ಬೆಂಗಳೂರು: ಕೋವಿಡ್ ಲಾಕ್ಡೌನ್ನಿಂದ ಚಿತ್ರರಂಗ ಚೇತರಿಸಿಕೊಳ್ಳುತ್ತಿದ್ದು ಮತ್ತೆ ಚಿತ್ರಮಂದಿರಗಳಲ್ಲಿ 50- 50 ಸೂತ್ರ ಅಳವಡಿಸಲು ಸರ್ಕಾರ ಮಾರ್ಗಸೂಚಿ ಜಾರಿ ಮಾಡಿರುವುದು ಚಿತ್ರರಂಗಕ್ಕೆ ಭಾರೀ ಪೆಟ್ಟು ಬೀಳಲಿದೆ ಎಂದು ಕರ್ನಾಟಕ ಚಲನಚಿತ್ರವಾಣಿಜ್ಯಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಚಿತ್ರಮಂದಿರಗಳಲ್ಲಿ 50: 50 ಸೂತ್ರ ಅಳವಡಿಸಲು ಸರ್ಕಾರ ತೀರ್ಮಾನಿಸಿರುವುದದನ್ನು ಕೈಬಿಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸಲು ನಡೆದ ಸಭೆಯಲ್ಲಿ ವಾಣಿಜ್ಯಮಂಡಳಿ ಸದಸ್ಯರು ತೀರ್ಮಾನ ಕೈಗೊಂಡಿದ್ದಾರೆ.
ಲಾಕ್ಡೌನ್ ನಂತರ ಈಗ ಚಿತ್ರಗಳು ಬಿಡುಗಡೆಯಾಗುತ್ತಿವೆ, ಇತ್ತೀಚೆಗಷ್ಟೇ ಧ್ರುವಸರ್ಜಾ ಅಭಿನಯದ ಪೊಗರು, ದರ್ಶನ್ ನಟನೆಯ ರಾಬರ್ಟ್ ಚಿತ್ರಗಳು ಯಶಸ್ಸಿನ ಹಾದಿಯಲ್ಲಿದೆ, ಇದರ ನಡುವೆ ಪುನೀತ್ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೂ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದೆ. ಹೀಗಿರುವಾಗ ಸರ್ಕಾರವು ಥಿಯೆಟರ್ಗಳಲ್ಲಿ 50- 50ರ ಸೂತ್ರ ಅಳವಡಿಸಿರುವುದು ಸರಿಯಲ್ಲ, ಈಗಾಗಲೇ ಬುಕ್ಮೈ ಶೋ ಸೇರಿದಂತೆ ಹಲವು ವೆಬ್ಸೈಟ್ಗಳ ಮೂಲಕ ಕೆಲವು ದಿನಗಳ ಶೋಗಳು ಬುಕ್ ಆಗಿದೆ.ಈಗ ದಿಢೀರ್ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಅರ್ಧದಷ್ಟು ಇಳಿಸುವುದರಿಂದ ವಿತರಕ, ಪ್ರದರ್ಶಕ ಹಾಗೂ ನಿರ್ಮಾಪಕರ ವಲಯಕ್ಕೂ ತೊಂದರೆಯಾಗಲಿದೆ. ಹೀಗಾಗಿ ವಿನಾಯಿತಿ ನೀಡಬೇಕೆಂದು ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಚಲನಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತೇವೆ, ಪ್ರತಿ ಶೋ ನಂತರವೂ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡುತ್ತೇವೆ, ಪ್ರೇಕ್ಷಕರು ಕೂಡ ಮಾಸ್ಕ್ ಧರಿಸಿಯೇ ಸಿನಿಮಾ ವೀಕ್ಷಿಸುತ್ತಾರೆ, ಚಿತ್ರಮಂದಿರಗಳ ಒಳಗೆ ಹೋಗುವ ಮುನ್ನ ಎಲ್ಲರ ಟೆಂಪರೇಚರ್ ತಪಾಸಣೆ ಮಾಡುತ್ತೇವೆ .ಹೀಗಾಗಿ 50- 50ರ ಸೂತ್ರವನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಶನಿವಾರದ ಸಭೆಯಲ್ಲಿ ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ನಿರ್ಮಾಪಕ ಎನ್.ಎಂ.ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ