ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಮೋದಿ ನನ್ನ ಫೋನ್‌ ಟ್ಯಾಪ್ ಮಾಡುತ್ತಿದ್ದಾರೆ” : ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಆರೋಪ ; ಮುಖಾಮುಖಿ ಚರ್ಚೆಗೆ ಬರುವಂತೆ ಸವಾಲು

ನವದೆಹಲಿ: ಪ್ರಧಾನಿ ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಪುರಾವೆಗಳಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿರುವ ಅವರು, ಮೋದಿಯವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳು ತಮ್ಮ ಮೊಬೈಲ್ ಫೋನ್‌ನಲ್ಲಿವೆ. ಆದರೆ ಆ ಫೋನ್‌ ಅನ್ನು ಸ್ವತಃ ಪ್ರಧಾನಿಯವರೇ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ತಮ್ಮೊಂದಿಗೆ ಮೋದಿ ಅವರು ನೇರವಾಗಿ ಮುಖಾಮುಖಿ ಚರ್ಚೆಗೆ ಬಂದರೆ ಅವರ ರಾಜಕೀಯ ಜೀವನವೇ ಅಂತ್ಯಗೊಳ್ಳಲಿದೆ ಎಂದು ಸವಾಲು ಹಾಕಿದ್ದಾರೆ.
ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ‘ಆಸ್ಕ್ ಮೀ’ (Ask Me) ಸಂವಾದದ ವೇಳೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಸಂಸತ್ತಿನಲ್ಲೇ ಚರ್ಚೆ ನಡೆಸುವಂತೆ ಬಿಜೆಪಿ ನಾಯಕರು ಹೇಳುತ್ತಿದ್ದರೂ ಸಂಸತ್ತಿನಲ್ಲಿ ತನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಮೈಕ್ರೊಫೋನ್‌ ಅನ್ನೂ ಸ್ಥಗಿತಗೊಳಿಸಲಾಗುತ್ತಿದೆ. ಹೀಗಿರುವಾಗ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಹೇಳುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.
ಮತಗಳ್ಳತನ, ಚೀನಾ ವಿಚಾರ ಪ್ರಸ್ತಾಪ
ಕೃಷಿ ಕಾಯ್ದೆಗಳು, ಮತಗಳ್ಳತನ (ವೋಟ್ ಚೋರಿ), ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಚೀನಾ, ಜನರಲ್ ನರಾವಣೆ ಅವರ ಪುಸ್ತಕ ಹಾಗೂ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ತನ ಅವಕಾಶ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮುಖಾಮುಖಿ ಚರ್ಚೆ ಬಯಸುತ್ತೇನೆ. ಉದ್ದುದ್ದ ಭಾಷಣಗಳಿರುವ ಚರ್ಚೆ ನನಗೆ ಬೇಡ. ಮೋದಿ ಅವರು ನನ್ನ ಮೇಲೆ ಆರೋಪ ಮಾಡಲಿ, ನಾನು ಅವರ ಮೇಲೆ ಆರೋಪ ಮಾಡುತ್ತೇನೆ. ಇಬ್ಬರೂ ಮುಖಾಮುಖಿಯಾಗಿ ಕುಳಿತು ಮಾತನಾಡೋಣ. ಒಂದು ಮೇಜಿನ ಒಂದು ಬದಿಯಲ್ಲಿ ನರೇಂದ್ರ ಮೋದಿ ಇರಲಿ, ಮತ್ತೊಂದು ಬದಿಯಲ್ಲಿ ನಾನಿರುತ್ತೇನೆ. ಇಷ್ಟೇ ನನಗೆ ಬೇಕಾಗಿರುವುದು” ಎಂದು ಅವರು ಹೇಳಿದರು.
“ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಬಂದರೆ ಅವರು ಪ್ರಧಾನಿಯಾಗಿ ಮುಂದುವರಿಯುವುದಿಲ್ಲ ಎಂಬುದಕ್ಕೆ ನಾನು ಖಾತರಿ ನೀಡುತ್ತೇನೆ” ಎಂದು ಅವರು ಸವಾಲು ಹಾಕಿದರು.
ನನ್ನ ಫೋನ್‌ನಲ್ಲಿದೆ ಎಲ್ಲ ಆರೋಪಗಳಿಗೂ ಸಾಕ್ಷ್ಯ!
ಇದೇ ಸಂವಾದದ ವೇಳೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ತಾನು ಮಾಡಿರುವ ಎಲ್ಲ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಮೊಬೈಲ್ ಫೋನ್‌ನಲ್ಲಿವೆ ಎಂದು ಹೇಳಿದ್ದಾರೆ. ಆದರೆ, ಆ ಫೋನ್‌ ಅನ್ನು ಪ್ರಧಾನಿಯವರೇ ಕದ್ದಾಲಿಕೆ ಮಾಡುತ್ತಿದ್ದಾರೆ (ಫೋನ್ ಟ್ಯಾಪಿಂಗ್) ಎಂದು ಆರೋಪಿಸಿದರು.
ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಯಾರು ಇದ್ದಾರೆ, ಯಾರು ದೇಶವಿರೋಧಿ ಎಂಬುದನ್ನು ಪ್ರಧಾನಿ ಜೊತೆಗಿನ ಮುಖಾಮುಖಿ ಚರ್ಚೆ ಸಾಬೀತುಪಡಿಸಲಿದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ವಿವರಗಳು ತಮ್ಮ ಫೋನ್‌ನಲ್ಲಿವೆ ಎಂದು ಅವರು ಹೇಳಿಕೊಂಡರು.
ಈ ಕುರಿತು ಎಕ್ಸ್‌ (X) ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, “ಪ್ರಧಾನಿ ನನ್ನೊಂದಿಗೆ ಬಂದು ಚರ್ಚೆ ನಡೆಸಿದರೆ ಅವರ ರಾಜಕೀಯ ಜೀವನವೇ ಮುಗಿಯಲಿದೆ. ಈ ವಿಷಯ ಅವರಿಗೆ ಗೊತ್ತಿದೆ, ನನಗೂ ಗೊತ್ತಿದೆ” ಎಂದು ಹೇಳಿದ್ದಾರೆ.
“ಅವರು ನನ್ನನ್ನು ಪದೇಪದೇ ದೇಶವಿರೋಧಿ ಎಂದು ಕರೆಯುತ್ತಾರೆ. ಆದರೆ, ನಿಜವಾಗಿಯೂ ದೇಶವಿರೋಧಿ ಯಾರು? ಯಾರು ಯಾರ ನಿಯಂತ್ರಣದಲ್ಲಿದ್ದಾರೆ? ಯಾವಾಗಿನಿಂದ ಅವರ ನಿಯಂತ್ರಣದಲ್ಲಿದ್ದಾರೆ? ಎಂಬುದನ್ನು ದೇಶದ ಜನರಿಗೆ ಸ್ಪಷ್ಟವಾಗಿ ತೋರಿಸಲು ನಾನು ಬಯಸುತ್ತೇನೆ. ಇದರ ಹಿಂದಿನ ಸತ್ಯ ಅವರಿಗೆ ಗೊತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
https://x.com/SunilBNJha/status/2121226350404960487
ಮೋದಿ ನನ್ನ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ: ರಾಹುಲ್
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ವಿರುದ್ಧ ಟೀಕೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ತಮ್ಮ ಮೇಲಿನ ಒತ್ತಡದಿಂದಾಗಿ ಮೋದಿ ಅವರು ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
“ಒಂದು ವಿಚಾರವನ್ನು ಗಮನಿಸಿ. ಮೋದಿ ಅವರ ಮನಸ್ಸಿನಲ್ಲಿ ಸ್ವಲ್ಪ ಭಯವಿದೆ. ಏಕೆಂದರೆ, ಅವರು ಈಗ ನನ್ನ ಬಗ್ಗೆ ಮಾತನಾಡುತ್ತಿಲ್ಲ. ನನ್ನ ಮೇಲೆ ವಾಗ್ದಾಳಿ ನಡೆಸುವುದನ್ನೂ ನಿಲ್ಲಿಸಿದ್ದಾರೆ. ತುಂಬಾ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಇದಕ್ಕೆ ಒಂದು ಕಾರಣವಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ವಿಚಾರವಾಗಿ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರನ್ನು ವ್ಯಂಗ್ಯವಾಡಿದ್ದಾರೆ. “ಮೋದಿಜಿ, ನಿಮ್ಮದೇ ಆದ ‘ಗೋದಿ ಮೀಡಿಯಾ’ದ ದೀಪಾವಳಿ ಕೂಟದಲ್ಲಿಯೂ ನೀವು ಟೆಲಿಪ್ರಾಂಪ್ಟರ್ ಬಳಸಿದಿರಿ. ಅಲ್ಲಿ ಜನರು ನಿಮ್ಮವರೇ, ವೇದಿಕೆ ನಿಮ್ಮದೇ, ಇಡೀ ವಾತಾವರಣವೂ ನಿಮ್ಮ ಪರವಾಗಿಯೇ ಇತ್ತು. ಆದರೂ ನಿಮಗೆ ಭಾಷಣದ ಸ್ಕ್ರಿಪ್ಟ್ ಬೇಕಾಯಿತು. ಒತ್ತಡ ನಿಮ್ಮ ಮೇಲೂ ಪರಿಣಾಮ ಬೀರಿದಂತಿದೆ” ಎಂದು ಟೀಕಿಸಿದ್ದಾರೆ.
“ಪರವಾಗಿಲ್ಲ, ನನ್ನೊಂದಿಗಿನ ಚರ್ಚೆಗೂ ಟೆಲಿಪ್ರಾಂಪ್ಟರ್ ತೆಗೆದುಕೊಂಡು ಬನ್ನಿ. ನಿಮಗೆ ಇಷ್ಟವಾದವರನ್ನೇ ತೀರ್ಪುಗಾರರನ್ನಾಗಿ ಕೂರಿಸಿಕೊಳ್ಳಿ. ಆದರೆ ಚರ್ಚೆಗೆ ಬನ್ನಿ, ಅಷ್ಟೇ ಸಾಕು. ನಿಜವಾದ ದೇಶದ್ರೋಹಿ ಯಾರು ಎಂಬುದನ್ನು ತಿಳಿದುಕೊಳ್ಳಲು ದೇಶದ ಜನರು ಬಯಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement