ಹೊನ್ನಾವರ : ಇದೇ ಮೊದಲ ಬಾರಿಗೆ ನಡೆದ ʼಯಾಜಿʼ ಕುಟುಂಬ ಸಮಾಗಮ ಕಾರ್ಯಕ್ರಮ

ಹೊನ್ನಾವರ : ಇದೇ ಮೊದಲ ಬಾರಿಗೆ ಹವ್ಯಕ ಸಮುದಾಯದ ಯಾಜಿ ಕುಟುಂಬದ ಸಮಾಗಮ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಹೊಳ್ಳಕುಳಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಯಾಜಿ ಎಂಬುದು ಕುಟುಂಬದ ಹೆಸರಾಗಿದ್ದು, ಇವರು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಿರ್ದಿಷ್ಟ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಯಾಜಿ ಎಂಬ ಉಪನಾಮ (ಅಡ್ಡ ಹೆಸರು) ಇದು ಕುಟುಂಬದ ಹೆಸರನ್ನು ಪ್ರತಿನಿಧಿಸುತ್ತಿದ್ದು, ಯಾಜಿ ಉಪನಾಮ ಹೊಂದಿರುವವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿರುವುದೇ ಈ ಉಪನಾಮದ ವಿಶೇಷ. ಇವರು ಹೆಚ್ಚಾಗಿ ಹೊನ್ನಾವರ ತಾಲೂಕಿನ ಇಡಗುಂಜಿ, ಮಣ್ಣಿಗೆ, ಬಳಕೂರು, ಗುಣವಂತೆ, ಮಾಳ್ಕೋಡು, ಭಟ್ಕಳದ ಬೈಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಕುಟುಂಬ ಈಗ ವಿಸ್ತಾರಗೊಂಡಿದ್ದು, ಈಗ 125ರ ಆಸುಪಾಸು ಮನೆಗಳಿವೆ. ಎಲ್ಲರೂ ವಿಶ್ವಾಮಿತ್ರ ಗೋತ್ರಕ್ಕೆ ಸೇರಿದವರು ಇತ್ತೀಚಿನ ದಿನಗಳಲ್ಲಿ ಕುಟುಂಬದವರು ಉದ್ಯೋಗದ ನಿಮಿತ್ತ ಬೇರೆಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಈಗ ಅವರೆಲ್ಲರನ್ನೂ ಒಂದೆಡೆ ಸೇರಿಸಿ ಪರಸ್ಪರ ಪರಿಚಯ ಮಾಡಿಕೊಳ್ಳುವ ಸಲುವಾಗಿ ಶನಿವಾರ (ಫೆ.17)ರಂದು ಯಾಜಿ ಕುಟುಂಬದ ಸಮಾಗಮ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿತ್ತು.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

ಒಂದು ಕಾಲದಲ್ಲಿ ಈ ಕುಟುಂಬ ಯಜ್ಞ-ಯಾಗಾದಿಗಳನ್ನು ಮಾಡುತ್ತಿದ್ದ ಕುಟುಂಬವಾಗಿತ್ತು. ಅದಕ್ಕಾಗಿಯೇ ಅವರಿಗೆ   ಯಾಜಿ ಎಂಬ ಉಪನಾಮ ಬಂದಿದೆ. ಈ ಕುಟುಂಬ ಯಕ್ಷಗಾನ ಕಲೆಯ ಮೂಲಕವೂ ರಾಜ್ಯಾದ್ಯಂತ ಚಿರಪರಿಚಿತ ಹೆಸರಾಗಿದೆ. ಮೊದಲು ಮನೆಯಲ್ಲಿ ಒಬ್ಬರಾದರೂ ಯಕ್ಷಗಾನದ ಕಲಾವಿದರು ಇರುತ್ತಿದ್ದರು ಎಂಬುದು ವಿಶೇಷವಾಗಿತ್ತು. ಆದರೆ ಈಗ ಉದ್ಯೋಗ ನಿಮಿತ್ತ ಬೇರೆ ಬೇರೆ ಕಡೆ ವಲಸೆ ಹೋಗಿದ್ದರಿಂದ ಕುಟುಂಬಗಳ ನಡುವಿನ ಸಂಪರ್ಕವೇ ತಪ್ಪಿ ಹೋಗಿದೆ. ಈಗ ಅದನ್ನು ಮರು ಸ್ಥಾಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಬೆಳಿಗ್ಗೆ 9ರಿಂದ ಆರಂಭವಾದ ಕಾರ್ಯಕ್ರಮ ಸಂಜೆ 6ರ ವರೆಗೂ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಯಾಜಿಗಳ ಹಿನ್ನೆಲೆ ಕುರಿತು ಚರ್ಚೆ, ಯಾಜಿಗಳ ನಡುವಿನ ಸಂಪರ್ಕ ಹಾಗೂ ಕುಟುಂಬಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಭಿಪ್ರಾಯ ಮಂಡನೆ, ಯಾಜಿಗಳ ಕುಲದೇವರಾದ ವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ಧಿ ಹಾಗೂ ಕಲಾವೃದ್ಧಿ ಕುರಿತು ಚರ್ಚೆಗಳು ನಡೆದವು. ಅಲ್ಲದೆ, ಯಾಜಿಗಳ ಕುಟುಂಬಕ್ಕೆ ಸಂಬಂಧಿಸಿದ ಟ್ರಸ್ಟ್‌ ಸ್ಥಾಪನೆಯ ಬಗ್ಗೆಯೂ ಚರ್ಚೆಗಳು ನಡೆದವು. ಇದೇವೇಳೆ ಯಾಜಿಗಳನ್ನು ಪರಸ್ಪರ ಇನ್ನಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ನಮ್ಮ ಸಮಾಜಮುಖಿ ಕೆಲಸ-ಕಾರ್ಯಗಳತ್ತಲೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಭಜನಾ ಕಾರ್ಯಕ್ರಮ ಸಹ ನಡೆಯಿತು.

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

ಈ ವೇಳೆ ರಾಮಚಂದ್ರಾಪುರ ಮಠದ ಗುರುಗಳ ಪಾದ ಪೂಜೆಯೂ ನಡೆಯಿತು. ಮಠಾಧೀಶರಾದ ಶ್ರೀ ರಾಘವೇಶ್ವರ ಶ್ರೀಗಳು ಈ ಕಾರ್ಯಕ್ರಮಕ್ಕೆ ಸಂಕ್ಷಿಪ್ತವಾಗಿ ಆಗಮಿಸಿದ್ದರು.
ಈ ವೇಳೆ ಆಶೀರ್ವಚನ ನೀಡಿದ ಅವರು, “ಯಾಜಿಗಳು ಸಂಖ್ಯೆಯಲ್ಲಿ  ಸಣ್ಣ ಸಣ್ಣ ಸಂಖ್ಯೆಯಲ್ಲಿರಬಹುದು. ಆದರೆ ಪ್ರತಿಯೊಬ್ಬ ಯಾಜಿಯೂ ಸಾಹಸಿ ಮತ್ತು ಪ್ರತಿಭಾವಂತರು. ಒಂದು ಕುಟುಂಬದ ಸಂಘಟನೆ ಎಂದರೆ ಅದು ಮಾತ್ರಸ್ಥಾನದಲ್ಲಿ ಇರುವಂತಹದ್ದು. ಸಂಘಟನೆಯಿಂದ ಒಗ್ಗಟ್ಟು ಮೂಡಿ ಎಲ್ಲರಲ್ಲಿಯೂ ಪರಸ್ಪರ ಪ್ರೇಮ‌ಭಾವ ಮೂಡುತ್ತದೆ. ನಮ್ಮ ಸಂಸ್ಥಾನದ ನಿಷ್ಠಾವಂತ ಶಿಷ್ಯರಲ್ಲಿ ಯಾಜಿಗಳು ಅಗ್ರಗಣ್ಯರು. ಕುಲದೇವತಾ ಸ್ಥಾನದಲ್ಲಿ ಕುಲಗುರುಗಳ ಅನುಗ್ರಹ ಆಗಿದೆ. ಎಲ್ಲರಿಗೂ ಸನ್ಮಂಗಲ ಉಂಟಾಗಲಿ ಎಂದು ಹಾರೈಸಿದರು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement