ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕೆಎಸ್‌ಆರ್‌ಟಿಸಿ ಪುರುಷ ನೌಕರರಿಗೆ ಗುಡ್ ನ್ಯೂಸ್ ; 15 ದಿನಗಳ ಪಿತೃತ್ವ ರಜೆ ಮಂಜೂರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಪುರುಷ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪುರುಷ ನೌಕರರಿಗೆ ತಮ್ಮ ಪತ್ನಿಯ ಹೆರಿಗೆಯ ಸಂದರ್ಭದಲ್ಲಿ 15 ದಿನಗಳ ವೇತನ ಸಹಿತ ಪಿತೃತ್ವ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ 2026ರ ಅಕ್ಟೋಬರ್ 24ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಬಳಿಕ ನವೆಂಬರ್ 24ರಂದು ಸುತ್ತೋಲೆ ಸಂಖ್ಯೆ 1759ರ ಮೂಲಕ ನಿಗಮದ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವಿಭಾಗಗಳಿಗೆ ಹೊಸ ನಿಯಮದ ಕುರಿತು ಮಾಹಿತಿ ನೀಡಲಾಗಿದೆ.
ಮಗುವಿನ ಜನನದ ಸಂದರ್ಭದಲ್ಲಿ ಹೆರಿಗೆಯ ಬಳಿಕ ತಾಯಿ ಮತ್ತು ನವಜಾತ ಶಿಶುವಿನ ಆರೈಕೆಯಲ್ಲಿ ತಂದೆಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ನಿಗಮವು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಪುರುಷ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಸಂದರ್ಭದಲ್ಲಿ ಒಟ್ಟು 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲಾಗುತ್ತದೆ. ಈ ರಜೆಯು ಪತ್ನಿಯ ಹೆರಿಗೆಯ ದಿನಾಂಕದಿಂದಲೇ ಆರಂಭವಾಗಲಿದೆ. ರಜೆಯ ಸಂದರ್ಭದಲ್ಲಿ ನೌಕರರಿಗೆ ಅವರು ರಜೆ ಪಡೆಯುವುದಕ್ಕೂ ಮುನ್ನ ಅವರು ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜೆ ವೇತನ ನೀಡಲಾಗುತ್ತದೆ. ಹೀಗಾಗಿ 15 ದಿನಗಳ ಪಿತೃತ್ವ ರಜೆ ಪಡೆದರೂ ನೌಕರರ ವೇತನದಲ್ಲಿ ಯಾವುದೇ ಕಡಿತವಾಗುವುದಿಲ್ಲ.

ಪ್ರಮುಖ ಸುದ್ದಿ :-   ಬೆಂಗಳೂರು : 5.72 ಕೋಟಿ ರೂ. ಮೌಲ್ಯದ 5.72 ಕೆ.ಜಿ. ಎಂಡಿಎಂಎ ಡ್ರಗ್ಸ್‌ ವಶ

ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಅನ್ವಯವಿಲ್ಲ
ಪಿತೃತ್ವ ರಜೆ ಪಡೆಯಲು ನಿಗಮ ಕೆಲವು ಷರತ್ತುಗಳನ್ನು ವಿಧಿಸಿದೆ. ಈಗಾಗಲೇ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಪುರುಷ ನೌಕರರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ಪಿತೃತ್ವ ರಜೆಯನ್ನು ನೌಕರರ ಯಾವುದೇ ರಜೆ ಲೆಕ್ಕದಿಂದ ಕಡಿತಗೊಳಿಸುವುದಿಲ್ಲ. ಸಾಂದರ್ಭಿಕ ರಜೆಯನ್ನು ಹೊರತುಪಡಿಸಿ, ಇತರ ಯಾವುದೇ ರಜೆಗಳೊಂದಿಗೆ ಪಿತೃತ್ವ ರಜೆಯನ್ನು ಸಂಯೋಜಿಸಿಕೊಳ್ಳಲು ಅವಕಾಶವಿದೆ. ಆದರೆ, ಈ ರಜೆಯನ್ನು ನಗದೀಕರಣ ಮಾಡಲು ಅವಕಾಶವಿಲ್ಲ. ಹಾಗೆಯೇ ಗಳಿಕೆ ರಜೆಯೊಂದಿಗೆ ಪಿತೃತ್ವ ರಜೆಯನ್ನು ವಿಲೀನಗೊಳಿಸುವಂತೆಯೂ ಇಲ್ಲ.
2021ರಲ್ಲೇ ನಿರ್ದೇಶಕರ ಮಂಡಳಿಯಿಂದ ಅನುಮೋದನೆ
ಕೆಎಸ್‌ಆರ್‌ಟಿಸಿ ಪುರುಷ ನೌಕರರಿಗೆ ಪಿತೃತ್ವ ರಜೆ ನೀಡುವ ಪ್ರಸ್ತಾವನೆಗೆ ನಿಗಮದ ನಿರ್ದೇಶಕರ ಮಂಡಳಿಯು 2021ರ ಡಿಸೆಂಬರ್ 28ರಂದು ನಡೆದ ಸಭೆಯಲ್ಲೇ ಅನುಮೋದನೆ ನೀಡಿತ್ತು. ಇದೀಗ ರಾಜ್ಯ ಸರ್ಕಾರದ ಅನುಮೋದನೆಯೂ ದೊರೆತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ರಜಾ ನಿಯಮಗಳು-1964ಕ್ಕೆ ತಿದ್ದುಪಡಿ ತರಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement