
ಮಂಗಳೂರು : ತೆಂಕುತಿಟ್ಟು ಶೈಲಿಯ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (85) ಅವರು ವಿಧಿವಶರಾಗಿದ್ದಾರೆ. ಶುಕ್ರವಾರ ರಾತ್ರಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೆದ್ದೂರಿನ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾಗಿದ್ದಾರೆ.
ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಅವರು ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯಕ್ಕೆ ಮೆರುಗು ನೀಡಿದವರಾಗಿದ್ದಾರೆ. ಅವರು ಮೂವರು ಪುತ್ರರನ್ನು ಅಗಲಿದ್ದಾರೆ.
1940, ಮಾರ್ಚ್ 22ರಂದು ಬಂಟ್ವಾಳ ತಾಲೂಕಿನ ಕೋಡಪದವಿನ ಕಡು ಬಡತನದಲ್ಲಿ ಜನಿಸಿದ ಗೋವಿಂದರ ಬಾಲ್ಯ ಕಣ್ಣೀರಿನ ಕತೆಯಾಗಿತ್ತು. ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರಲ್ಲಿ ಒಬ್ಬರು ಎನಿಸಿಕೊಂಡಿದ್ದರು.
1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ ಅಖಂಡ ಎಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ನಡೆದಿದೆ. ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಪ್ರಮುಖ ಕಲಾವಿದರಾಗಿ 54 ವರ್ಷಗಳಿಗೂ ಹೆಚ್ಚು ಕಾಲ ತಿರುಗಾಟ ನಡೆಸಿ ದಾಖಲೆ ಅವರದ್ದು. ಅಲ್ಲದೆ, ಮೂಲ್ಕಿ, ಕೂಡ್ಲು, ಸುರತ್ಕಲ್ (ಕೆಳಗಿನ ಮಾರಿಗುಡಿ) ಇರಾ ಸೋಮನಾಥೇಶ್ವರ ಮೇಳಗಳಲ್ಲಿಯೂ ತಿರುಗಾಟ ನಡೆಸುವ ಮೂಲಕ ದಾಖಲೆಯ 71 ತಿರುಗಾಟ ನಡೆಸಿದ್ದಾರೆ. ರಂಗಸ್ಥಳದ ಮೇಲೆ ಕೌರವ, ಕರ್ಣ, ಭೀಷ್ಮ, ರಕ್ತಬೀಜ, ಇಂದ್ರಜಿತ, ಮಾಗಧ, ಅತಿಕಾಯ, ರಾವಣ, ನರಕಾಸುರ, ವಿಶ್ವಾಮಿತ್ರ ಮೊದಲಾದ ಪಾತ್ರಗಳಿಗೆ ಹೆಸರಾಗಿದ್ದರು. ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಅಭಿನಯ ಮತ್ತು ಮಾತುಗಾರಿಕೆ ಅನನ್ಯವಾಗಿತ್ತು.
ಮಣಿಮೇಖನೆ, ಕಾವೇರಿ ಮಹಾತ್ಮೆ, ಮೂರೂವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಮೊದಲಾದ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಅವರಿಗೆ ಇಳಿ ವಯಸ್ಸಿನಲ್ಲೂ ರಂಗಭೂಮಿಯ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ.
ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ