ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಹಿರಿಯ ಪುತ್ರಿ ಐಶ್ವರ್ಯಾ ವಿರುದ್ಧ ಮಾನಹಾನಿಕರ ಆರೋಪ: ನಟ ಅರ್ಜುನ ಸರ್ಜಾ ದೂರು ದಾಖಲು

ಚೆನ್ನೈ: ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಖ್ಯಾತ ನಟ ಅರ್ಜುನ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ರಿಯ ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತವಾಗಿ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಬರಹ ಪ್ರಕಟಿಸಿರುವ ಅರ್ಜುನ ಸರ್ಜಾ, ಕೆಲವು ಮಾಧ್ಯಮಗಳು ತಮ್ಮ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಉಮಾಪತಿ ರಾಮಯ್ಯ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳನ್ನು ಪ್ರಕಟಿಸುತ್ತಿವೆ. ಅಲ್ಲದೆ, ತಮ್ಮ ಕಿರಿಯ ಪುತ್ರಿಯ ವಿವಾಹ ಸಮಾರಂಭದಲ್ಲಿ ಉಮಾಪತಿ ರಾಮಯ್ಯ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇದನ್ನು ಈ ದಂಪತಿಯ ನಡುವಿನ ವೈಮನಸ್ಸಿಗೆ ತಳುಕು ಹಾಕಿ ಸುದ್ದಿಗಳನ್ನು ಹರಡಲಾಗುತ್ತಿದೆ. ಇಂತಹ ಆಧಾರರಹಿತ ವರದಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೆಲವು ಮಾಧ್ಯಮಗಳ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿರುವ ಅರ್ಜುನ ಸರ್ಜಾ, “ಗೌರವ ಮತ್ತು ಘನತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು” ಎಂದು ಸ್ಪಷ್ಟಪಡಿಸಿದ್ದಾರೆ.
ನಟರಾಗಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಾಗ ವೈಯಕ್ತಿಕ ಬದುಕಿನ ಬಗ್ಗೆ ಊಹಾಪೋಹಗಳು ಮತ್ತು ಟೀಕೆಗಳು ಸಹಜ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ, ಊಹಾಪೋಹಗಳಿಗೂ ಉದ್ದೇಶಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಹರಡುವುದಕ್ಕೂ ಸ್ಪಷ್ಟ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ.

“ನಟರಾಗಿ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಮ್ಮ ಬಗ್ಗೆ ಹಲವು ರೀತಿಯ ಊಹಾಪೋಹಗಳು ಸಹಜ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ, ಊಹಾಪೋಹಗಳಿಗೂ ಯಾವುದೇ ಆಧಾರವಿಲ್ಲದ ಆರೋಪಗಳನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡುವುದಕ್ಕೂ ಸ್ಪಷ್ಟವಾದ ವ್ಯತ್ಯಾಸವಿದೆ. ಸಾರ್ವಜನಿಕರ ಗಮನ ಮತ್ತು ಟೀಕೆಗಳು ಯಾರಿಗಾದರೂ ಇಲ್ಲದ ಕಥೆಗಳನ್ನು ಸೃಷ್ಟಿಸಲು ಅಥವಾ ವ್ಯಕ್ತಿತ್ವ ಹರಣ ಮಾಡಲು ಪರವಾನಗಿ ನೀಡುವುದಿಲ್ಲ. ಯಾವುದೇ ಆಧಾರವಿಲ್ಲದೆ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಎಂದು ಹಣೆಪಟ್ಟಿ ಕಟ್ಟುವುದು ಸೇರಿದಂತೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ಸ್ವೀಕಾರಾರ್ಹವಲ್ಲದ ನಡೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ಇಂತಹ ವಿಚಾರಗಳಿಗೆ ಮೌನವಾಗಿರುವುದನ್ನೇ ಸೂಕ್ತವೆಂದು ಭಾವಿಸಿದ್ದೆವು. ಆದರೆ, ಮೌನವನ್ನು ತಪ್ಪುಗಳನ್ನು ಒಪ್ಪಿಕೊಂಡಂತೆ ಪರಿಗಣಿಸಬಾರದು. ಸುಳ್ಳು ಮಾಹಿತಿಗಳು ಮತ್ತೆ ಮತ್ತೆ ಹರಡಲು ಮತ್ತು ವ್ಯಾಪಕವಾಗಿ ಪ್ರಚಾರಗೊಳ್ಳಲು ಅವಕಾಶ ನೀಡಬಾರದು. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸುವ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.
ಇದು ಕೇವಲ ನನ್ನ ಮಗಳ ವಿಚಾರವಲ್ಲ
ತಮ್ಮ ಪುತ್ರಿಯ ವಿರುದ್ಧದ ಅಪಪ್ರಚಾರವನ್ನು ಕೇವಲ ಕುಟುಂಬದ ವೈಯಕ್ತಿಕ ಸಮಸ್ಯೆಯಾಗಿ ನೋಡಬಾರದು ಎಂದು ಅಭಿಪ್ರಾಯಪಟ್ಟಿರುವ ಅರ್ಜುನ್ ಸರ್ಜಾ, ಮಹಿಳೆಯರ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕುರಿತಾದ ಮಹತ್ವದ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.

ಪ್ರಮುಖ ಸುದ್ದಿ :-   ಅಖಿಲೇಶ ಯಾದವ್ ರೋಡ್‌ಶೋ ವೇಳೆ ಹೂಮಳೆ ಸುರಿಸಲು ತಂದಿದ್ದ ಜೆಸಿಬಿ ಡಿಕ್ಕಿ ಹೊಡೆದು ಬಿಜೆಪಿ ನಾಯಕನ ಪುತ್ರ ಸಾವು

“ಇದು ಕೇವಲ ನನ್ನ ಮಗಳ ವಿಚಾರವಲ್ಲ. ಪ್ರತಿಯೊಬ್ಬ ಮಹಿಳೆಯ ಘನತೆಯನ್ನು ಪ್ರಶ್ನಿಸುವ, ಆಕೆಯ ವೈಯಕ್ತಿಕ ಆಯ್ಕೆಗಳನ್ನು ಸಾರ್ವಜನಿಕರ ತೀರ್ಪಿಗೆ ಒಳಪಡಿಸುವ ಮನೋಭಾವದ ವಿರುದ್ಧದ ಹೋರಾಟವೂ ಹೌದು. ಕುಟುಂಬದ ಬೆಂಬಲ ಇಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ವಿಶೇಷವಾಗಿ ಹಾನಿಕಾರಕವಾಗಬಹುದು. ಈಗಾಗಲೇ ಕಠಿಣ ಪರಿಸ್ಥಿತಿಯಲ್ಲಿರುವ ಅವರ ಬದುಕನ್ನು ಇಂತಹ ಆರೋಪಗಳು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ. ಯಾವ ಮಹಿಳೆಯೂ ಇಂತಹ ಪರಿಸ್ಥಿತಿಯನ್ನು ಒಬ್ಬಂಟಿಯಾಗಿ ಎದುರಿಸುವಂತಾಗಬಾರದು. ತಾನು ಹೇಗೆ ಬದುಕಬೇಕು, ಯಾವ ರೀತಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಆಕೆಗೆ ಎದುರಾಗಬಾರದು” ಎಂದು ಅವರು ಹೇಳಿದ್ದಾರೆ.
ತಂದೆಯಾಗಿ ತಮ್ಮ ಮಗಳ ಪರವಾಗಿ ಸದಾ ನಿಲ್ಲುವುದಾಗಿ ಸ್ಪಷ್ಟಪಡಿಸಿರುವ ಅರ್ಜುನ ಸರ್ಜಾ, “ನನ್ನ ಮಗಳ ಘನತೆ, ಸ್ವಾತಂತ್ರ್ಯ ಮತ್ತು ಸ್ವತಂತ್ರವಾಗಿ ಬದುಕುವ ಹಕ್ಕಿನ ಪರವಾಗಿ ತಂದೆಯಾಗಿ ನಾನು ಯಾವಾಗಲೂ ನಿಲ್ಲುತ್ತೇನೆ” ಎಂದು ಭರವಸೆ ನೀಡಿದ್ದಾರೆ.
2024ರ ಜೂನ್‌ನಲ್ಲಿ ವಿವಾಹವಾಗಿದ್ದ ಐಶ್ವರ್ಯಾ–ಉಮಾಪತಿ
ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಮತ್ತು ಖ್ಯಾತ ನಟ ಥಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರು 2024ರ ಜೂನ್ 10ರಂದು ಚೆನ್ನೈನಲ್ಲಿ ವಿವಾಹವಾಗಿದ್ದರು. ಈ ಜೋಡಿತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಅರ್ಜುನ ಸರ್ಜಾ ನಿರೂಪಣೆ ಮಾಡಿದ್ದ ‘ಸರ್ವೈವರ್’ (Survivor) ಎಂಬ ಕಿರುತೆರೆ ರಿಯಾಲಿಟಿ ಕಾರ್ಯಕ್ರಮದ ಮೂಲಕ ಐಶ್ವರ್ಯಾ ಮತ್ತು ಉಮಾಪತಿ ಪರಿಚಯವಾಗಿದ್ದರು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ, ಇಬ್ಬರೂ ವಿವಾಹವಾಗಿದ್ದರು.
ವಿವಾಹದ ಬಳಿಕ ಈ ಜೋಡಿ ಅದ್ದೂರಿ ಆರತಕ್ಷತೆಯನ್ನೂ ಆಯೋಜಿಸಿತ್ತು. ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ತಮ್ಮ ಪುತ್ರಿಯ ದಾಂಪತ್ಯ ಜೀವನದ ಬಗ್ಗೆ ಹರಡುತ್ತಿರುವ ವದಂತಿಗಳು ಮತ್ತು ವೈಯಕ್ತಿಕ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಆರೋಪಗಳ ವಿರುದ್ಧ ಅರ್ಜುನ ಸರ್ಜಾ ಈಗ ಬಹಿರಂಗವಾಗಿಯೇ ಧ್ವನಿ ಎತ್ತಿದ್ದಾರೆ. ಮಹಿಳೆಯರ ಘನತೆ, ಗೌರವ ಮತ್ತು ವೈಯಕ್ತಿಕ ಬದುಕಿನ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂಬ ಸಂದೇಶವನ್ನು ತಮ್ಮ ಹೇಳಿಕೆಯ ಮೂಲಕ ರವಾನಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಿಎಂ ಸ್ಟಾಲಿನ್‌ಗೆ ಸೋಲುಣಿಸಿದ್ದ ಟಿವಿಕೆ ಶಾಸಕ ವಿ.ಎಸ್. ಬಾಬು ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement