

ನವದೆಹಲಿ: ಭಾರತದಲ್ಲಿ ಚಿನ್ನದ ಆಮದು ಪ್ರಮಾಣದಲ್ಲಿ ಈ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಏಳು ತಿಂಗಳ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ. 40ರಷ್ಟು ಭಾರಿ ಇಳಿಕೆಯಾಗಿದೆ. ಈ ಅವಧಿಯಲ್ಲಿ ಭಾರತ 24.7 ಬಿಲಿಯನ್ ಡಾಲರ್ (ಅಂದಾಜು 2.47 ಲಕ್ಷ ಕೋಟಿ ರೂ.) ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (ಸಿಟಿಐ) ಅಧ್ಯಕ್ಷ ಬೃಜೇಶ್ ಗೋಯಲ್ ತಿಳಿಸಿದ್ದಾರೆ.
2025ರ ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಅವಧಿಯಲ್ಲಿ ಭಾರತ 41.24 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ 2026ರ ಇದೇ ಅವಧಿಯಲ್ಲಿ ಆಮದು ಪ್ರಮಾಣ 24.7 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 16.46 ಬಿಲಿಯನ್ ಡಾಲರ್ ಮೌಲ್ಯದಷ್ಟು ಚಿನ್ನದ ಆಮದು ಕಡಿಮೆಯಾಗಿದೆ ಎಂದು ಗೋಯಲ್ ವಿವರಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಖರೀದಿಯಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎಂದಿದ್ದಾರೆ.
2025-26ನೇ ಹಣಕಾಸು ವರ್ಷದಲ್ಲಿ ಭಾರತ ಸುಮಾರು 72 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ 2026-27ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಪ್ರಮಾಣ 35ರಿಂದ 40 ಬಿಲಿಯನ್ ಡಾಲರ್ಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ಮಾಡಿದ್ದ ಮನವಿಯ ಪರಿಣಾಮ ಆಮದು ಪ್ರಮಾಣದ ಮೇಲೆ ಗೋಚರಿಸುತ್ತಿದೆ ಎಂದು ಬೃಜೇಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿಯವರ ಮನವಿಯ ಬಳಿಕ ಚಿನ್ನದ ಖರೀದಿಯಲ್ಲಿ ಇಳಿಕೆಯಾಗಿರುವುದು ವ್ಯಾಪಾರ ವಹಿವಾಟಿನ ಅಂಕಿಅಂಶಗಳಲ್ಲಿಯೂ ಪ್ರತಿಫಲಿಸಿದೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಚಿನ್ನದ ಆಮದು ಪ್ರಮಾಣದಲ್ಲಿ ಅತ್ಯಂತ ತೀವ್ರ ಕುಸಿತ ದಾಖಲಾಗಿದೆ. 2025ರ ಅಕ್ಟೋಬರ್ನಲ್ಲಿ 14.72 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಆಮದಾಗಿದ್ದರೆ, 2026ರ ಅಕ್ಟೋಬರ್ನಲ್ಲಿ ಈ ಪ್ರಮಾಣ 5.51 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದೆ. ಅಂದರೆ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಚಿನ್ನದ ಆಮದು ಸುಮಾರು ಶೇ. 62.6ರಷ್ಟು ಕುಸಿದಿದೆ ಎಂದು ದೆಹಲಿ ಚಾಂದಿನಿ ಚೌಕ್ ಕ್ಷೇತ್ರದ ಸಂಸದ ಹಾಗೂ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಪ್ರಧಾನ ಕಾರ್ಯದರ್ಶಿ ಪ್ರವೀಣ ಖಂಡೇಲ್ವಾಲ್ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಪ್ರಧಾನಿ ಮೋದಿ ಅವರು, ಅತ್ಯಂತ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅದರ ಪರಿಣಾಮ ದೇಶದ ಆರ್ಥಿಕ ಅಂಕಿಅಂಶಗಳಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಖಂಡೇಲ್ವಾಲ್ ತಿಳಿಸಿದ್ದಾರೆ.
ಚಿನ್ನದ ಬೆಲೆಯಲ್ಲಿನ ಇಳಿಕೆಯೂ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಸಿಟಿಐ ಅಧ್ಯಕ್ಷ ಬೃಜೇಶ್ ಗೋಯಲ್ ತಿಳಿಸಿದ್ದಾರೆ. ಪ್ರಧಾನಿಯವರ ಮನವಿ ಮಾಡಿದ್ದ ಸಂದರ್ಭದಲ್ಲಿ ಒಂದು ಕೆ.ಜಿ. ಚಿನ್ನದ ಬೆಲೆ ಸುಮಾರು 1.90 ಕೋಟಿ ರೂ. ಇತ್ತು. ಇದೀಗ ಅದರ ಬೆಲೆ ಸುಮಾರು 1.25 ಕೋಟಿ ರೂ.ಗೆ ಇಳಿಕೆಯಾಗಿದೆ. ಅಂದರೆ ಪ್ರತಿ ಕೆ.ಜಿ. ಚಿನ್ನದ ಬೆಲೆಯಲ್ಲಿ ಸುಮಾರು 65 ಲಕ್ಷ ರೂ.ಗಳಷ್ಟು ಇಳಿಕೆಯಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಚಿನ್ನದ ಬೆಲೆಯಲ್ಲಿನ ಈ ಬದಲಾವಣೆಯಿಂದ ಹಬ್ಬಗಳು ಮತ್ತು ಮದುವೆ ಸಮಾರಂಭಗಳ ಋತುವಿನಲ್ಲಿ ಆಭರಣ ವ್ಯಾಪಾರಿಗಳು ಹಾಗೂ ಚಿನ್ನದ ವ್ಯಾಪಾರಿಗಳಿಗೆ ತಮ್ಮ ದಾಸ್ತಾನು ನಿರ್ವಹಣೆ ಸುಲಭವಾಗಿದೆ. ಮತ್ತೊಂದೆಡೆ, ಗ್ರಾಹಕರು ಕೂಡ ಹಿಂದಿನ ಬೆಲೆಗಳಿಗೆ ಹೋಲಿಸಿದರೆ ತುಸು ಕಡಿಮೆ ದರದಲ್ಲಿ ಚಿನ್ನ ಖರೀದಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಮದುವೆ ಋತುವಿನಲ್ಲಿ ದೇಶಾದ್ಯಂತ ಸುಮಾರು 52 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಇದರಿಂದ ಅಂದಾಜು 6 ಲಕ್ಷ ಕೋಟಿ ರೂ.ಗಳಷ್ಟು ವ್ಯಾಪಾರ ವಹಿವಾಟು ನಡೆಯಬಹುದು ಎಂದು ಗೋಯಲ್ ಅಂದಾಜಿಸಿದ್ದಾರೆ. ಈ ಒಟ್ಟು ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಆಭರಣಗಳ ವ್ಯಾಪಾರದ ಪಾಲು ಸುಮಾರು ಶೇ. 8ರಿಂದ 10ರಷ್ಟಿರಬಹುದು ಎಂದು ಅವರು ಹೇಳಿದ್ದಾರೆ.
ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಮದುವೆ ಸಮಾರಂಭಗಳ ಸಂದರ್ಭದಲ್ಲಿ ಕುಟುಂಬಗಳು ಆಭರಣ ಖರೀದಿಸಲು ತಗಲುವ ವೆಚ್ಚವೂ ಕಡಿಮೆಯಾಗಬಹುದು. ಇದರಿಂದ ಮದುವೆ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಬೃಜೇಶ್ ಗೋಯಲ್ ತಿಳಿಸಿದ್ದಾರೆ.





ನಿಮ್ಮ ಕಾಮೆಂಟ್ ಬರೆಯಿರಿ