

ನವದೆಹಲಿ: ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ ಧನಕರ ಅವರು ಬುಧವಾರ ಬೆಳಗಿನ ವಾಕಿಂಗ್ ವೇಳೆ ಕುಸಿದು ಬಿದ್ದಿದ್ದು, ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಧನಕರ ಅವರ ಆರೋಗ್ಯ ಸ್ಥಿತಿಯ ಕುರಿತು ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
75 ವರ್ಷದ ಧನಕರ ಅವರನ್ನು ಏಮ್ಸ್ನ ಕಾರ್ಡಿಯೋ-ನ್ಯೂರೋ ಕೇಂದ್ರಕ್ಕೆ ದಾಖಲಿಸಲಾಗಿದೆ. ಹೃದ್ರೋಗ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಧನಕರ ಅವರು ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ, ಪೊಲೀಸ್ ಕಂಟ್ರೋಲ್ ರೂಂ (PCR) ವಾಹನದಲ್ಲಿ ಅವರನ್ನು ಮನೆಗೆ ಕರೆದೊಯ್ದಿದ್ದಾರೆ. ಕುಸಿದು ಬಿದ್ದ ಬಳಿಕ ಧನಕರ ಅವರು ಕೆಲವು ನಿಮಿಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ.
ಬಳಿಕ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ (ILBS) ವೈದ್ಯಕೀಯ ತಂಡ ಹಾಗೂ ಏಮ್ಸ್ ವೈದ್ಯ ಡಾ. ಸಂದೀಪ್ ಸೇಠ್ ಅವರು ಸ್ಥಳಕ್ಕೆ ಧಾವಿಸಿ ಅವರಿಗೆ ಪ್ರಾಥಮಿಕ ವೈದ್ಯಕೀಯ ಆರೈಕೆ ಒದಗಿಸಿದ್ದಾರೆ. ನಂತರ ಆಂಬ್ಯುಲೆನ್ಸ್ ಮೂಲಕ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡು ವರ್ಷಗಳಿಂದ ಪದೇಪದೆ ಪ್ರಜ್ಞೆ ತಪ್ಪುತ್ತಿರುವ ಧನಕರ್
ಕಳೆದ ಎರಡು ವರ್ಷಗಳಿಂದ ಜಗದೀಪ ಧನಕರ ಅವರು ಪದೇಪದೆ ಪ್ರಜ್ಞೆ ತಪ್ಪುವ ಸಮಸ್ಯೆ ಎದುರಿಸುತ್ತಿದ್ದಾರೆ. 2025ರ ಮಾರ್ಚ್ನಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್ನ ತೀವ್ರ ನಿಗಾ ಘಟಕಕ್ಕೆ (Critical Care Unit) ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಆಂಜಿಯೋಪ್ಲಾಸ್ಟಿ (Angioplasty) ಚಿಕಿತ್ಸೆ ನೀಡಲಾಗಿತ್ತು.
2025ರ ಜೂನ್ನಲ್ಲಿ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಉತ್ತರಾಖಂಡದ ನೈನಿತಾಲ್ಗೆ ತೆರಳಿದ್ದ ಸಂದರ್ಭದಲ್ಲಿ ಕೂಡ ಅವರು ಪ್ರಜ್ಞೆ ತಪ್ಪಿದ್ದರು.
ಇದೇ ವರ್ಷದ ಜನವರಿಯಲ್ಲಿ ಮನೆಯಲ್ಲೇ ಶೌಚಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಎರಡು ಬಾರಿ ಪ್ರಜ್ಞೆ ತಪ್ಪಿದ್ದರು ಎಂದು ವರದಿಯಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ