

ಶಿವಮೊಗ್ಗ: ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದ ಬಳಿ ತುಂಗಾ ನದಿಗೆ ತೆರಳಿದ್ದ ಬೆಂಗಳೂರಿನ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಸಂಜೆಯ ವೇಳೆಗೆ ಒಬ್ಬರ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಇತರ ಮೂವರಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
.ನದಿಯಲ್ಲಿ ಮುಳುಗಿದ ನಾಲ್ವರಲ್ಲಿ ಇಬ್ಬರು ಕಾನೂನು ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬರು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಲ್ಕನೇ ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರ ಕುರಿತ ಹೆಚ್ಚಿನ ವಿವರಗಳನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.
ಪೊಲೀಸರ ಪ್ರಕಾರ, ಬೆಂಗಳೂರಿನಿಂದ ಎರಡು ವಾಹನಗಳಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ತಂಡವೊಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಮಹಿಷಿ ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳಿದ್ದರು. ಈ ಸಂದರ್ಭದಲ್ಲಿ ಯುವಕರ ತಂಡ ಈಜಾಡುವ ಸಲುವಾಗಿ ಮೊದಲಿಗೆ ಅಕ್ಕಪಕ್ಕ ಯಾವುದಾದರೂ ನದಿ ಇರುವ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.
ಮಹಿಷಿ ಗ್ರಾಮದ ಬಳಿ ತುಂಗಾ ನದಿ ಹರಿಯುವ ಬಗ್ಗೆ ತಿಳಿದುಕೊಂಡು ಈಜಾಡಲು ತೆರಳಿದ್ದಾರೆ ಎಂದು ಹೇಳಲಾಗಿದೆ. ನದಿಗೆ ಇಳಿದಾಗ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿ ಒಬ್ಬೊಬ್ಬರಂತೆ ಮೂವರು ಸಹ ಮುಳುಗಿದ್ದಾರೆ ಎನ್ನಲಾಗಿದೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ತೀರ್ಥಹಳ್ಳಿಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗುರುವಾರ ಸಂಜೆಯ ವೇಳೆಗೆ ನದಿಯಿಂದ ಒಂದು ಮೃತದೇಹವನ್ನು ಹೊರತೆಗೆದಿದ್ದಾರೆ. ಉಳಿದ ಮೂವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ನಡುವೆ ಮಾಳೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆಗೆ ನೆರವಾಗುತ್ತಿದ್ದಾರೆ.





ನಿಮ್ಮ ಕಾಮೆಂಟ್ ಬರೆಯಿರಿ