ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಅತ್ಯಾಚಾರ ಪ್ರಕರಣ : ವಿಮಾನ ನಿಲ್ದಾಣದಲ್ಲಿ ಟಿಎಂಸಿ ಶಾಸಕ ವಶಕ್ಕೆ

ಕೋಲ್ಕತ್ತಾ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಪರೇಶರಾಮ ದಾಸ್ ಅವರನ್ನು ಪೊಲೀಸರು ಸೋಮವಾರ (ನವೆಂಬರ್ 9) ಸಂಜೆ ಬಂಧಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬರುವ ಕ್ಯಾನಿಂಗ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಾಸ್, ಕಳೆದ ಸುಮಾರು 17 ದಿನಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಮುಂಬೈಗೆ ವಿಮಾನದಲ್ಲಿ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಕೋಲ್ಕತ್ತಾದ ನೇತಾಜಿ ಸುಭಾಷಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬೆಳವಣಿಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ಬರುಯಿಪುರ ಜಿಲ್ಲಾ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ತಂಡ (Special Operations Group-SOG) ಈ ಬಂಧನ ಕಾರ್ಯಾಚರಣೆ ನಡೆಸಿದೆ. ನವೆಂಬರ್ 9ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ  ಖಚಿತ ಮೂಲಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಬರುಯಿಪುರ ಜಿಲ್ಲಾ ಪೊಲೀಸರು ಶಾಸಕನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
 ಬಂಧಿತ ಶಾಸಕನನ್ನು ಹೆಚ್ಚಿನ ತನಿಖೆ ಹಾಗೂ ಅಗತ್ಯ ಕಾನೂನು ಪ್ರಕ್ರಿಯೆಗಳಿಗಾಗಿ ಬರುಯಿಪುರ ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬಳಿಕ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನವೆಂಬರ್ 10ರಂದು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.
ಶಾಸಕ ಪರೇಶರಾಮ ದಾಸ್ ವಿರುದ್ಧದ ಆರೋಪಗಳೇನು?
ಪೊಲೀಸರ ಪ್ರಕಾರ, ಕ್ಯಾನಿಂಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 561/2026 ಸಂಖ್ಯೆಯ ಪ್ರಕರಣದಲ್ಲಿ ಪರೇಶರಾಮ ದಾಸ್ ಆರೋಪಿಯಾಗಿದ್ದಾರೆ. 2026ರ ಸೆಪ್ಟೆಂಬರ್ 5ರಂದು ಈ ಪ್ರಕರಣ ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376, 323, 420, 120B ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಅತ್ಯಾಚಾರ, ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ ಗಾಯಗೊಳಿಸುವುದು, ವಂಚನೆ, ಅಪರಾಧ ಸಂಚು ಹಾಗೂ ಕ್ರಿಮಿನಲ್ ಬೆದರಿಕೆಗಳಿಗೆ ಸಂಬಂಧಿಸಿವೆ.
ಮಹಿಳೆಯೊಬ್ಬರು ಶಾಸಕನ ವಿರುದ್ಧ ಅತ್ಯಾಚಾರ, ಬೆದರಿಕೆ ಹಾಗೂ ಸುಲಿಗೆ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಕ್ಯಾನಿಂಗ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಅತ್ಯಾಚಾರ, ಹಲ್ಲೆ, ವಂಚನೆ, ಅಪರಾಧ ಸಂಚು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳು ಅವರ ಮೇಲಿವೆ. ಸದ್ಯ ಈ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.
ವಿಚಾರಣೆಗೆ ಎರಡು ಬಾರಿ ಹಾಜರಾಗುವಂತೆ ಸಿಐಡಿ ನೋಟಿಸ್
ಪ್ರಕರಣ ದಾಖಲಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಅಪರಾಧ ತನಿಖಾ ವಿಭಾಗ (CID) ಶಾಸಕ ಪರೇಶರಾಮ ದಾಸ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿತ್ತು. ಈ ಪೈಕಿ ಒಂದು ಬಾರಿ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ್ದರು. ಆದರೆ, ವಿಚಾರಣೆ ವೇಳೆ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಶಾಸಕ ಸರಿಯಾಗಿ ಉತ್ತರಿಸುತ್ತಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 2023ರ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿಯೂ ಈ ಹಿಂದೆ ಪರೇಶರಾಮ ದಾಸ್ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.
ಅಕ್ಟೋಬರ್ ಕೊನೆಯ ವಾರದ ವೇಳೆಗೆ ತನಿಖಾಧಿಕಾರಿಗಳಿಗೆ ಅವರ ಸುಳಿವು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಪೊಲೀಸ್ ತಂಡಗಳು ಕ್ಯಾನಿಂಗ್‌ನಲ್ಲಿರುವ ಅವರ ನಿವಾಸದ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ನಾಲ್ವರು ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿತ್ತು. ಆದರೆ, ಶಾಸಕ ಪರೇಶ್ರಾಮ್ ದಾಸ್ ಮಾತ್ರ ಪತ್ತೆಯಾಗಿರಲಿಲ್ಲ. ನಂತರವೂ ಪೊಲೀಸರು ಅವರಿಗಾಗಿ ಹುಡುಕಾಟ ಮುಂದುವರಿಸಿದ್ದರು. ಕೊನೆಗೆ ಸೋಮವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬರುಯಿಪುರ ಜಿಲ್ಲಾ ಪೊಲೀಸ್‌ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಶಾಸಕನ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ಕಾರ್ಯಾಚರಣೆ ತಂಡವು ಕೋಲ್ಕತ್ತಾದ ನೇತಾಜಿ ಸುಭಾಷಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದೆ. ಈ ಕಾರ್ಯಾಚರಣೆಗೆ ಬಿಧಾನನಗರ ಪೊಲೀಸರೂ ನೆರವು ನೀಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement