ಕೋವಿಡ್‌ ತಡೆ: ಇಂದು ಸಿಎಂ ಬೊಮ್ಮಾಯಿ ಮಹತ್ವದ ಸಭೆ, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಜಾರಿ..?

ಬೆಂಗಳೂರು : ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್‌ ಹೇರಿಕೆಯಾಗುತ್ತದೆಯಾ..? ನೈಟ್‌ ಕರ್ಪ್ಯೂ ಅವಧಿ ವಿಸ್ತರಣೆಯ ಜೊತೆಗೆ ವೀಕೆಂಡ್‌ ಕರ್ಫ್ಯೂ ಜಾರಿಯಾಗುತ್ತದೆಯೇ ಎನ್ನುವ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಶನಿವಾರ) ಕೋವಿಡ್‌ ಕುರಿತು ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಇವೆಲ್ಲ ಸಂಗತಿಗಳ ಬಗ್ಗೆ ಚರ್ಚೆಯಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ರಾಜ್ಯದ ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತರಹ ನಿರ್ಬಂಧ ಜಾರಿ ಮಾಡುವಂತೆ ಈಗಾಗಲೇ ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಮೂರನೇ ಅಲೆ ಭೀತಿ ಹಾಗೂ ಪಕ್ಕದ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಮಟ್ಟಿಗೆ ನೈಟ್‌ ಕರ್ಪ್ಯೂ ಅವಧಿಯನ್ನು ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಜಾರಿ ಮಾಡಬೇಕು. ಬಸ್ಸುಗಳ ಸಂಚಾರದ ಅವಧಿಯಲ್ಲಿಯೂ ಕಡಿತಗೊಳಿಸುವುದು ಹಾಗೂ ಕೈಗಾರಿಕೆ ಸಿಬ್ಬಂದಿಗೂ ಮಿತಿ ನಿಗದಿಗೊಳಿಸಬೇಕು. ಮದುವೆ, ಅಂತ್ಯಸಂಸ್ಕಾರಗಳಿ, ಜನಸಂದಣಿಯ ಮಾರುಕಟ್ಟೆ ಮೇಲೆ ನಿರ್ಬಂಧ ಹೇರುವಂತೆ ತಜ್ಞರು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೈಟ್‌ ಕರ್ಪ್ಯೂ ಹಾಗೂ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಈ ಜಿಲ್ಲೆಗಳಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರುವ ಚಿಂತನೆ ನಡೆಸಿದೆ. ಆಗಸ್ಟ್‌ 15ರ ನಂತರ ಇವೆಲ್ಲ ಜಾರಿಗೆ ಬರುವ ಸಾಧ್ಯತೆಯಿದೆ. ಯಾಕೆಂದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ.3ಕ್ಕಿಂತಲೂ ಹೆಚ್ಚಾಗಿದೆ. ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ ಕರ್ನಾಟಕಕ್ಕೆ ಕ್ರಮ ಅನಿವಾರ್ಯವಾಗುತ್ತಿದೆ.
ಬೆಂಗಳೂರಿನಲ್ಲಿಯೂ ಒಂದು ಹಂತಕ್ಕಿಂತ ಪ್ರಕರಣ ಕಡಿಮೆಯಾಗುತ್ತಿಲ್ಲ. ಇನ್ನೊಂದೆಡೆ ಯಲ್ಲಿ ಡೆಲ್ಟಾ ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ. ಹೀಗಾಗಿ ಕೇರಳ, ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇರಿಸಲಾಗಿದೆ. ಅದರಲ್ಲಿಯೂ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ.ಈ ಕಾರಣಕ್ಕಾಗಿ ಅಪಾರ್ಟ್‌ಮೆಂಟ್‌ಗಳಿಗಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದೆ. ಉತ್ತರ ಕನ್ನಡದಲ್ಲಿಯೂ ಇದೆ. ದಕ್ಷಿಣ ಕನ್ನಡದಲ್ಲಂತೂ ಬೆಂಗಳೂರನ್ನೂ ಮೀರಿಸಿ ಸೋಂಕುಗಳು ಹೆಚ್ಚುತ್ತಿವೆ. ಈ ಸಭೆಯಲ್ಲಿ ಇವೆಲ್ಲ ಸಂಗತಿಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಅಗಸ್ಟ್‌ ಕೊನೆಯ ವಾರದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯ ಸರಕಾರ ಘೋಷಣೆಯನ್ನು ಮಾಡಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ಮಕ್ಕಳನ್ನು ಕಾಡುತ್ತಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಶಾಲಾರಂಭದ ಕುರಿತು ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement