

ಗೋರಖಪುರ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ್ ಅವರ ಪಿಡಿಎ (PDA) ರಥಯಾತ್ರೆಯ ವೇಳೆ ಹೂಮಳೆ ಸುರಿಸಲು ಬಳಸಿದ್ದ ಜೆಸಿಬಿ ಡಿಕ್ಕಿ ಹೊಡೆದು ಬಿಜೆಪಿ ಸ್ಥಳೀಯ ಮುಖಂಡರೊಬ್ಬರ 14 ವರ್ಷದ ಪುತ್ರ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ಬುಧವಾರ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಮುಖ್ಯ ರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮೃತ ಬಾಲಕನನ್ನು ಬಿಜೆಪಿ ಮುಖಂಡ ಓಂಕಾರ ಸಿಂಗ್ ಅವರ ಪುತ್ರ ಆರ್ಯವರ್ಧನ ಸಿಂಗ್ ಎಂದು ಗುರುತಿಸಲಾಗಿದೆ. ಗೋರಖಪುರ ವಿಮಾನ ನಿಲ್ದಾಣದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕುಧಾಘಾಟ್ನ ಮಹಾದೇವ ಝಾರ್ಖಂಡಿ ಗೇಟ್ ಸಮೀಪ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಅಖಿಲೇಶ ಯಾದವ್ ಅವರು ಗೋರಖಪುರ ವಿಮಾನ ನಿಲ್ದಾಣದಿಂದ ಪಿಡಿಎ ರಥದಲ್ಲಿ ದೇವಕಲಿ ಗ್ರಾಮದತ್ತ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಸಮಾಜವಾದಿ ಪಕ್ಷದ ಕಾರ್ಯಕರ್ತರು ಜೆಸಿಬಿ ಯಂತ್ರವನ್ನು ತಂದಿದ್ದರು. ಅಖಿಲೇಶ ಯಾದವ್ ಅವರ ಮೇಲೆ ಹೂಮಳೆ ಸುರಿಸುವ ಉದ್ದೇಶದಿಂದ ರಥಯಾತ್ರೆಯ ಹಿಂದೆ ಜೆಸಿಬಿ ಮೂಲಕ ಹೂವುಗಳನ್ನು ಚೆಲ್ಲಲಾಗುತ್ತಿತ್ತು. ಇದೇ ವೇಳೆ ಬಿಜೆಪಿ ಮುಖಂಡ ಓಂಕಾರ್ ಸಿಂಗ್ ಅವರ ಪುತ್ರ ಆರ್ಯವರ್ಧನ ಸಿಂಗ್ ವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಜೆಸಿಬಿ ಆತನಿಗೆ ಡಿಕ್ಕಿ ಹೊಡೆದು ಹರಿದಿದೆ. ಜೆಸಿಬಿ ಹರಿದ ರಭಸಕ್ಕೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಮ್ಮ ಮಗ ಕೇಂದ್ರೀಯ ವಿದ್ಯಾಲಯದಿಂದ ಸಹೋದರಿಯನ್ನು ಕರೆತರಲು ಹೋಗುತ್ತಿದ್ದ. ಅಖಿಲೇಶ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿತ್ತು. ಅಖಿಲೇಶ ಯಾದವ್ ಅವರ ವಾಹನಗಳ ಸಾಲು ಮುಂದೆ ಸಾಗಿತ್ತು. ಆದರೆ, ಅವರ ಹಿಂದೆ ಬರುತ್ತಿದ್ದ ಹೂಮಳೆ ಸುರಿಸುವ ಜೆಸಿಬಿ ಅತ್ಯಂತ ವೇಗವಾಗಿ ಚಲಿಸುತ್ತಿತ್ತು. ಅಖಿಲೇಶ ಯಾದವ್ ಅವರ ಮೇಲೆ ಹಿಂದಿನಿಂದಲೂ ಹೂವುಗಳನ್ನು ಸುರಿಸುವ ಉದ್ದೇಶದಿಂದ ಜೆಸಿಬಿಯನ್ನು ವೇಗವಾಗಿ ಚಲಾಯಿಸಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ನನ್ನ ಮಗ ರಸ್ತೆ ದಾಟುತ್ತಿದ್ದಾಗ ಬುಲ್ಡೋಜರ್ ಹಿಂದಿನಿಂದ ಬಂದು ತನ್ನ ಮಗನಿಗೆ ಡಿಕ್ಕಿ ಹೊಡೆಯಿತು ಎಂದು ಅವರು ಆರೋಪಿಸಿದರು.


ಈ ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ (road divider) ಅಪ್ಪಳಿಸಿದ ಪರಿಣಾಮ, ಅವರ ತಲೆಯ ಹಿಂಭಾಗದಲ್ಲಿ ಗಂಭೀರ ಗಾಯವಾಯಿತು. ನಂತರ ಅವರು ಮೃತಪಟ್ಟರು.ಪರಿಣಾಮ ನನ್ನ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ” ಎಂದು ತಂದೆ ಓಂಕಾರ ಸಿಂಗ್ ಅಳಲು ತೋಡಿಕೊಂಡಿದ್ದಾರೆ.
ಘಟನೆಯ ಬಳಿಕ ಮೃತ ಬಾಲಕನ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ನಿಯೋಜಿಸಲಾಗಿದ್ದ ಜೆಸಿಬಿಯಿಂದಲೇ ಬಾಲಕನ ಸಾವು ಸಂಭವಿಸಿದೆ ಎಂದು ಅವರು ಆರೋಪಿಸಿದರು. ಕೂಡಲೇ ಪ್ರಕರಣ ದಾಖಲಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ದೀಪಕ ಮೀನಾ, ಕುಟುಂಬದವರ ಬೇಡಿಕೆಯಂತೆ ಸಂಬಂಧಪಟ್ಟ ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
”ಮಧ್ಯಾಹ್ನ ಸುಮಾರು 3:30ರ ವೇಳೆಗೆ ಇಲ್ಲಿ 14 ವರ್ಷದ ಆರ್ಯವರ್ಧನ್ ಸಿಂಗ್ ಜೆಸಿಬಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ರಥಯಾತ್ರೆ ಅಥವಾ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ರಸ್ತೆಯಲ್ಲಿ ನಿಯೋಜಿಸಲಾಗಿದ್ದ ಜೆಸಿಬಿಯಿಂದಲೇ ಬಾಲಕನ ಸಾವು ಸಂಭವಿಸಿದೆ ಎಂದು ಕುಟುಂಬದವರು ಹಾಗೂ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಈ ಸಂಬಂಧ ತಕ್ಷಣ ಎಫ್ಐಆರ್ ದಾಖಲಿಸುವಂತೆ ಅವರು ಒತ್ತಾಯಿಸಿದ್ದು, ಈಗಾಗಲೇ ಲಿಖಿತ ದೂರು ಸಲ್ಲಿಸುತ್ತಿದ್ದಾರೆ. ದೂರಿನ ಆಧಾರದ ಮೇಲೆ ಸಂಬಂಧಪಟ್ಟ ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುವುದು. ಅಪಘಾತಕ್ಕೆ ಕಾರಣವಾದ ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ” ಎಂದು ಜಿಲ್ಲಾಧಿಕಾರಿ ದೀಪಕ ಮೀನಾ ತಿಳಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ. ಇಂದು ಗೋರಖಪುರದಲ್ಲಿರುವ ಮೃತ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ ಎಂದು ವರದಿಗಳು ತಿಳಿಸಿವೆ.



ನಿಮ್ಮ ಕಾಮೆಂಟ್ ಬರೆಯಿರಿ