ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಎನ್‌ಸಿಪಿ ಬೆಂಬಲ : ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆ

ಮುಂಬೈ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಷನ್) ಪ್ರಕ್ರಿಯೆಗೆ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಬೆಂಬಲ ನೀಡಲು ನಿರ್ಧರಿಸಿದೆ. ಪಕ್ಷದ ನಾಯಕ ಜಿತೇಂದ್ರ ಅವ್ಹಾದ್‌ ಶುಕ್ರವಾರ ಮುಂಬೈನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಈ ಕುರಿತ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎನ್‌ಸಿಪಿಯ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ ಅವ್ಹಾಡ್, ಕ್ಷೇತ್ರ ಪುನರ್‌ವಿಂಗಡಣೆ ಸಂವಿಧಾನಾತ್ಮಕ ಅಗತ್ಯವಾಗಿದ್ದು, ಈ ಪ್ರಕ್ರಿಯೆಗೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಶರದ್ ಪವಾರ್ ಅವರೊಂದಿಗೆ ನಡೆದ ಚರ್ಚೆ ಪಕ್ಷದ ಅಧಿಕೃತ ನಿಲುವಿನ ಕುರಿತಾಗಿಯೇ ನಡೆದಿರಲಿಲ್ಲ. ಆದರೆ, ಕ್ಷೇತ್ರ ಪುನರ್‌ವಿಂಗಡಣೆ ಸಂವಿಧಾನಾತ್ಮಕವಾಗಿ ಅಗತ್ಯವಾದ ಪ್ರಕ್ರಿಯೆ ಎಂಬ ಸಾಮಾನ್ಯ ಅಭಿಪ್ರಾಯ ವ್ಯಕ್ತವಾಯಿತು. ಈ ಪ್ರಕ್ರಿಯೆಯನ್ನು ಬೆಂಬಲಿಸಲು ನಿರ್ಧರಿಸಲಾಗಿದ್ದು, ಪಕ್ಷ ಅದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವ್ಹಾದ್‌ ಸ್ಪಷ್ಟಪಡಿಸಿದರು.
ಆದರೆ, ಕೇಂದ್ರ ಸರ್ಕಾರ ಮಂಡಿಸಲಿರುವ ಮಸೂದೆಯಲ್ಲಿನ ನಿರ್ದಿಷ್ಟ ಅಂಶಗಳ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳುವುದಿಲ್ಲ. ಮಸೂದೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕವೇ ಅದರಲ್ಲಿರುವ ಪ್ರಸ್ತಾವನೆಗಳ ಕುರಿತು ಪಕ್ಷ ತನ್ನ ನಿಲುವು ಪ್ರಕಟಿಸಲಿದೆ ಎಂದರು.
ಮಸೂದೆಯನ್ನು ಖಂಡಿತವಾಗಿಯೂ ಅಧ್ಯಯನ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದಂತೆ ಸುಪ್ರಿಯಾ ತಾಯಿ (ಸುಪ್ರಿಯಾ ಸುಳೆ) ಅವರು ಕೈಗೊಳ್ಳುವ ನಿರ್ಧಾರದಂತೆ ಎಲ್ಲವೂ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಮಹಿಳಾ ಜಿಲ್ಲಾಧಿಕಾರಿಗೆ ಅಶ್ಲೀಲ ಸಂದೇಶ; ಕಿರುಕುಳ: ಟಿವಿಕೆ ಶಾಸಕನ ಬಂಧನ

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ ಅವರ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾವತ್ ಅವರಿಗೆ ತಮ್ಮದೇ ಆದ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದರು. ಶರದ್ ಪವಾರ್ ಅವರೊಂದಿಗಿನ ತಮ್ಮ ದೀರ್ಘಕಾಲದ ನಂಟನ್ನು ಉಲ್ಲೇಖಿಸಿದ ಅವರು, 1986ರಿಂದಲೇ ಪವಾರ್ ಕುಟುಂಬದ ಭಾಗವಾಗಿದ್ದೇನೆ. ನಿಷ್ಠೆ ಎಂದರೇನು ಎಂಬುದು ನಮಗೆ ಗೊತ್ತಿದೆ. ಅವರು ತೆಗೆದುಕೊಳ್ಳುವ ನಿರ್ಧಾರವೇ ನಮ್ಮೆಲ್ಲರಿಗೂ ಅಂತಿಮ ಎಂದು ಹೇಳಿದರು.
ಕ್ಷೇತ್ರ ಪುನರ್‌ವಿಂಗಡಣೆಗೆ ಬೆಂಬಲಿಸಲು ಎನ್‌ಸಿಪಿಯ ಮೂರು ಷರತ್ತುಗಳು
ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ಎನ್‌ಸಿಪಿ-ಎಸ್‌ಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಈಗಾಗಲೇ ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ.
ಮೊದಲನೆಯದಾಗಿ, ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು. ಎರಡನೆಯದಾಗಿ, ದೇಶದ ಎಲ್ಲ ರಾಜ್ಯಗಳಲ್ಲೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸಬೇಕು. ಮೂರನೆಯದಾಗಿ, ಕ್ಷೇತ್ರ ಪುನರ್‌ವಿಂಗಡಣೆ ಆಯೋಗದಲ್ಲಿ ವಿರೋಧ ಪಕ್ಷಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬುದು ಪಕ್ಷದ ಬೇಡಿಕೆಯಾಗಿದೆ.
ಕ್ಷೇತ್ರಗಳ ಗಡಿ ಮರುವಿನ್ಯಾಸಗೊಳಿಸುವ ಜವಾಬ್ದಾರಿ ಹೊಂದಿರುವ ಕ್ಷೇತ್ರ ಪುನರ್‌ವಿಂಗಡಣೆ ಆಯೋಗದಲ್ಲಿ ಪ್ರತಿಪಕ್ಷಗಳಿಗೂ ಸಮರ್ಪಕ ಅವಕಾಶ ಇರಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ. ಈಗಾಗಲೇ ಕೇಂದ್ರ ಸಚಿವ ಸಂಪುಟವು ದೇಶಾದ್ಯಂತ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಆದರೆ, ಸಂಸತ್ತಿನ ವಿಸ್ತರಣೆ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಇಂಡಿಯಾ (INDIA) ಮೈತ್ರಿಕೂಟದ ಪಕ್ಷಗಳು ಕೇಂದ್ರದ ಪ್ರಸ್ತಾವನೆಯನ್ನು ವಿರೋಧಿಸಿವೆ.

ಪ್ರಮುಖ ಸುದ್ದಿ :-   ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ; ತಿರುಪರಂಕುಂದ್ರಂ ದೇವಾಲಯದ ಟ್ರಸ್ಟಿಗಳ ಅಮಾನತು ; ನ.28ರಂದು ದೀಪ ಬೆಳಗಿಸಲು ಆದೇಶ

ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಎನ್‌ಸಿಪಿ ಭಾಗಿ
ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಶನಿವಾರ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಎನ್‌ಸಿಪಿ-ಎಸ್‌ಪಿ ಭಾಗವಹಿಸಲಿದೆ ಎಂದು ಜಿತೇಂದ್ರ ಅವ್ಹಾದ್‌ ಖಚಿತಪಡಿಸಿದ್ದಾರೆ.
ಸಭೆಯಲ್ಲಿ ಪಕ್ಷ ಭಾಗವಹಿಸಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾವು ಸಭೆಗೆ ಹೋಗುತ್ತೇವೆ’ ಎಂದು ಅವರು ಉತ್ತರಿಸಿದರು.
ತಂದೆ ಶರದ್ ಪವಾರ್ ಅವರ ಆರೋಗ್ಯದ ಹಿನ್ನೆಲೆಯಲ್ಲಿ ಸಭೆಯಲ್ಲಿ ತಾವು ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಸುಪ್ರಿಯಾ ಸುಳೆ ಈ ಹಿಂದೆ ತಿಳಿಸಿದ್ದರು. ಆದರೆ, ಪಕ್ಷದ ಸಂಸದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಇದೇ ವೇಳೆ, ನವೆಂಬರ್ 30ರಿಂದ ಲೋಕಸಭೆಯ ಕಲಾಪ ನಡೆಯುವ ಅವಧಿಯಲ್ಲಿ ಪಕ್ಷದ ಎಲ್ಲ ಎಂಟು ಲೋಕಸಭಾ ಸದಸ್ಯರು ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಎನ್‌ಸಿಪಿ-ಎಸ್‌ಪಿ ವಿಪ್ ಜಾರಿಗೊಳಿಸಿದೆ. ಪಕ್ಷಕ್ಕೆ ರಾಜ್ಯಸಭೆಯಲ್ಲಿ ಒಬ್ಬ ಸದಸ್ಯರಿದ್ದಾರೆ.
ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ ಪ್ರಸ್ತಾವನೆಗೆ ಬೆಂಬಲ ನೀಡುವ ನಿರ್ಧಾರ ಪ್ರಕಟಿಸಿರುವ ಎನ್‌ಸಿಪಿ-ಎಸ್‌ಪಿ, ಮಸೂದೆಯ ನಿರ್ದಿಷ್ಟ ಅಂಶಗಳ ಕುರಿತು ಸುಪ್ರಿಯಾ ಸುಳೆ ಮುಂದಿಟ್ಟಿರುವ ಮೂರು ಷರತ್ತುಗಳ ಆಧಾರದಲ್ಲಿ ತನ್ನ ಮುಂದಿನ ನಿಲುವು ರೂಪಿಸಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement