

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಏಪ್ರಿಲ್ 30, 1983 ರಂದು ಭಾರತೀಯ ಪೌರತ್ವ ನೀಡಲಾಗಿತ್ತು, ಆದರೆ ಅದಕ್ಕೂ ಮುನ್ನವೇ 1980 ಮತ್ತು 1983 ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿತ್ತು ಎಂದು ದೆಹಲಿ ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭಾರತೀಯ ಪೌರತ್ವ ಪಡೆಯುವ ಮೊದಲೇ ಸೋನಿಯಾ ಗಾಂಧಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಕಾಸ ತ್ರಿಪಾಠಿ ಎಂಬುವವರು ಸಲ್ಲಿಸಿರುವ ದೂರಿನ ವಿಚಾರಣೆ ವೇಳೆ ದೆಹಲಿ ಪೊಲೀಸರು ದೆಹಲಿಯ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ವಿನೋದ್ ಜೋಶಿ ಅವರ ನ್ಯಾಯಾಲಯದಲ್ಲಿ ಪೊಲೀಸರು ಈ ವಿವರಗಳನ್ನು ಸಲ್ಲಿಸಿದ್ದಾರೆ.
ತುಘಲಕ್ ರಸ್ತೆ ಪೊಲೀಸ್ ಠಾಣೆಯ ತನಿಖಾಧಿಕಾರಿ, ಸಬ್ ಇನ್ಸ್ಪೆಕ್ಟರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ವಿಧಾನಸಭಾ ಕ್ಷೇತ್ರ ಸಂಖ್ಯೆ 40ರ ಚುನಾವಣಾ ನೋಂದಣಾಧಿಕಾರಿ (ಇಆರ್ಒ) ನವೆಂಬರ್ 25ರಂದು ನೀಡಿರುವ ಪತ್ರದಲ್ಲಿ ಸೋನಿಯಾ ಗಾಂಧಿ ಅವರ ಹೆಸರು 1980 ಮತ್ತು 1983ರ ಮತದಾರರ ಪಟ್ಟಿಗಳಲ್ಲಿ ಇತ್ತು ಎಂಬುದನ್ನು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಕೇಂದ್ರ ಗೃಹ ಸಚಿವಾಲಯದ ವಿದೇಶಿಗರ ವಿಭಾಗದಿಂದಲೂ ಪೊಲೀಸರು ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಈ ದಾಖಲೆಗಳಲ್ಲಿ ಸೋನಿಯಾ ಗಾಂಧಿ ಅವರ ಪೌರತ್ವ ಪ್ರಮಾಣಪತ್ರವೂ ಸೇರಿದೆ. ಅದರ ಪ್ರಕಾರ, ಅವರಿಗೆ 1983ರ ಏಪ್ರಿಲ್ 30ರಂದು ಭಾರತೀಯ ಪೌರತ್ವ ನೀಡಲಾಗಿದೆ ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇನ್ನೂ ಕೆಲವು ದಾಖಲೆಗಳು ಲಭ್ಯವಾಗಬೇಕಿರುವುದರಿಂದ ತನಿಖೆ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ನೀಡುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ. ದೆಹಲಿಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ದಾಖಲೆ ಕೊಠಡಿಯ ಉಸ್ತುವಾರಿ ಅಧಿಕಾರಿಗೆ ಈಗಾಗಲೇ ಎರಡು ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಅವರಿಂದ ಉತ್ತರಗಳು ಇನ್ನೂ ಬಂದಿಲ್ಲ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಬಾಕಿ ಇರುವ ದಾಖಲೆಗಳು ಲಭ್ಯವಾಗಿ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಈ ಪ್ರಕರಣದಲ್ಲಿ ಸಂಜ್ಞೇಯ ಅಪರಾಧ (ಕಾಗ್ನಿಸಬಲ್ ಆಫೆನ್ಸ್) ನಡೆದಿದೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.


ಆದರೆ, ಪೊಲೀಸರ ಈ ಮನವಿಗೆ ದೂರುದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೂರುದಾರ ವಿಕಾಸ ತ್ರಿಪಾಠಿ ಪರ ಹಾಜರಾಗಿದ್ದ ಹಿರಿಯ ವಕೀಲ ಅಜಯ ಬರ್ಮನ್ ಅವರು, 2026ರ ಸೆಪ್ಟೆಂಬರ್ 21ರಂದು ಪರಿಷ್ಕರಣಾ ನ್ಯಾಯಾಲಯ ನೀಡಿದ್ದ ಆದೇಶದ ಮೇರೆಗೆ ಪೊಲೀಸರು ಈಗಾಗಲೇ ತನಿಖೆ ನಡೆಸಲು ಅವಕಾಶ ಪಡೆದಿದ್ದಾರೆ. ಆರೋಪಗಳಿಗೆ ಸಂಬಂಧಿಸಿದ ಅಂಶಗಳ ಪರಿಶೀಲನೆಯೂ ಆಗಿದೆ. ಹೀಗಿರುವಾಗ ಮತ್ತಷ್ಟು ತನಿಖೆಯ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.
ಈ ವೇಳೆ ನ್ಯಾಯಾಲಯವೂ ಪೊಲೀಸರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಸೂಕ್ತ ತನಿಖೆ ನಡೆಸಲು ಈಗಾಗಲೇ ಅವಕಾಶ ನೀಡಿದ್ದರೂ ಪೊಲೀಸರು ಈವರೆಗೆ ಯಾವುದೇ ನಿರ್ಣಾಯಕ ವರದಿಯನ್ನು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.ಆದಾಗ್ಯೂ, ಪೊಲೀಸರಿಗೆ ಮತ್ತೊಂದು ಅವಕಾಶ ನೀಡಿದ ನ್ಯಾಯಾಲಯ, ಮುಂದಿನ ವಿಚಾರಣೆಯ ವೇಳೆಗೆ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸಂಜ್ಞೇಯ ಅಪರಾಧ ನಡೆದಿದೆಯೇ ಮತ್ತು ಎಫ್ಐಆರ್ ದಾಖಲಿಸಲಾಗಿದೆಯೇ ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ, ತುಘಲಕ್ ರಸ್ತೆ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ಎಚ್ಒ) ಡಿಸೆಂಬರ್ 14ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ಕ್ರಮ ಕೈಗೊಂಡ ವರದಿ (ಆಕ್ಷನ್ ಟೇಕನ್ ರಿಪೋರ್ಟ್)ಯನ್ನೂ ತಮ್ಮೊಂದಿಗೆ ತರಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ