ಕನ್ನಡದ ಹಿರಿಯ ನಟಿ ಲೀಲಾವತಿ ಇನ್ನಿಲ್ಲ..

ಬೆಂಗಳೂರು : ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ (86) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಆದರೆ ಇಂದು ಗುರುವಾರ (ಡಿಸೆಂಬರ್‌ 8) ಮಧ್ಯಾಹ್ನ ಅನಾರೋಗ್ಯ ಸಮಸ್ಯೆಯಾಗಿದ್ದರಿಂದ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಪುತ್ರ ವಿನೋದರಾಜ​ (Vinod Raj) ಅವರನ್ನು ಲೀಲಾವತಿ ಅಗಲಿದ್ದಾರೆ. ಮಗ ವಿನೋದ ರಾಜ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ಸೋಲದೇವನಹಳ್ಳಿಯ ಫಾರ್ಮ್‌ ಹೌಸ್‌ನಲ್ಲಿ ನೆಲೆಸಿದ್ದರು. ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಲೀಲಾವತಿ ಅವರು ಕೆಲವು ದಿನಗಳಿಂದ ವಯೋ ಸಹಜ ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ಯೋಗ ಕ್ಷೇಮ ವಿಚಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಅವರು 1938ರಲ್ಲಿ ಜನಿಸಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ಲೀಲಾವತಿ ಕನ್ನಡದ ಖ್ಯಾತ ನಟರಾದ ರಾಜ​ಕುಮಾರ​, ವಿಷ್ಣುವರ್ಧನ, ಅಂಬರೀಷ, ಅನಂತನಾಗ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ನಟರ ಜೊತೆ ಅಭಿನಯಿಸಿದ್ದರು. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ಮೂಲತಃ ಲೀಲಾ ಕಿರಣ ಹೆಸರಿನ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ಮೈಸೂರಿನಲ್ಲಿ ವೃತ್ತಿಜೀವನ ಆರಂಭಿಸಿದರು. ಆರನೇ ವಯಸ್ಸಿಗೇ ಪಾಲಕರನ್ನು ಕಳೆದುಕೊಂಡ ಅವರು ಚಿಕ್ಕ ವಯಸ್ಸಿನಲ್ಲೇ  ಸಿನಿಮಾ ನಾಟಕರಂಗಗಳಲ್ಲಿ ಅಭಿನಯಿಸಿದರು. ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿದ ಲೀಲಾವತಿ  ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಕಯಾದುವಿನ ಸಖಿ, ಭಕ್ತ ಪ್ರಹ್ಲಾದ ಸೇರಿದಂತೆ ಸಾಕಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಸಿನಿಮಾ ರಂಗಕ್ಕೆ ಬಂದ ನಂತರ, ಭಕ್ತ ಕುಂಬಾರ ಮನೆ ಮೆಚ್ಚಿದ ಸೊಸೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಮಾಂಗಲ್ಯ ಯೋಗ.  ನಂತರ ಚಂಚಲಕುಮಾರಿ, ನಾಗಕನ್ನಿಕಾ, ಭಕ್ತಪ್ರಹ್ಲಾದ , ಧರ್ಮ ವಿಜಯ, ರಣಧೀರ ಕಂಠೀರವ ಮೊದಲಾದ ಸಿನೆಮಾಗಳಲ್ಲಿ ಅಭಿನಯಿಸಿದರು. ರಾಣಿ ಹೊನ್ನಮ್ಮ ಚಿತ್ರದಿಂದ ಅವರು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳತೊಡಗಿದರು. ಸಂತ ತುಕಾಾರಾಮ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಭೂದಾನ, ಗಾಳಿಗೋಪುರ, ವೀರಕೇಸರಿ, ಮನ ಮೆಚ್ಚಿದ ಮಡದಿ, ಗೆಜ್ಜೆಪೂಜೆ, ಮೊದಲಾದ ಸಿನಿಮಾಗಳಲ್ಲಿನ ತಮ್ಮ ಭಾವಪೂರ್ಣ ಅಭಿನಯದಿಂದ ಕನ್ನಡ ಚಿತ್ರ ರಸಿಕರ ಮನೆ ಮಾತಾದರು. ಹಲವು ಚಿತ್ರಗಳಲ್ಲಿ ಡಾ. ರಾಜಕುಮಾರ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದಲ್ಲದೆ ನಂತರ ಅವರ ತಾಯಿಯಾಗಿಯೂ ಕಾಣಿಸಿಕೊಂಡರು.
ಅವರು ತಮ್ಮ ಮಗ ವಿನೋದ ರಾಜನನ್ನೂ ತೆರೆಗೆ ತಂದರು ಮತ್ತು ಸ್ವತಃ ನಾಲ್ಕು ಸಿನಿಮಾಗಳನ್ನು ನಿರ್ಮಿಸಿದರು. ಕಾಲೇಜು ಹೀರೋ, ಕನ್ನಡದ ಕಂದ, ಶುಕ್ರ ಮತ್ತು ಯಾರದು ಅವರ ನಿರ್ಮಾಣದ ಚಿತ್ರಗಳು.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

ಕನ್ನಡದಲ್ಲಿ ಮುಖ್ಯವಾಗಿ ನಟಿಸಿರುವ ಲೀಲಾವತಿ ಅವರು, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳು ಸೇರಿದಂತೆ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಗೆಜ್ಜೆಪೂಜೆ, ಡಾ. ಕೃಷ್ಣ ಚಿತ್ರಗಳ ಅಭಿನಯಕ್ಕಾಗಿ ರಾಜ್ಯ ಚಿತ್ರಪ್ರಶಸ್ತಿ ಪಡೆದರಲ್ಲದೆ ಕರ್ನಾಟಕ ಸರ್ಕಾರ 1999-2000ನೇ ಸಾಲಿನಲ್ಲಿ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿಯಾದ ಡಾ. ರಾಜಕುಮಾರ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 2008ರಲ್ಲಿ ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ಕರ್ನಾಟಕ ಸರಕಾರ ಕೊಡಮಾಡುವ ಜೀವಮಾನ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

 

 

 

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement