ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ತೆನಾಲಿಯ ಮಹಾಭಾಷ್ಯದ ಅಂತಿಮ ಮಹಾಪರೀಕ್ಷೆಯಲ್ಲಿ ಉತ್ತೀರ್ಣ : ಉನ್ನತ ಸಾಧನೆಗೈದ ಮಹೇಶ ಭಟ್ಟರಿಗೆ ಕಾಂಚಿ ಶ್ರೀಗಳಿಂದ ʼವ್ಯಾಕರಣ ಪ್ರಕಾಶಕʼ ಬಿರುದು

ಯಲ್ಲಾಪುರ: ಸಂಸ್ಕೃತ ವ್ಯಾಕರಣ ಶಾಸ್ತ್ರದ ಅತ್ಯಂತ ಕಠಿಣ ಹಾಗೂ ಉನ್ನತ ಅಧ್ಯಯನಗಳಲ್ಲಿ ಒಂದಾದ ಪತಂಜಲಿ ಮಹರ್ಷಿಗಳ ಮಹಾಭಾಷ್ಯಕ್ಕೆ ಸಂಬಂಧಿಸಿದ ತೆನಾಲಿಯ ಮಹಾಭಾಷ್ಯದ ಅಂತಿಮ ಮಹಾಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವ್ಯಾಕರಣ ಪ್ರಾಧ್ಯಾಪಕರಾ ಮಹೇಶ ಭಟ್ ಇಡಗುಂದಿ ಅವರು ಅಪರೂಪದ ಹಾಗೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಅಪರೂಪದ ಸಾಧನೆಗಾಗಿ ಅವರಿಗೆ ಕಾಂಚೀ ಜಗದ್ಗುರುಗಳು “ವ್ಯಾಕರಣ ಪ್ರಕಾಶಕ” ಎನ್ನುವ ಬಿರುದು ನೀಡಿ ಆಶೀರ್ವದಿಸಿದ್ದಾರೆ.
ಸಂಸ್ಕೃತ ವ್ಯಾಕರಣ ಶಾಸ್ತ್ರದ ಆಳವಾದ ಅಧ್ಯಯನಕ್ಕೆ ಸಂಬಂಧಿಸಿದ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಅವರ ಸತತ ಅಧ್ಯಯನದ ಪ್ರತೀಕವಾಗಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಕೇಂದ್ರವಾಗಿಟ್ಟುಕೊಂಡು ಕಾಂಚಿ ಕಾಮಕೋಟಿ ಪೀಠದ ಆಶ್ರಯದಲ್ಲಿ ನಡೆಯುವ ಈ ಪರೀಕ್ಷಾ ವ್ಯವಸ್ಥೆ ಹಲವು ಹಂತಗಳನ್ನು ಒಳಗೊಂಡಿದೆ. ಮಹಾಭಾಷ್ಯ ಅಧ್ಯಯನದ ವಿದ್ಯಾರ್ಥಿಗಳು ಒಟ್ಟು 13 ಹಂತಗಳ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾದ ಬಳಿಕ ಅಂತಿಮ ಮಹಾಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಈ ಮಹಾಪರೀಕ್ಷೆಯಲ್ಲಿಯೂ ಉತ್ತೀರ್ಣರಾಗುವುದು ವಿಶೇಷ ಸಾಧನೆಯಾಗಿದೆ.
ಪಾಣಿನಿಯ ಅಷ್ಟಾಧ್ಯಾಯೀ, ಕಾತ್ಯಾಯನರ ವಾರ್ತಿಕಗಳು ಹಾಗೂ ಪತಂಜಲಿ ಮಹರ್ಷಿಗಳ ಮಹಾಭಾಷ್ಯದ ಆಳವಾದ ಅಧ್ಯಯನ ಈ ಪರೀಕ್ಷೆಯ ಪ್ರಮುಖ ಭಾಗವಾಗಿದೆ. ಕೇವಲ ಗ್ರಂಥಗಳ ಓದು ಮಾತ್ರವಲ್ಲದೆ, ವ್ಯಾಕರಣ ಸೂತ್ರಗಳ ಅರ್ಥ, ಅವುಗಳ ಹಿಂದಿನ ತರ್ಕ, ಭಾಷಾಶಾಸ್ತ್ರೀಯ ವಿಚಾರಗಳು ಹಾಗೂ ಶಾಸ್ತ್ರಾರ್ಥಗಳನ್ನು ಸಮರ್ಥವಾಗಿ ವಿವರಿಸುವ ಸಾಮರ್ಥ್ಯವೂ ಇಲ್ಲಿ ಅಗತ್ಯವಾಗುತ್ತದೆ.

ಪ್ರಮುಖ ಸುದ್ದಿ :-   ಕೆಎಸ್‌ಆರ್‌ಟಿಸಿ ಪುರುಷ ನೌಕರರಿಗೆ ಗುಡ್ ನ್ಯೂಸ್ ; 15 ದಿನಗಳ ಪಿತೃತ್ವ ರಜೆ ಮಂಜೂರು

ವಿದ್ವಾನ್‌ ರಾಮಚಂದ್ರ ಭಟ್‌ ಹಾಗೂ ವಿದ್ವಾನ್‌ ವೆಂಕಟೇಶ ಭಟ್‌ ಅವರಲ್ಲಿ ಸುದೀರ್ಘ ಅಧ್ಯಯನ ನಡೆಸಿ, ಹಂತ ಹಂತವಾಗಿ ನಡೆಯುವ ಕಠಿಣ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ ಅಂತಿಮ ಮಹಾಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿರುವ ಮಹೇಶ ಭಟ್ ಅವರ ಸಾಧನೆ ಸಂಸ್ಕೃತ ವ್ಯಾಕರಣ ಪರಂಪರೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.
ಪ್ರಾಚೀನ ಭಾರತೀಯ ಜ್ಞಾನಪರಂಪರೆಯ ಅಮೂಲ್ಯ ಗ್ರಂಥಗಳ ಅಧ್ಯಯನ ಮತ್ತು ಸಂರಕ್ಷಣೆಯ ನಿಟ್ಟಿನಲ್ಲಿ ಅವರ ಈ ಸಾಧನೆ ಗಮನಾರ್ಹವಾಗಿದ್ದು, ಉಮ್ಮಚಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಹೆಮ್ಮೆಯ ಸಂಗತಿಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement