ನವದೆಹಲಿ : 2020ರ ದೆಹಲಿ ಗಲಭೆ ವೇಳೆ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮಾಜಿ ಕಾರ್ಪೊರೇಟರ್ ತಾಹಿರ್ ಹುಸೇನ್ ಸೇರಿದಂತೆ ಐವರು ಅಪರಾಧಿಗಳಿಗೆ ದೆಹಲಿಯ ಕರ್ಕರ್ದೂಮಾ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್ಜೆ) ಪರ್ವೀನ್ ಸಿಂಗ್ ಅವರು ತಾಹಿರ್ ಹುಸೇನ್, ನಜೀರ್, ಆಸಿಂ, ಜಾವೇದ್ ಮತ್ತು ಅನಾಸ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ತೀರ್ಪಿನಲ್ಲಿ ನ್ಯಾಯಾಲಯವು, ಅಂಕಿತ್ ಶರ್ಮಾ ಹತ್ಯೆಯನ್ನು “ಅತ್ಯಂತ ಕ್ರೂರ, ಅಸಹ್ಯ ಮತ್ತು ಮನಕಲಕುವ ಕೃತ್ಯ” ಎಂದು ಬಣ್ಣಿಸಿದೆ. ಆದರೆ, ಅಪರಾಧಿಗಳು ಸಂಪೂರ್ಣವಾಗಿ ಸುಧಾರಣೆಗೆ ಅಸಾಧ್ಯರಾಗಿದ್ದಾರೆ ಎಂಬುದನ್ನು ಅಭಿಯೋಜಕರು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ದೆಹಲಿ ನಗರವು ಸಾಮುದಾಯಿಕ ಗಲಭೆಯ ತೀವ್ರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ರಕ್ತದಾಹದಿಂದ ಕೂಡಿದ್ದ ಗುಂಪೊಂದು ಅಂಕಿತ್ ಶರ್ಮಾರನ್ನು ಸುತ್ತುವರಿದು ಹತ್ಯೆ ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.
‘ಹತ್ಯೆಯ ನಂತರವೂ ಕ್ರೌರ್ಯ ಮುಂದುವರಿದಿತ್ತು’
ನ್ಯಾಯಾಲಯ ತನ್ನ ಆದೇಶದಲ್ಲಿ, “ಅಂಕಿತ್ ಶರ್ಮಾ ಹತ್ಯೆಯೊಂದಿಗೆ ಕ್ರೌರ್ಯ ಕೊನೆಗೊಂಡಿಲ್ಲ. ಅವರ ಮೃತದೇಹವನ್ನು ಪ್ರಾಣಿಯಂತೆ ಎಳೆದುಕೊಂಡು ಹೋಗಲಾಗಿದೆ. ದ್ವೇಷ ತಣಿಯದಂತೆ ಮೃತದೇಹವನ್ನು ಕಾಲುವೆಗೆ (ನಾಲಾ) ಎಸೆಯಲಾಗಿದೆ. ಈ ರೀತಿಯ ಅಮಾನವೀಯ ಕೃತ್ಯ ಅತ್ಯಂತ ಅಸಹ್ಯಕರ ಹಾಗೂ ಮನಕಲಕುವಂತಹದ್ದು. ಆದ್ದರಿಂದ ಇದು ಅತ್ಯಂತ ಗಂಭೀರವಾದ ಉಲ್ಬಣಕಾರಿ (Aggravating) ಅಂಶವಾಗಿದೆ. ಅಪರಾಧದ ಗಂಭೀರತೆಯನ್ನು ಪರಿಗಣಿಸಿದರೆ, ಈ ಪ್ರಕರಣವು ‘ಅತ್ಯಂತ ಅಪರೂಪದ ಪ್ರಕರಣ’ (Rarest of Rare) ಎಂಬ ಮಾನದಂಡದತ್ತ ವಾಲುತ್ತದೆ” ಎಂದು ಹೇಳಿದೆ.
ಮರಣದಂಡನೆ ಯಾಕೆ ವಿಧಿಸಲಿಲ್ಲ?
ಆದರೆ, ನ್ಯಾಯಾಲಯ ಮತ್ತೊಂದು ಪ್ರಮುಖ ಅಂಶವನ್ನು ಉಲ್ಲೇಖಿಸಿ, ಆರೋಪಿಗಳು ಹಿಂಸಾತ್ಮಕ ಸ್ವಭಾವದವರು ಎಂಬುದನ್ನು ಪೊಲೀಸರು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
“ಈ ಅಪರಾಧಿಗಳ ವಿರುದ್ಧ ಹಿಂದೆ ಯಾವುದೇ ಹಿಂಸಾತ್ಮಕ ಅಪರಾಧದ ದಾಖಲೆಗಳಿಲ್ಲ. ತಾಹಿರ್ ಹುಸೇನ್, ನಜೀರ್, ಆಸಿಂ, ಜಾವೇದ್ ಮತ್ತು ಅನಾಸ್ ಅವರು ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯಲ್ಲಿ ಕೆಲ ಸಣ್ಣಪುಟ್ಟ ಶಿಸ್ತು ಉಲ್ಲಂಘನೆಗಳನ್ನು ಹೊರತುಪಡಿಸಿ ಉತ್ತಮ ನಡವಳಿಕೆ ಪ್ರದರ್ಶಿಸಿದ್ದಾರೆ. ಇದರಿಂದ ಅವರು ನಿಯಮಗಳನ್ನು ಪಾಲಿಸುವಂತೆ ಶಿಸ್ತಿಗೆ ಒಳಪಡಿಸಬಹುದಾಗಿದೆ ಹಾಗೂ ಸುಧಾರಿಸಬಹುದಾಗಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ನ್ಯಾಯಾಧೀಶ ಪರ್ವೀನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.ಬಈ ಹಿನ್ನೆಲೆಯಲ್ಲಿ ನ್ಯಾಯಾಲಯ ಐವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.
ದೆಹಲಿ ಪೊಲೀಸರ ವಾದ
ದೆಹಲಿ ಪೊಲೀಸರು ತಾಹಿರ್ ಹುಸೇನ್ ಮತ್ತು ಇತರ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದರು. ಅಂಕಿತ್ ಶರ್ಮಾ ಹತ್ಯೆ “ಪೂರ್ವನಿಯೋಜಿತ, ನಿರ್ದಯ ಹಾಗೂ ಅತ್ಯಂತ ಕ್ರೂರ ಕೃತ್ಯ” ಎಂದು ವಾದ ಮಂಡಿಸಿದ್ದರು.
“ಕರುಣೆ ಬೇಕೆನ್ನುವವರು ಮೊದಲು ಕರುಣೆ ತೋರಿಸಬೇಕು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದರ ಬಗ್ಗೆ ಕರುಣೆ ತೋರಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ” ಎಂದು ದೆಹಲಿ ಪೊಲೀಸರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
ಆರೋಪಿಗಳ ಪರ ವಾದ
ತಾಹಿರ್ ಹುಸೇನ್ ಹಾಗೂ ನಜೀರ್, ಆಸಿಂ, ಜಾವೇದ್ ಮತ್ತು ಅನಾಸ್ ಪರ ವಕೀಲರು ಮರಣದಂಡನೆಗೆ ವಿರೋಧ ವ್ಯಕ್ತಪಡಿಸಿದ್ದರು. ಮರಣದಂಡನೆ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ವಿಧಿಸಬಹುದಾಗಿದೆ. ಪ್ರಕರಣದಲ್ಲಿ ಯಾವುದೇ ಸಂಚು ನಡೆದಿರುವುದಕ್ಕೆ ಸಾಕ್ಷ್ಯವಿಲ್ಲ. ಅಂಕಿತ್ ಶರ್ಮಾ ಮೇಲೆ ದಾಳಿ ನಡೆಸಿದ ಗುಂಪಿನ ಹಲವರು ಈಗಾಗಲೇ ಖುಲಾಸೆಯಾಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಯಾವೆಲ್ಲಾ ಆರೋಪಗಳಲ್ಲಿ ಶಿಕ್ಷೆ?
ತಾಹಿರ್ ಹುಸೇನ್ ಅವರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 188 (ಸಾರ್ವಜನಿಕ ಸೇವಕರ ಆದೇಶ ಉಲ್ಲಂಘನೆ), 153ಎ (ಗುಂಪುಗಳ ನಡುವೆ ದ್ವೇಷ ಪ್ರಚೋದನೆ), 147 (ಗಲಭೆ), 148 (ಮಾರಕಾಸ್ತ್ರಗಳೊಂದಿಗೆ ಗಲಭೆ), 149 (ಕಾನೂನುಬಾಹಿರ ಗುಂಪಿನ ಸದಸ್ಯತ್ವ), 365 (ಅಪಹರಣ/ಅಕ್ರಮ ಬಂಧನದ ಉದ್ದೇಶ), ಹಾಗೂ 302 (ಕೊಲೆ) ಅಡಿಯಲ್ಲಿ ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು.
ನಜೀರ್, ಆಸಿಂ, ಜಾವೇದ್ ಮತ್ತು ಅನಾಸ್ ಅವರನ್ನೂ ಇದೇ ಆರೋಪಗಳಲ್ಲಿ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಫೆಬ್ರವರಿ 26ರಂದು ಅಂಕಿತ್ ಶರ್ಮಾ ಅವರ ತಂದೆ ರವೀಂದಕುಮಾರ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.
ತಮ್ಮ ದೂರಿನಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವೆ ಚಾಂದ್ ಬಾಗ್ ಪುಲಿಯಾ, ಮುಖ್ಯ ಕರಾವಲ್ ನಗರ ರಸ್ತೆಯಲ್ಲಿ ಎರಡು-ಮೂರು ದಿನಗಳ ಕಾಲ ಪ್ರತಿಭಟನೆಗಳು ನಡೆದಿದ್ದು, ಉಭಯ ಕಡೆಯಿಂದ ಕಲ್ಲು ತೂರಾಟ, ಇಟ್ಟಿಗೆ ಎಸೆತ, ಬೆಂಕಿ ಹಚ್ಚುವುದು, ಗುಂಡಿನ ದಾಳಿ ಹಾಗೂ ಧ್ವಂಸಕೃತ್ಯಗಳು ನಡೆದಿದ್ದವು ಎಂದು ಅವರು ಆರೋಪಿಸಿದ್ದರು.
2020ರ ಫೆಬ್ರವರಿ 25ರಂದು ಅಂಕಿತ್ ಶರ್ಮಾ ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಹೊರಗೆ ಹೋಗಿದ್ದರೂ ಬಹಳ ಸಮಯವಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು.ನಂತರ ಸ್ಥಳೀಯರು, ಚಾಂದ್ ಬಾಗ್ ಪುಲಿಯಾ ಮಸೀದಿ ಸಮೀಪ ಒಬ್ಬ ಯುವಕನನ್ನು ಹತ್ಯೆ ಮಾಡಿ ಖಜೂರಿ ಖಾಸ್ ನಾಲಾಕ್ಕೆ ಎಸೆದಿದ್ದಾರೆ ಎಂದು ಮಾಹಿತಿ ನೀಡಿದ್ದರು.
ತದನಂತರ ಚಾಂದ್ ಬಾಗ್ ಪುಲಿಯಾ ಸಮೀಪದ ಖಜೂರಿ ಖಾಸ್ ನಾಲಾದಲ್ಲಿ ಅಂಕಿತ್ ಶರ್ಮಾ ಅವರ ಮೃತದೇಹ ಪತ್ತೆಯಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ