

ನವದೆಹಲಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ ಕಲ್ಯಾಣ ಮತ್ತು ಅವರ ಪತ್ನಿ ಅನ್ನಾ ಕೊನಿಡೆಲಾ ಅವರು 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿರುವುದಾಗಿ ದಂಪತಿ ಘೋಷಿಸಿದ್ದಾರೆ.
ಪವನ ಕಲ್ಯಾಣ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ತಡರಾತ್ರಿ ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಪ್ರತ್ಯೇಕವಾಗುವ ನಿರ್ಧಾರವನ್ನು ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವದ ಆಧಾರದ ಮೇಲೆ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಮುಂದೆಯೂ ಉತ್ತಮ ಸ್ನೇಹಿತರಾಗಿ ಉಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
“ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಾದ ಮಕ್ಕಳಿಗೆ ಬದ್ಧರಾಗಿರುವ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಸಾಮಾನ್ಯ ಆದ್ಯತೆಯಾಗಿರಲಿದೆ” ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮ್ಮ ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿರುವ ದಂಪತಿ, ವೈಯಕ್ತಿಕ ಜೀವನದ ಈ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಕೋರಿದ್ದಾರೆ. “ನಮ್ಮ ಜೀವನದ ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ನಿಮ್ಮ ತಿಳಿವಳಿಕೆ, ದಯೆ ಮತ್ತು ನಮ್ಮ ಖಾಸಗಿತನಕ್ಕೆ ಗೌರವ ನೀಡಬೇಕೆಂದು ಕೋರುತ್ತೇವೆ. ಈ ಪಯಣದಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪವನ ಕಲ್ಯಾಣ ಅವರ ವೈವಾಹಿಕ ಜೀವನದಲ್ಲಿ ಇದು ಮೂರನೇ ವಿಚ್ಛೇದನವಾಗಿದೆ. ಅವರು 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. ಆದರೆ, 1999ರಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದರು. ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. ಆದರೆ, 2012ರಲ್ಲಿ ಅವರ ದಾಂಪತ್ಯ ಜೀವನ ವಿಚ್ಛೇದನದೊಂದಿಗೆ ಅಂತ್ಯಗೊಂಡಿತ್ತು.
2013ರಲ್ಲಿ ಪವನ ಕಲ್ಯಾಣಾವರು ರಷ್ಯಾ ಮೂಲದ ಅನ್ನಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಾರ್ಕ್ ಶಂಕರ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.
ನಟರಾದ ಚಿರಂಜೀವಿ ಮತ್ತು ನಾಗೇಂದ್ರ ಬಾಬು ಅವರ ಕಿರಿಯ ಸಹೋದರನಾಗಿರುವ ಪವನ ಕಲ್ಯಾಣ, 1996ರಲ್ಲಿ ತೆರೆಕಂಡ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
2024ರ ಜೂನ್ 14ರಂದು ಪವನ ಕಲ್ಯಾಣ ಅವರು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ರಾಜಕೀಯವಾಗಿ ಮಹತ್ವದ ಸ್ಥಾನದಲ್ಲಿರುವ ಪವನ ಕಲ್ಯಾಣ ಅವರ ವೈಯಕ್ತಿಕ ಜೀವನದಲ್ಲಿ 13 ವರ್ಷಗಳ ದಾಂಪತ್ಯಕ್ಕೆ ತೆರೆ ಬಿದ್ದಿದೆ.





ನಿಮ್ಮ ಕಾಮೆಂಟ್ ಬರೆಯಿರಿ