ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ರಾಜೀವ ಗಾಂಧಿಗೆ ರಾಜಕೀಯ ಬೇಡ ಎಂದು ಬೇಡಿಕೊಂಡಿದ್ದೆ, ಆದ್ರೆ ರಾಹುಲ್‌ನನ್ನು ತಡೆಯಲಿಲ್ಲ: ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ

ನವದೆಹಲಿ: ಪತಿ ರಾಜೀವ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಬಾರದು ಎಂದು ತಾನು ಅಂಗಲಾಚಿ ಬೇಡಿಕೊಂಡಿದ್ದೆ. ಆದರೆ ಮಗ ರಾಹುಲ್ ಗಾಂಧಿ ರಾಜಕೀಯಕ್ಕೆ ಧುಮುಕುವ ನಿರ್ಧಾರ ಕೈಗೊಂಡಾಗ ತಾನು ಅದನ್ನು ವಿರೋಧಿಸಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಆತ್ಮಕಥನದಲ್ಲಿ ಸೋನಿಯಾ ಗಾಂಧಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕ ಇಂದು, ಮಂಗಳವಾರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಗಾಂಧಿ ಕುಟುಂಬದ ರಾಜಕೀಯ ಜೀವನದ ಹಲವು ಅಪರೂಪದ ಸಂಗತಿಗಳನ್ನು ತೆರೆದಿಟ್ಟಿದೆ.
“ಎರಡು ದಶಕಗಳ ಹಿಂದೆ, ರಾಜೀವ ಅವರು ರಾಜಕೀಯಕ್ಕೆ ಪ್ರವೇಶಿಸದಂತೆ, ತಮ್ಮನ್ನು ಹಾಗೂ ನಮ್ಮೆಲ್ಲರನ್ನೂ ಆ ಅಪಾಯಕಾರಿ ಜಗತ್ತಿಗೆ ತಳ್ಳದಂತೆ ನಾನು ಅವರನ್ನು ಬೇಡಿಕೊಂಡಿದ್ದೆ. ಈಗ ನನ್ನ ಮಗನ ಸರದಿ ಬಂದಿತ್ತು, ಆದರೆ ಈ ಬಾರಿ ನಾನು ಅದನ್ನು ತಡೆಯಲಿಲ್ಲ,” ಎಂದು ಅವರು ಬರೆದಿದ್ದಾರೆ.
ರಾಹುಲ್ ಗಾಂಧಿಗೆ ರಾಜಕೀಯದಲ್ಲಿ ಬಹಳ ಹಿಂದಿನಿಂದಲೂ ಆಸಕ್ತಿ ಇತ್ತು ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಜೊತೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ದೀರ್ಘಕಾಲದ ನಂಟು ಹೊಂದಿದ್ದರು. ಹಿಂದಿ ಭಾಷಿಕ ಪ್ರದೇಶದ ಪ್ರಮುಖ ರಾಜಕೀಯ ಕ್ಷೇತ್ರವಾಗಿರುವ ಅಮೇಥಿಯು, ರಾಜೀವ್ ಗಾಂಧಿ ಕುಟುಂಬದ ರಾಜಕೀಯ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿತ್ತು.

ರಾಜೀವ ಗಾಂಧಿ ಅವರು ರಾಹುಲ್ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಹಲವು ಬಾರಿ ಅಮೇಥಿಗೆ ಕರೆದೊಯ್ದಿದ್ದರು. ಗ್ರಾಮೀಣ ಬದುಕಿನ ವಾಸ್ತವ ಸ್ಥಿತಿಗತಿಗಳನ್ನು ರಾಹುಲ್‌ ಗಾಂಧಿಗೆ ಪರಿಚಯಿಸುವ ಉದ್ದೇಶದಿಂದಲೂ ಬಳಿಕ ಅವರನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದರು ಎಂದು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ಕೂಡ ತಮ್ಮ ತಾಯಿ ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳ ಸಂದರ್ಭದಲ್ಲೂ ಅಮೇಥಿಯಲ್ಲಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರ ಜೊತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು ಎಂದು ಸೋನಿಯಾ ಬರೆದಿದ್ದಾರೆ.
ಆದರೆ, ಆ ಸಮಯದಲ್ಲಿ ಪ್ರಿಯಾಂಕಾ ಅವರ ಮೊದಲ ಆದ್ಯತೆ ತಮ್ಮ ಚಿಕ್ಕ ಮಕ್ಕಳನ್ನು ಬೆಳೆಸುವುದಾಗಿತ್ತು. ಇದರ ಜತೆಗೆ ಸ್ನಾತಕೋತ್ತರ ಡಿಪ್ಲೊಮಾವನ್ನು ಅಭ್ಯಾಸ ಮಾಡುತ್ತಿದ್ದರು. ರಾಹುಲ್ ಭಾರತಕ್ಕೆ ಮರಳಿದಾಗಲೆಲ್ಲ ತಾಯಿ ಅಥವಾ ಸಹೋದರಿ ಪ್ರಿಯಾಂಕಾ ಅವರ ಜೊತೆ ಅಮೇಥಿಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಇಬ್ಬರೂ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿದ್ದರು. ವಿದೇಶದಿಂದ ಅಂತಿಮವಾಗಿ ಭಾರತಕ್ಕೆ ಮರಳಿದ ಬಳಿಕ ಅಮೇಥಿಗೆ ನೀಡಿದ ಇಂತಹ ಭೇಟಿಗಳ ಸಂದರ್ಭದಲ್ಲಿಯೇ ರಾಹುಲ್ ಜನಪ್ರತಿನಿಧಿಯಾಗಿ ಅಲ್ಲಿನ ಜನರಿಗಾಗಿ ಕೆಲಸ ಮಾಡುವತ್ತ ಆಕರ್ಷಿತರಾದರು ಎಂದು ಸೋನಿಯಾ ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ.
ಕೇಂಬ್ರಿಡ್ಜ್‌ನಲ್ಲಿ ರಾಹುಲ್ ಗಾಂಧಿ ಎಂಫಿಲ್ (MPhil) ಪದವಿಗಾಗಿ ಅಭಿವೃದ್ಧಿ ಅಧ್ಯಯನ (Development Studies) ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದಾಗಲೂ ಭಾರತದ ರಾಜಕೀಯ ಬೆಳವಣಿಗೆಗಳನ್ನು ಅವರು ನಿರಂತರವಾಗಿ ಗಮನಿಸುತ್ತಿದ್ದರು ಎಂದು ಸೋನಿಯಾ ತಿಳಿಸಿದ್ದಾರೆ.
ರಾಹುಲ್ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿತ್ತು. ಇದು ಅವರ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸುವಂತಹ ನಿರ್ಧಾರವಾಗಿತ್ತು; ಅವರು ಸಾರ್ವಜನಿಕ ವ್ಯಕ್ತಿಯಾಗಬೇಕಿತ್ತು, ಅಲ್ಲಿ ಅವರ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸಲಾಗುತ್ತಿತ್ತು ಮತ್ತು ಮೌಲ್ಯಮಾಪನ ಮಾಡಲಾಗುತ್ತಿತ್ತು” ಎಂದು ಗಾಂಧಿ ಬರೆದಿದ್ದಾರೆ. ಅಲ್ಲದೆ, “ಪ್ರಿಯಾಂಕಾ ಮತ್ತು ನನ್ನ ಜೊತೆ ಚರ್ಚಿಸಿದ ನಂತರ ಹಾಗೂ ಸ್ವತಃ ಆಳವಾಗಿ ಯೋಚಿಸಿದ ಬಳಿಕ” ರಾಹುಲ್ ಈ ನಿರ್ಧಾರಕ್ಕೆ ಬಂದರು ಎಂದು ಅವರು ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   'ಚೋಟಿ ಬಹು' ಮೇನಕಾ ಗಾಂಧಿ ಜೊತೆ ಸಂಬಂಧ ಹಳಸಿದ್ದು ಯಾಕೆ? ಆತ್ಮಕಥನದಲ್ಲಿ ಕಾರಣ ಹೇಳಿದ ಸೋನಿಯಾ ಗಾಂಧಿ

2004ರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ಇದೇ ವೇಳೆ ಸೋನಿಯಾ ಗಾಂಧಿ ಪಕ್ಕದ ರಾಯಬರೇಲಿ ಕ್ಷೇತ್ರಕ್ಕೆ ತಮ್ಮ ರಾಜಕೀಯ ನೆಲೆಯನ್ನು ಬದಲಾಯಿಸಿಕೊಂಡರು.
ಈ ಸಂದರ್ಭದಲ್ಲಿ ತಮ್ಮ ಪತಿ ರಾಜೀವ್ ಗಾಂಧಿ ರಾಜಕೀಯ ಪ್ರವೇಶಿಸಿದ ದಿನಗಳನ್ನು ನೆನಪಿಸಿಕೊಂಡಿರುವ ಸೋನಿಯಾ, ರಾಹುಲ್ ನಿರ್ಧಾರಕ್ಕೆ ತಾವು ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದನ್ನೂ ವಿವರಿಸಿದ್ದಾರೆ.
“ಎರಡು ದಶಕಗಳ ಹಿಂದೆ ರಾಜೀವ್ ರಾಜಕೀಯಕ್ಕೆ ಬರಬಾರದು, ತಮ್ಮನ್ನೂ ಸೇರಿದಂತೆ ನಮ್ಮೆಲ್ಲರನ್ನೂ ಈ ಅಪಾಯಕಾರಿ ಜಗತ್ತಿಗೆ ತಳ್ಳಬಾರದು ಎಂದು ನಾನು ಅವರಲ್ಲಿ ಅಂಗಲಾಚಿ ಬೇಡಿಕೊಂಡಿದ್ದೆ. ಆದರೆ ಈಗ ನನ್ನ ಮಗನ ಸರದಿ ಬಂದಿತ್ತು. ಈ ಬಾರಿ ನಾನು ಅದನ್ನು ವಿರೋಧಿಸಲಿಲ್ಲ. ತನ್ನ ತಂದೆಯ ಅಂತ್ಯ ಹೇಗಾಗಬಹುದು ಎಂಬುದನ್ನು ರಾಹುಲ್ ಮೊದಲೇ ಊಹಿಸಿದ್ದ. ಈ ವಿಚಾರವಾಗಿ ಆತ ತಂದೆಯೊಂದಿಗೆ ವಾದವನ್ನೂ ಮಾಡಿದ್ದ. ಆದರೂ ತನ್ನ ತಂದೆಯ ಮೌಲ್ಯಗಳ ಜೊತೆ ಆಳವಾದ ಆತ್ಮೀಯ ಸಂಬಂಧ ಹೊಂದಿದ್ದ ರಾಹುಲ್, ಎದುರಾಗಿದ್ದ ಅಪಾಯದ ನಡುವೆಯೂ ರಾಜೀವ ಅವರು ತೋರಿದ ಧೈರ್ಯ ಮತ್ತು ದೃಢತೆಯನ್ನು ಗೌರವಿಸುತ್ತಿದ್ದ” ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   2004ರಲ್ಲಿ ಸೋನಿಯಾ ಗಾಂಧಿ ಯಾಕೆ ಪ್ರಧಾನಿ ಆಗಲಿಲ್ಲ? ಮೊದಲು ʼಯಸ್‌' ಎಂದವರು ನಂತ್ರ ನೋ' ಎಂದಿದ್ದೇಕೆ? ಆತ್ಮಕಥೆಯಲ್ಲಿ ಕಾರಣ ಬಹಿರಂಗ

ಮೊದಲ ಚುನಾವಣೆಯಲ್ಲೇ ರಾಹುಲ್ ಗಾಂಧಿ ಭರ್ಜರಿ ಗೆಲುವು ದಾಖಲಿಸಿದರು. ಹೊಸ ಜವಾಬ್ದಾರಿಯನ್ನು ಅವರು ಅತ್ಯಂತ ಉತ್ಸಾಹದಿಂದ ಸ್ವೀಕರಿಸಿದರು. ರಾಜೀವ ಗಾಂಧಿ ಹಿಂದೆ ಮಾಡಿದ್ದಂತೆ ಅಮೇಥಿಯ ಗ್ರಾಮೀಣ ಪ್ರದೇಶಗಳಿಗೆ ಉದ್ಯಮಗಳು ಮತ್ತು ಕೈಗಾರಿಕೆಗಳನ್ನು ತರುವ ಪ್ರಯತ್ನ ಆರಂಭಿಸಿದರು ಎಂದು ಸೋನಿಯಾ ವಿವರಿಸಿದ್ದಾರೆ.
ಇದೇ ವೇಳೆ ಪ್ರಿಯಾಂಕಾ ಗಾಂಧಿ ಕೂಡ ಸಮರ್ಥ ನಿರ್ವಹಣಾಕಾರಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅಮೇಥಿಯಲ್ಲಿ ಸ್ವಸಹಾಯ ಗುಂಪುಗಳನ್ನು (Self Help Groups – SHG) ಆರಂಭಿಸುವ ಮೂಲಕ ಮಹಿಳೆಯರು ಪರಸ್ಪರ ಬೆಂಬಲದ ಜೊತೆ ಸಮಾಜದಲ್ಲಿ ಬದಲಾವಣೆಯ ಹರಿಕಾರರಾಗಲು ಪ್ರೋತ್ಸಾಹಿಸಿದರು ಎಂದು ಸೋನಿಯಾ ತಿಳಿಸಿದ್ದಾರೆ.
ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಸ್ವಸಹಾಯ ಗುಂಪುಗಳು ಉತ್ತಮ ಭವಿಷ್ಯದ ಭರವಸೆ ಮೂಡಿಸಿದ್ದವು. ರಾಹುಲ್ ಗಾಂಧಿ ಅವರ ಸಹಭಾಗಿತ್ವದ ಜೊತೆ ಅಮೇಥಿಯ ಸ್ವಸಹಾಯ ಗುಂಪುಗಳು ಉತ್ತರ ಭಾರತದಲ್ಲೇ ಅತಿ ದೊಡ್ಡ ಜಾಲವಾಗಿ ಬೆಳೆದವು ಎಂದು ಅವರು ಹೇಳಿದ್ದಾರೆ.
ಇದರ ಜತೆಗೆ ಅಮೇಥಿಯಲ್ಲಿ ಬಹಳ ಅಗತ್ಯವಿದ್ದ ಕಣ್ಣಿನ ಆಸ್ಪತ್ರೆಯೊಂದನ್ನೂ ರಾಹುಲ್ ಸ್ಥಾಪಿಸಿದರು. ಬಳಿಕ ಈ ಆಸ್ಪತ್ರೆಯ ಶಾಖೆಗಳು ಲಕ್ನೋ ಮತ್ತು ಹರಿಯಾಣದಲ್ಲಿಯೂ ವಿಸ್ತರಿಸಿದವು ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement