ಮಾರ್ಗದ ಅಂಡರ್ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾಮಗಾರಿಗಾಗಿ ಅಗೆದು ತೆರವುಗೊಳಿಸಲಾಗಿದ್ದ ಮಣ್ಣು ಏಕಾಏಕಿ ಕುಸಿದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಮೇಲೆ ಬಿದ್ದಿದೆ. ರೈಲ್ವೆ ಇಲಾಖೆಯ ಟೆಕ್ನಿಷಿಯನ್ ಮಹೇಶ ಶೇಖಪ್ಪ ತಳವಾರ (33) ಮಣ್ಣಿನಡಿ ಸಿಲುಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಎನ್ನಲಾಗಿದೆ.
ಘಟನೆಯಲ್ಲಿ ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಎಂಜಿನಿಯರ್, ಗದಗದ ರಾಜೀವ್ ಗಾಂಧಿನಗರ ನಿವಾಸಿ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಅವರಿಗೂ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಿಪಿಐ ಶಿವಾನಂದ ಅಂಬಿಗೇರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ರೈಲ್ವೆ ಇಲಾಖೆಯ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ