ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ವಿಡಿಯೋ| 5.0 ತೀವ್ರತೆ ಭೂಕಂಪಕ್ಕೆ ನಡುಗಿದ ಲಾಸ್ ಏಂಜಲೀಸ್‌; 40ಕ್ಕೂ ಹೆಚ್ಚು ಕಂಪನ, ಲ್ಯಾಂಡಿಂಗ್‌ಗೆ ಬಂದು ವಾಪಸ್‌ ಹೋದ ವಿಮಾನ

ಲಾಸ್ ಏಂಜಲೀಸ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕರಾವಳಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ಪರಿಣಾಮ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಲ್‌ಎಎಕ್ಸ್‌) ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಲ್ಯಾಂಡಿಂಗ್‌ಗೆ ಮುಂದಾಗಿದ್ದ ಡೆಲ್ಟಾ ಏರ್‌ಲೈನ್ಸ್‌ನ ವಿಮಾನವೊಂದು ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ರದ್ದುಗೊಳಿಸಿ ಮತ್ತೆ ಆಕಾಶಕ್ಕೆ ಹಾರಿದೆ. ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಒಳಭಾಗದಲ್ಲಿದ್ದ ಗಾಜುಗಳು ಒಡೆದುಹೋಗಿದ್ದು, ಭೂಕಂಪದ ಬಳಿಕ ಆ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಕಂಪನಗಳು (ಆಫ್ಟರ್‌ಶಾಕ್ಸ್‌) ದಾಖಲಾಗಿವೆ.
ಭೂಕಂಪ ಸಂಭವಿಸುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ನೇರಪ್ರಸಾರದ ದೃಶ್ಯಾವಳಿಯಲ್ಲಿ (ಲೈವ್‌ಸ್ಟ್ರೀಮ್‌) ಡೆಲ್ಟಾ ಏರ್‌ಲೈನ್ಸ್‌ನ ವಿಮಾನವೊಂದು ರನ್‌ವೇ ಕಡೆಗೆ ಇಳಿಯುತ್ತಿರುವುದು ಸೆರೆಯಾಗಿದೆ. ಇದೇ ವೇಳೆ ಭೂಮಿ ಕಂಪಿಸಲಾರಂಭಿಸಿದ್ದು, ವಿಮಾನ ಸಂಚಾರ ನಿಯಂತ್ರಣ ಕೇಂದ್ರದ (ಎಟಿಸಿ) ಅಧಿಕಾರಿಗಳು ಪೈಲಟ್‌ಗಳಿಗೆ ತಕ್ಷಣವೇ ಲ್ಯಾಂಡಿಂಗ್‌ ನಿಲ್ಲಿಸಿ ಮತ್ತೆ ಮೇಲಕ್ಕೆ ಹಾರುವಂತೆ ಸೂಚಿಸಿದ್ದಾರೆ.
ಭೂಕಂಪದ ತೀವ್ರತೆಯಿಂದಾಗಿ ಕ್ಯಾಮೆರಾ ಕೂಡ ಏಕಾಏಕಿ ಅಲುಗಾಡುತ್ತಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಇದೇ ಸಂದರ್ಭದಲ್ಲಿ ಹೊರಭಾಗದಲ್ಲಿ ವಾಹನಗಳ ಅಲಾರಂಗಳು ಮೊಳಗುತ್ತಿರುವ ಶಬ್ದವೂ ಕೇಳಿಸಿದೆ. ಕೆಲವೇ ಕ್ಷಣಗಳಲ್ಲಿ ವಿಮಾನ ಸಂಚಾರ ನಿಯಂತ್ರಕರು ಪೈಲಟ್‌ಗಳಿಗೆ ‘ಗೋ ಅರೌಂಡ್‌’ (ಲ್ಯಾಂಡಿಂಗ್‌ ರದ್ದುಗೊಳಿಸಿ ಮತ್ತೆ ಮೇಲಕ್ಕೆ ಹಾರುವಂತೆ) ಸೂಚನೆ ನೀಡಿದ್ದಾರೆ. ಅದರಂತೆ ವಿಮಾನವು ರನ್‌ವೇಯಿಂದ ಮೇಲಕ್ಕೆ ಹಾರಿದೆ.
‘ನಮಗೆ ಭಾರಿ ಭೂಕಂಪದ ಅನುಭವವಾಗುತ್ತಿದೆ’
ಡೆಲ್ಟಾ ಏರ್‌ಲೈನ್ಸ್‌ನ 1972ನೇ ಸಂಖ್ಯೆಯ ವಿಮಾನಕ್ಕೆ ಲ್ಯಾಂಡಿಂಗ್‌ ರದ್ದುಗೊಳಿಸುವಂತೆ ಸೂಚನೆ ನೀಡಿದ ವಿಮಾನ ಸಂಚಾರ ನಿಯಂತ್ರಕರು, “ಡೆಲ್ಟಾ 1972, ಗೋ ಅರೌಂಡ್‌. ನಮಗೆ ಭಾರಿ ಭೂಕಂಪ ಸಂಭವಿಸುತ್ತಿದೆ” ಎಂದು ಪೈಲಟ್‌ಗಳಿಗೆ ತಿಳಿಸಿದ್ದಾರೆ. ಈ ಸಂಭಾಷಣೆಯೂ ಲೈವ್‌ ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಫ್ಲೈಟ್‌ಅವೇರ್‌ (FlightAware) ವಿಮಾನ ಸಂಚಾರ ಮಾಹಿತಿ ಪ್ರಕಾರ, ಭೂಕಂಪದ ಪರಿಣಾಮ ಡೆಲ್ಟಾ 1972 ವಿಮಾನವು ಒಂದು ಗಂಟೆ 13 ನಿಮಿಷ ತಡವಾಗಿ ಸಂಚರಿಸಿದೆ.
ಭೂಕಂಪ ಸಂಭವಿಸಿದ ಬಳಿಕ ತಕ್ಷಣಕ್ಕೆ ಯಾವುದೇ ಗಂಭೀರ ಗಾಯಗಳಾಗಿರುವ ಅಥವಾ ಪ್ರಮುಖ ಕಟ್ಟಡಗಳಿಗೆ ಭಾರಿ ಹಾನಿಯಾಗಿರುವ ವರದಿಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾನ್‌ಹ್ಯಾಟನ್‌ ಬೀಚ್‌ ಸಮೀಪ ಭೂಕಂಪದ ಕೇಂದ್ರಬಿಂದು
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (ಯುಎಸ್‌ಜಿಎಸ್‌) ನೀಡಿರುವ ಮಾಹಿತಿಯ ಪ್ರಕಾರ, ಶನಿವಾರ ಸ್ಥಳೀಯ ಕಾಲಮಾನ ಬೆಳಗ್ಗೆ ಸುಮಾರು 9:30ಕ್ಕೆ ದಕ್ಷಿಣ ಕ್ಯಾಲಿಫೋರ್ನಿಯಾದ ಮ್ಯಾನ್‌ಹ್ಯಾಟನ್‌ ಬೀಚ್‌ನ ಪಶ್ಚಿಮ-ನೈಋತ್ಯ ಭಾಗದಿಂದ ಸುಮಾರು 3.7 ಮೈಲಿ ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 7.6 ಮೈಲಿ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.
ಭೂಕಂಪದ ಕಂಪನಗಳು ಲಾಸ್ ಏಂಜಲೀಸ್‌ನ ಹಲವು ಪ್ರದೇಶಗಳಲ್ಲಿ ಅನುಭವಕ್ಕೆ ಬಂದಿದ್ದು, ಸಾಂಟಾ ಮೋನಿಕಾ ಮತ್ತು ಪಸಡೇನಾ ಸೇರಿದಂತೆ ವಿವಿಧ ನಗರ ಪ್ರದೇಶಗಳ ಜನರು ಭೂಮಿ ಕಂಪಿಸಿದ ಅನುಭವವನ್ನು ವರದಿ ಮಾಡಿದ್ದಾರೆ ಎಂದು ಸಿಎನ್‌ಎನ್‌ ತಿಳಿಸಿದೆ.
ಯುಎಸ್‌ಜಿಎಸ್‌ನ ಇತ್ತೀಚಿನ ಅಂಕಿಅಂಶಗಳನ್ನು ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿರುವಂತೆ, ಆರಂಭಿಕ ಭೂಕಂಪದ ಬಳಿಕ ಕನಿಷ್ಠ 40ಕ್ಕೂ ಹೆಚ್ಚು ಭೂಕಂಪನೋತ್ತರ ಕಂಪನಗಳು ದಾಖಲಾಗಿವೆ. ಅಲ್ಲದೆ, ಮುಂದಿನ ದಿನಗಳಲ್ಲಿ 4.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಮತ್ತೊಂದು ಕಂಪನ ಸಂಭವಿಸುವ ಸಾಧ್ಯತೆ ಶೇ.30ರಷ್ಟಿದೆ ಎಂದು ಸಂಸ್ಥೆ ಅಂದಾಜಿಸಿದೆ.ಭೂಕಂಪನೋತ್ತರ ಕಂಪನಗಳ ಸಾಧ್ಯತೆ ಇರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.
 ಕ್ಯಾಲಿಫೋರ್ನಿಯಾ ರಾಜ್ಯದ ತುರ್ತು ಸೇವೆಗಳ ಕಚೇರಿ (ಕ್ಯಾಲ್‌ ಓಇಎಸ್‌) ಕೂಡ ಭೂಕಂಪದ ಪರಿಣಾಮಗಳ ಮೌಲ್ಯಮಾಪನಕ್ಕಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ. ಮುಂದಿನ ಕಂಪನಗಳ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement