ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

‘ಚೋಟಿ ಬಹು’ ಮೇನಕಾ ಗಾಂಧಿ ಜೊತೆ ಸಂಬಂಧ ಹಳಸಿದ್ದು ಯಾಕೆ? ಆತ್ಮಕಥನದಲ್ಲಿ ಕಾರಣ ಹೇಳಿದ ಸೋನಿಯಾ ಗಾಂಧಿ

ನವದೆಹಲಿ: ತಮ್ಮ 18ನೇ ವಯಸ್ಸಿನಲ್ಲೇ ಗಾಂಧಿ ಕುಟುಂಬದ ಕಿರಿಯ ಸೊಸೆಯಾಗಿ ಪ್ರವೇಶಿಸಿದ್ದ ಮೇನಕಾ ಆನಂದ (ಮೇನಕಾ ಗಾಂಧಿ), ಕೆಲವೇ ವರ್ಷಗಳಲ್ಲಿ ಕುಟುಂಬದ ಜೊತೆಗಿನ ಸಂಬಂಧ ಹದಗೆಟ್ಟು ಮನೆಯಿಂದ ಹೊರನಡೆಯುವಂತಾಯಿತು. ಆರಂಭದಲ್ಲಿ ಮೈದುನ ಸಂಜಯ ಗಾಂಧಿ ಅವರ ಪತ್ನಿಯಾಗಿ ಮನೆಗೆ ಬಂದ ಮೇನಕಾ, ಸೋನಿಯಾ ಗಾಂಧಿ ಅವರಿಗೆ ಕಿರಿಯ ತಂಗಿಯಂತೆಯೇ ಕಂಡಿದ್ದರು. ಆದರೆ ಕಾಲಕ್ರಮೇಣ ಇಬ್ಬರು ಸೊಸೆಯರ ನಡುವಿನ ಭಿನ್ನಾಭಿಪ್ರಾಯ, ಕುಟುಂಬದ ಆಂತರಿಕ ಕಲಹ, ಸಂಜಯ ಗಾಂಧಿ ಮತ್ತು ರಾಜೀವ ಗಾಂಧಿ ನಡುವಿನ ಸಂಬಂಧದಲ್ಲಿನ ಬಿರುಕು ಹಾಗೂ ಇಂದಿರಾ ಗಾಂಧಿ ಅವರ ಜೊತೆಗಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೊಸ ಆತ್ಮಕಥನ ʼಬಿಲಾಂಗಿಂಗ್‌ : ಎ ಜರ್ನಿ ಆಫ್‌ ಲವ್‌ (‘Belonging: A Journey Of Love)’ ಮಂಗಳವಾರ ಬಿಡುಗಡೆಯಾಗಿದ್ದು, ಅದರಲ್ಲಿ ಮೇನಕಾ ಗಾಂಧಿ ಮದುವೆಯಾಗಿ ಗಾಂಧಿ ಕುಟುಂಬಕ್ಕೆ ಬಂದ ಸಂದರ್ಭದಿಂದ ಹಿಡಿದು ಕುಟುಂಬದಿಂದ ದೂರವಾದ ಘಟನೆಯವರೆಗಿನ ಹಲವು ವಿವರಗಳನ್ನು ದಾಖಲಿಸಿದ್ದಾರೆ.
1973ರ ಕೊನೆಯ ಭಾಗದಲ್ಲಿ ಸಂಜಯ ಗಾಂಧಿ ಅವರಿಗೆ ಮೇನಕಾ ಪರಿಚಯವಾಗಿತ್ತು. ಸುಂದರ ಹಾಗೂ ಉತ್ಸಾಹಭರಿತ ಯುವತಿಯಾಗಿದ್ದ ಮೇನಕಾ, ಸಂಜಯ ಅವರಿಗಿಂತ ಹತ್ತು ವರ್ಷ ಚಿಕ್ಕವರಾಗಿದ್ದರು. ಆಗಲೂ ಅವರು ಅಪ್ರಾಪ್ತ ವಯಸ್ಸಿನಲ್ಲಿದ್ದರು ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಪರಿಚಯವಾದ ಒಂದು ವರ್ಷದೊಳಗೆ ಇಬ್ಬರೂ ವಿವಾಹವಾದರು. ಆಗ ಮೇನಕಾ ಅವರಿಗೆ 18 ವರ್ಷ. ವಿವಾಹದ ಬಳಿಕ ಅವರು ಗಾಂಧಿ ಕುಟುಂಬದ ಕಿರಿಯ ಸೊಸೆಯಾಗಿ ಮನೆ ಪ್ರವೇಶಿಸಿದರು.
ಆರಂಭದ ದಿನಗಳಲ್ಲಿ ಮೇನಕಾ ಅವರ ಜೊತೆಗೆ ಒಡನಾಟ ತಮಗೆ ಸಂತೋಷ ನೀಡಿತ್ತು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ. ”ಮೇನಕಾ ತುಂಬಾ ಉತ್ಸಾಹಭರಿತ ಮತ್ತು ಮಾತನಾಡುವ ಸ್ವಭಾವದ ಹುಡುಗಿ. ಸದಾ ಚೈತನ್ಯದಿಂದ ಇರುತ್ತಿದ್ದರು. ಮನೆಯಲ್ಲಿ ಕಿರಿಯ ಮೈದುನನ ಪತ್ನಿ ಬಂದಿರುವುದು ಆರಂಭದಲ್ಲಿ ಖುಷಿ ತಂದಿತ್ತು. ಕೆಲವೊಮ್ಮೆ ಆಂಟಿ ಆಮಿಯವರ ಕೋಣೆಯಿಂದ ಮೇನಕಾ ಅವರ ನಗುವಿನ ಸದ್ದು ಕೇಳಿಸುತ್ತಿತ್ತು. ಆಗ ನಾನೂ ಅಲ್ಲಿಗೆ ಹೋಗಿ ಏನು ಇಷ್ಟು ನಗುವಿನ ಸಂಗತಿ ಎಂದು ವಿಚಾರಿಸುತ್ತಿದ್ದೆ. ಬಳಿಕ ಅವರು ತಮ್ಮ ಸ್ನೇಹಿತರ ಬಗ್ಗೆ ಅಥವಾ ಓದುತ್ತಿದ್ದ ಪುಸ್ತಕದ ಬಗ್ಗೆ ಉತ್ಸಾಹದಿಂದ ಮಾತನಾಡುವುದನ್ನು ಕೇಳುತ್ತಾ ಅಲ್ಲಿಯೇ ಕುಳಿತುಕೊಳ್ಳುತ್ತಿದ್ದೆ” ಎಂದು ಬರೆದಿದ್ದಾರೆ.
ತಮ್ಮ ಮಗಳು ಪ್ರಿಯಾಂಕಾ ಕೂಡ ಆಗಾಗ್ಗೆ ಮೇನಕಾ ಅವರ ಕೋಣೆಯಲ್ಲಿ ಇರುತ್ತಿದ್ದಳು. ಚಿಕ್ಕಮ್ಮ ಮೇನಕಾ ಹೇಳುತ್ತಿದ್ದ ಕಥೆಗಳನ್ನು ಪ್ರಿಯಾಂಕಾ ಬಹಳ ಆಸಕ್ತಿಯಿಂದ ಕೇಳುತ್ತಾ ಮೈಮರೆಯುತ್ತಿದ್ದಳು ಎಂದು ಸೋನಿಯಾ ವಿವರಿಸಿದ್ದಾರೆ. ಆದರೆ ಕ್ರಮೇಣ ಮನೆಯ ವಾತಾವರಣ ಬದಲಾಗತೊಡಗಿತು. ಸಣ್ಣಪುಟ್ಟ ವಿಚಾರಗಳಿಗೂ ಅಸಮಾಧಾನಗಳು ಕಾಣಿಸಿಕೊಳ್ಳಲಾರಂಭಿಸಿದವು ಎಂದು ಅವರು ಹೇಳಿದ್ದಾರೆ.
‘ಬಹುರಾಣಿ’ ಮತ್ತು ‘ಚೋಟಿ ಬಹು’ ಸಂಬೋಧನೆಯಿಂದ ಆರಂಭವಾದ ಅಸಮಾಧಾನ
ಗಾಂಧಿ ಕುಟುಂಬದ ಇಬ್ಬರು ಸೊಸೆಯರನ್ನು ಮನೆಯ ಸಿಬ್ಬಂದಿ ಸಂಬೋಧಿಸುತ್ತಿದ್ದ ರೀತಿಯೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಹಿರಿಯ ಸೊಸೆಯಾಗಿದ್ದ ಸೋನಿಯಾ ಅವರನ್ನು ಮನೆಯ ಸಿಬ್ಬಂದಿ ‘ಬಹುರಾಣಿ’ ಎಂದು ಕರೆಯುತ್ತಿದ್ದರು. ಕಿರಿಯ ಸಹೋದರ ಸಂಜಯ ಅವರ ಪತ್ನಿಯಾಗಿದ್ದ ಮೇನಕಾ ಅವರನ್ನು ‘ಚೋಟಿ ಬಹು’ (ಕಿರಿಯ ಸೊಸೆ) ಎಂದು ಕರೆಯಲಾಗುತ್ತಿತ್ತು.
ತಮ್ಮ ದೃಷ್ಟಿಯಲ್ಲಿ ಇಬ್ಬರೂ ಮನೆಯ ಸಮಾನ ಪುತ್ರಿಯರಾಗಿದ್ದರು. ಆದರೆ ಮೇನಕಾ ಈ ಸಂಬೋಧನೆಯನ್ನು ತಮ್ಮನ್ನು ಕೀಳಾಗಿ ಕಾಣುವ ರೀತಿಯೆಂದು ಭಾವಿಸಿರಬಹುದು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ”ಮೇನಕಾ ಒರಟಾಗಿ ಮಾತನಾಡಿದಾಗ, ಮನೆಯ ಶಾಂತಿ ಕಾಪಾಡುವ ಉದ್ದೇಶದಿಂದ ಬಹುತೇಕ ಸಂದರ್ಭಗಳಲ್ಲಿ ನಾನು ಮೌನವಾಗಿರುತ್ತಿದ್ದೆ. ಆದರೆ ಮಾತು ಮಿತಿಮೀರಿದೆ ಎನಿಸಿದಾಗ ನಾನೂ ಕಟುವಾಗಿಯೇ ಪ್ರತಿಕ್ರಿಯಿಸುತ್ತಿದ್ದೆ” ಎಂದು ಅವರು ಬರೆದಿದ್ದಾರೆ.
ಸಂಜಯ ಮತ್ತು ಮೇನಕಾ ನಡುವಿನ ಭಿನ್ನಾಭಿಪ್ರಾಯಗಳು ಕೂಡ ಕ್ರಮೇಣ ಅವರಿಬ್ಬರ ಖಾಸಗಿ ಬದುಕಿನ ನಾಲ್ಕು ಗೋಡೆಗಳನ್ನು ದಾಟಿ ಹೊರಬರತೊಡಗಿದವು. ಇಬ್ಬರ ನಡುವಿನ ವಾಗ್ವಾದಗಳು ಜೋರಾಗಿ, ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದವು. ಮೇನಕಾ ಕೋಪಗೊಂಡಾಗ ಅಸಭ್ಯ ಪದಗಳನ್ನು ಬಳಸುತ್ತಿದ್ದರು. ಅತ್ತೆ ಇಂದಿರಾ ಗಾಂಧಿ ಅವರ ಎದುರಿನಲ್ಲಿಯೂ ಇಂತಹ ಪದಗಳನ್ನು ಬಳಸುತ್ತಿದ್ದುದರಿಂದ ಮನೆಯವರಿಗೆ ಮುಜುಗರವಾಗುತ್ತಿತ್ತು. ಸಂಜಯ ಅವರಿಗೂ ಇದು ಮುಜುಗರ ಉಂಟುಮಾಡುತ್ತಿತ್ತು. ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದ ವಾತಾವರಣವು, ಸಾಮಾಜಿಕವಾಗಿ ಬೆರೆಯಲು ಇಷ್ಟಪಡುತ್ತಿದ್ದ ಸ್ವಭಾವದ ಯುವತಿಯಾಗಿದ್ದ ಮೇನಕಾ ಅವರಿಗೆ ಸುಲಭವಾಗಿ ಹೊಂದಿಕೊಳ್ಳುವಂತಿರಲಿಲ್ಲ ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಪ್ರತಿಯೊಬ್ಬರೂ ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುತ್ತಿದ್ದುದರಿಂದ ಮನೆಯ ವಾತಾವರಣ ಮೇನಕಾ ಅವರಿಗೆ ನೀರಸ ಹಾಗೂ ಕಟ್ಟುನಿಟ್ಟಿನದ್ದಾಗಿ ಕಂಡಿರಬಹುದು. ಸಂಜಯ ಗಾಂಧಿ ಅವರ ಜೊತೆಗೆ ರಾಜಕೀಯ ಕಾರ್ಯಕ್ರಮಗಳು ಮತ್ತು ಸಭೆಗಳಿಗೆ ತೆರಳಲು ಆರಂಭಿಸಿದ ಬಳಿಕವಷ್ಟೇ ಅವರು ಸ್ವಲ್ಪ ಮಟ್ಟಿಗೆ ಹೊಂದಿಕೊಂಡಂತೆ ಕಾಣುತ್ತಿದ್ದರು ಎಂದು ಸೋನಿಯಾ ಬರೆದಿದ್ದಾರೆ.
 ಮೇನಕಾ ಅವರ ಪ್ರಭಾವ ಸಂಜಯ ಗಾಂಧಿ ಅವರ ರಾಜಕೀಯ ಚಟುವಟಿಕೆಗಳ ಮೇಲಷ್ಟೇ ಅಲ್ಲದೆ, ಅವರ ಸಹೋದರ ರಾಜೀವ ಗಾಂಧಿ ಜೊತೆಗಿನ ಸಂಬಂಧದ ಮೇಲೂ ಪರಿಣಾಮ ಬೀರತೊಡಗಿತು ಎಂದು ಸೋನಿಯಾ ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಬೇರ್ಪಡಿಸಲಾಗದಷ್ಟು ಆತ್ಮೀಯರಾಗಿದ್ದ ಸಂಜಯ ಮತ್ತು ರಾಜೀವ್ ನಡುವಿನ ಸಂಬಂಧ ಕ್ರಮೇಣ ಹದಗೆಟ್ಟಿತು ಎಂದು ಅವರು ವಿವರಿಸಿದ್ದಾರೆ. 1977ರ ಮಾರ್ಚ್‌ನಲ್ಲಿ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಅಂತ್ಯಗೊಂಡ ಬೆನ್ನಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಇಂದಿರಾ ಗಾಂಧಿ ಅವರು ರಾಯ್‌ಬರೇಲಿಯಲ್ಲಿ ಮತ್ತು ಸಂಜಯ ಗಾಂಧಿ ಅವರು ಅಮೇಥಿಯಲ್ಲಿ ಸೋಲು ಕಂಡಿದ್ದರು.
ತುರ್ತು ಪರಿಸ್ಥಿತಿಯ ಜೊತೆಗೆ ಸಂಜಯ ಗಾಂಧಿ ಅವರ ಹೆಸರು ತಳುಕು ಹಾಕಿಕೊಂಡಿದ್ದರಿಂದ, ಚುನಾವಣಾ ಸೋಲಿನ ಬಳಿಕ ಅವರು ಸಂದರ್ಶನಗಳಲ್ಲಿ ಆಡಳಿತಶಾಹಿಯ ನಿಧಾನಗತಿಯ ಕಾರ್ಯವೈಖರಿಯನ್ನು ಟೀಕಿಸತೊಡಗಿದ್ದರು. ಅವರ ಕೆಲವು ಅಭಿಪ್ರಾಯಗಳು ಪ್ರಧಾನಿಯ ವಿರುದ್ಧದ ಟೀಕೆಗಳೆಂದು ಅರ್ಥೈಸಿಕೊಳ್ಳುವ ಸಾಧ್ಯತೆಯೂ ಇತ್ತು ಎಂದು ಸೋನಿಯಾ ಹೇಳಿದ್ದಾರೆ.
ಸಂಜಯ ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಕಾಂಗ್ರೆಸ್‌ನ ಕೆಲವು ಬಣಗಳು ಬೆಂಬಲ ನೀಡುತ್ತಿದ್ದವು. ಆದರೆ ಇದು ಇಂದಿರಾ ಗಾಂಧಿ ಅವರಿಗೆ ಇಷ್ಟವಾಗಿರಲಿಲ್ಲ. “ಮೇನಕಾ ಅವರು ಸಂಜಯ ಅವರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಬದಲು, ಬದಲಾಗಿ ಅವರನ್ನು ಇನ್ನಷ್ಟು ಪ್ರಚೋದಿಸುತ್ತಿದ್ದರು” ಎಂದು ಇಂದಿರಾ ಗಾಂಧಿ ಭಾವಿಸಿದ್ದರು ಎಂದು ಸೋನಿಯಾ ಬರೆದಿದ್ದಾರೆ.
ಈ ಬಗ್ಗೆ ಇಂದಿರಾ ಗಾಂಧಿ ಅವರು ಆಗಿನ ಸಂಪುಟ ಕಾರ್ಯದರ್ಶಿ ಪಿ.ಎನ್. ಧರ್ ಅವರ ಬಳಿ ತಮ್ಮ ಕಿರಿಯ ಸೊಸೆಯನ್ನು ಉಲ್ಲೇಖಿಸಿ, ”ಉಸ್ಕೆ ಅಭಿ ಸೇ ಪರ್ ನಿಕಲ್ನೇ ಲಗೆ ಹೈಂ” (ಅವಳಿಗೆ ಈಗಲೇ ರೆಕ್ಕೆಗಳು ಮೂಡಲಾರಂಭಿಸಿವೆ) ಎಂದು ಹೇಳಿದ್ದರಂತೆ.
1978ರ ಚುನಾವಣೆಯ ಹಿನ್ನಡೆಯ ವಿಚಾರದಲ್ಲಿಯೂ ಕುಟುಂಬದೊಳಗಿನ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿತ್ತು. ಆ ಚುನಾವಣೆಯ ಹೀನಾಯ ಫಲಿತಾಂಶಕ್ಕೆ ಸಂಜಯ ಅವರ ಹಠಮಾರಿತನ, ಅವಸರದ ನಿರ್ಧಾರಗಳು, ಸಮರ್ಪಕವಾಗಿ ಯೋಚಿಸದೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಧೋರಣೆ, ಹಿತೈಷಿಗಳ ಸಲಹೆಗಳನ್ನು ನಿರ್ಲಕ್ಷಿಸುವುದು ಹಾಗೂ ತಾಯಿಯ ಗಮನಕ್ಕೆ ತಾರದೆ ಹಲವು ನಿರ್ಧಾರಗಳನ್ನು ಕೈಗೊಂಡಿರುವುದೇ ಪ್ರಮುಖ ಕಾರಣ ಎಂದು ರಾಜೀವ ಭಾವಿಸಿದ್ದರು ಎಂದು ಸೋನಿಯಾ ದಾಖಲಿಸಿದ್ದಾರೆ.
 ಕುಟುಂಬದ ಚರ್ಚೆಯೊಂದರ ಸಂದರ್ಭದಲ್ಲಿ ರಾಜೀವ ಅವರು ಸಂಜಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ”ಸಂಜಯ, ನಿನ್ನನ್ನು ನಾನು ಕ್ಷಮಿಸಲು ಸಾಧ್ಯವಿಲ್ಲ. ಅಮ್ಮನನ್ನು ಈ ಸ್ಥಿತಿಗೆ ತಂದಿಟ್ಟಿದ್ದೀಯ” ಎಂದು ರಾಜೀವ ಅವರು ಹೇಳಿದ್ದನ್ನು ಸೋನಿಯಾ ನೆನಪಿಸಿಕೊಂಡಿದ್ದಾರೆ. ಆಗ ಅಸಮಾಧಾನಗೊಂಡಿದ್ದ ನನ್ನ ಅತ್ತೆ (ಇಂದಿರಾ ಗಾಂಧಿ) ಕೂಡ ರಾಜೀವ ಮಾತನ್ನು ಸಮರ್ಥಿಸಿದ್ದರು. ‘ರಾಜೀವ್ ಹೇಳಿದ್ದು ನಿಜ, ಸಂಜಯ, ನಿನಗೆ ಎಷ್ಟು ಬಾರಿ ಹೇಳಿದ್ದೆ, ನನನಗೆ ಗೊತ್ತಿಲ್ಲದೆ ನೀನು ಆದೇಶಗಳನ್ನು ಹೊರಡಿಸುತ್ತಿದ್ದೆ ‘ ಎಂದು ಹೇಳಿದ್ದರು.  “ಈ ವೇಳೆ ಮೇನಕಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆಗ ನನ್ನ ಅತ್ತೆ (ಇಂದಿರಾ ಗಾಂಧಿ) ಧ್ವನಿ ಏರಿಸಿ, ‘ಇದನ್ನು ನಿರಾಕರಿಸುವ ಧೈರ್ಯ ನಿನಗಿದೆಯೇ?’ ಎಂದು ಪ್ರಶ್ನಿಸಿದರು. ತಕ್ಷಣ ಮೇನಕಾ ಸುಮ್ಮನಾದರು, ಆದರೆ ನಮ್ಮ ಮೇಲಿದ್ದ ಅವರ ದ್ವೇಷ ಮಾತ್ರ ಹೆಚ್ಚುತ್ತಲೇ ಹೋಯಿತು” ಎಂದು ಅವರು ತಮ್ಮ ಆತ್ಮಕಥನದಲ್ಲಿ ಸೋನಿಯಾ ಗಾಂಧಿ ಬರೆದಿದ್ದಾರೆ.
 ಸೋನಿಯಾ ಗಾಂಧಿ ಅವರ ಪ್ರಕಾರ, ಮೇನಕಾ ಅವರ ವ್ಯಂಗ್ಯಭರಿತ ಟೀಕೆಗಳು “ನಿರಂತರ ಕಿರಿಕಿರಿಯ” ಮೂಲವಾಗಿದ್ದವು. “ಅವರ ದೃಷ್ಟಿಯಲ್ಲಿ ನಾವೆಲ್ಲಾ ಶತ್ರುಗಳಾಗಿದ್ದೆವು. ತಮಗೆ ಪರಿಚಯವಿದ್ದ ಪತ್ರಕರ್ತರ ಮೂಲಕ ಅವರು ನಮ್ಮ ಬಗ್ಗೆ ಕಟ್ಟುಕಥೆಗಳನ್ನು ಹರಡುತ್ತಿದ್ದರು. ನಮಗೆ ಅತ್ಯಂತ ನೋವುಂಟುಮಾಡಿದ ವಿಷಯವೆಂದರೆ.. ಚುನಾವಣೆಯಲ್ಲಿ ಸೋತಾಗ ರಾಜೀವ್ ಮತ್ತು ನಾನು ದೇಶ ಬಿಟ್ಟು ಹೋಗಲು ಉದ್ದೇಶಿಸಿದ್ದೆವು ಎಂಬ ಸುಳ್ಳು ಪ್ರಚಾರ ನಡೆಯಿತು” ಎಂದು ಗಾಂಧಿ ಬರೆಯುತ್ತಾರೆ.
ಸಂಜಯ ಗಾಂಧಿ ನಿಧನದ ನಂತರದ ಬೆಳವಣಿಗೆಗಳು
1980ರ ಜೂನ್ 23ರಂದು ಸಂಜಯ ಗಾಂಧಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟ ನಂತರ, ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಸೋನಿಯಾ ಗಾಂಧಿ ಅವರ ಪ್ರಕಾರ, ಪಕ್ಷದಲ್ಲಿ ಸಂಜಯ ಅವರ ನಿಷ್ಠಾವಂತರನ್ನು ಪ್ರಚೋದಿಸಿ, ಸಂಜಯ ಅವರ ಪತ್ನಿ ಮೇನಕಾ ಅವರಿಗೆ ರಾಜಕೀಯ ಹುದ್ದೆ ನೀಡಬೇಕೆಂದು ಒತ್ತಾಯಿಸುವಂತೆ ಮೇನಕಾ ಅವರ ತಾಯಿ ಪ್ರೇರೇಪಿಸುತ್ತಿದ್ದರು ಎಂದು ನಂಬಲಾಗಿತ್ತು.
ಆದರೆ ಆಗ ಕೇವಲ 23 ವರ್ಷದವರಾಗಿದ್ದ ಮೇನಕಾ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಇನ್ನೂ ಚಿಕ್ಕವರು ಮತ್ತು ಪ್ರಬುದ್ಧತೆಯ ಕೊರತೆ ಹೊಂದಿದ್ದಾರೆ ಎಂಬುದು ಇಂದಿರಾ ಗಾಂಧಿ ಅವರ ಅಭಿಪ್ರಾಯವಾಗಿತ್ತು. ಅಲ್ಲದೆ, ಮೇನಕಾ ಅವರಿಗೆ ಆಗ ಮೂರು ತಿಂಗಳ ಮಗುವಿತ್ತು. ಮಗುವಿನ ಆರೈಕೆಗೆ ಆದ್ಯತೆ ನೀಡಬೇಕು, ತಾಳ್ಮೆಯಿಂದಿರಬೇಕು ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮುಂದೆ ಸಾಕಷ್ಟು ಸಮಯವಿದೆ ಎಂದು ಇಂದಿರಾ ಭಾವಿಸಿದ್ದರು. ಆದರೆ ಮೇನಕಾ ಅವರ ಆಸಕ್ತಿ ಬೇರೆಯದೇ ದಿಕ್ಕಿನಲ್ಲಿತ್ತು ಎಂಬುದು ಕ್ರಮೇಣ ಸ್ಪಷ್ಟವಾಯಿತು ಎಂದು ಸೋನಿಯಾ ವಿವರಿಸಿದ್ದಾರೆ.
1981ರ ಮಾರ್ಚ್‌ನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಆ ಸಮಯದಲ್ಲಿ ಮೇನಕಾ ಅವರು ತಮ್ಮ ಮಗ ಫಿರೋಜ್ ವರುಣ ಗಾಂಧಿ ಅವರ ಮೊದಲ ಜನ್ಮದಿನವನ್ನು ವಸುಂಧರಾ ರಾಜೇ ಅವರ ಮನೆಯಲ್ಲಿ ಆಚರಿಸಿದರು. ವಸುಂಧರಾ ರಾಜೇ ಅವರು ಆರ್‌ಎಸ್‌ಎಸ್‌ನ (RSS) ಕಟ್ಟಾ ಬೆಂಬಲಿಗರಾಗಿದ್ದರು ಮತ್ತು ಇಂದಿರಾ ಗಾಂಧಿ ಅವರ ರಾಜಕೀಯ ಎದುರಾಳಿಯಾಗಿದ್ದರು.
ನಂತರ, ಅತ್ತೆ ಇಂದಿರಾ ಗಾಂಧಿ ಅವರು ಲಂಡನ್‌ನಲ್ಲಿದ್ದಾಗ, ಮೇನಕಾ ತಮ್ಮ ವಸ್ತುಗಳನ್ನು ಮನೆಯಿಂದ ಹೊರಗೆ ಸಾಗಿಸಲು ಪ್ರಾರಂಭಿಸಿದರು. ಇಂದಿರಾ ಗಾಂಧಿ ಅವರು ಹಿಂದಿರುಗಿದಾಗ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಮೇನಕಾ ಅವರಿಗೆ “ಒಂದೋ ಈ ಕೆಲಸಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಬೇರೆ ಕಡೆ ಹೋಗಿ ವಾಸಿಸಬೇಕು” ಎಂಬ ಆಯ್ಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೇನಕಾ ತಮ್ಮ ಅತ್ತೆಯ ವಿರುದ್ಧ ಹಲವು ಆರೋಪಗಳನ್ನು ಒಳಗೊಂಡ ಪತ್ರವೊಂದನ್ನು ಬರೆದರು. ಇದು ಸ್ಪಷ್ಟವಾಗಿಯೇ ತಮ್ಮ ಅತ್ತೆಗೆ ಮುಜುಗರ ಉಂಟುಮಾಡುವ ಉದ್ದೇಶವನ್ನು ಹೊಂದಿತ್ತು. ಅವರು ಉದ್ದೇಶಪೂರ್ವಕವಾಗಿಯೇ ಒಂದು ದೊಡ್ಡ ವಿವಾದವನ್ನು ಸೃಷ್ಟಿಸಲು ಹೊರಟಿದ್ದರು ಎಂಬುದು ಸ್ಪಷ್ಟವಾಯಿತು. ಆ ಮೂಲಕ ಅವರು ಮನೆಯಿಂದ ಹೊರಹೋಗಿ, ಅದಕ್ಕೆ ಇಂದಿರಾ ಗಾಂಧಿ ಅವರೇ ಕಾರಣ ಎಂದು ಸಾರ್ವಜನಿಕವಾಗಿ ದೂಷಿಸಲು ಯೋಜಿಸಿದ್ದರು.” ಅವರು ತಮ್ಮ ಯೋಜನೆಯ ಬಗ್ಗೆ ವಾರಗಳ ಮೊದಲೇ ಪತ್ರಕರ್ತ ಸ್ನೇಹಿತರೊಬ್ಬರಿಗೆ ತಿಳಿಸಿದ್ದರು ಎಂದು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ.
ಮೇನಕಾ ಅವರು ಹೊರಡುವಾಗ ನಡೆದ ಜಗಳದ ಸಮಯದಲ್ಲಿ ರಾಜೀವ ಗಾಂಧಿ ಮತ್ತು ಸೋನಿಯಾ ಗಾಂಧಿ ಮನೆಯಲ್ಲಿ ಇರಲಿಲ್ಲ. ಆದರೂ, ಆ ಘಟನೆಗೆ ಅವರನ್ನೇ ದೂಷಿಸಲಾಯಿತು. “ಈ ಇಡೀ ಘಟನೆಯನ್ನು ನಿರ್ವಹಿಸಿದ ರೀತಿ ಮತ್ತು ಅದರ ಬೆನ್ನಲ್ಲೇ ನಡೆದ ಪ್ರಚಾರದ ತಮಾಷೆಯು, ಆ ಅಹಿತಕರ ಘಟನೆಯನ್ನು ಇಂದಿನ ಭಾಷೆಯಲ್ಲಿ ಹೇಳುವುದಾದರೆ ಒಂದು ‘ರಿಯಾಲಿಟಿ ಶೋ’ ಆಗಿ ಪರಿವರ್ತಿಸಿತು” ಎಂದು ಅವರು ಬರೆಯುತ್ತಾರೆ.
ನಂತರದ ವರ್ಷಗಳಲ್ಲಿ, ವರುಣ ಅವರನ್ನು ಭೇಟಿಯಾಗುವ ಹಕ್ಕಿಗಾಗಿ ಗಾಂಧಿ ಕುಟುಂಬವು ಮೇನಕಾ ಅವರ ವಿರುದ್ಧ ಕಾನೂನು ಹೋರಾಟ ನಡೆಸಿತು; ಆದರೆ, ವರುಣ ಅವರ ತಾಯಿ (ಮೇನಕಾ) ಇದಕ್ಕೆ ಅವಕಾಶ ನೀಡಲಿಲ್ಲ ಸೋನಿಯಾ ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement