
ನವದೆಹಲಿ: ಹಿಂದುಜಾ ಗ್ರೂಪ್ನ (Hinduja Group) ಅಧ್ಯಕ್ಷರಾಗಿದ್ದ ಗೋಪಿಚಂದ ಪಿ. ಹಿಂದುಜಾ (Gopichand P Hinduja) ಅವರು ಲಂಡನ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.
ಇವರು ಹಿಂದುಜಾ ನಾಲ್ವರು ಸಹೋದರರಎರಡನೆಯವರಾಗಿದ್ದರು. ಹಿರಿಯ ಸಹೋದರ ಶ್ರೀಚಂದ ಹಿಂದುಜಾ ಅವರು ೨೦೨೩ ರಲ್ಲಿ ನಿಧನರಾಗಿದ್ದರು.
ವ್ಯಾಪಾರ ವಲಯದಲ್ಲಿ ‘ಜಿಪಿ’ ಎಂದೇ ಚಿರಪರಿಚಿತರಾಗಿದ್ದ ಗೋಪಿಚಂದ ಹಿಂದುಜಾ ಅವರು ೧೯೫೦ ರಲ್ಲಿ ತಮ್ಮ ಕುಟುಂಬ ವ್ಯವಹಾರವನ್ನು ಸೇರಿಕೊಂಡರು. ಭಾರತ-ಮಧ್ಯಪ್ರಾಚ್ಯ ವ್ಯಾಪಾರ ಕಾರ್ಯಾಚರಣೆಯಾಗಿದ್ದ ಕಂಪನಿಯನ್ನು ಒಂದು ಬೃಹತ್ ಬಹುರಾಷ್ಟ್ರೀಯ ಸಂಸ್ಥೆಯಾಗಿ ಪರಿವರ್ತಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಕಂಪನಿಯ ವೆಬ್ಸೈಟ್ ಪ್ರಕಾರ, ಮುಂಬೈನ ಜೈ ಹಿಂದ್ ಕಾಲೇಜಿನ ಪದವೀಧರರಾಗಿದ್ದ ಗೋಪಿಚಂದ ಅವರು ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯ ಮತ್ತು ರಿಚ್ಮಂಡ್ ಕಾಲೇಜಿನಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.
ಹಿಂದುಜಾ ಗ್ರೂಪ್ ವಾಹನ, ಬ್ಯಾಂಕಿಂಗ್ ಮತ್ತು ಹಣಕಾಸು, ಮಾಹಿತಿ ತಂತ್ರಜ್ಞಾನ (IT), ಆರೋಗ್ಯ ರಕ್ಷಣೆ, ರಿಯಲ್ ಎಸ್ಟೇಟ್, ವಿದ್ಯುತ್ ಮತ್ತು ಮಾಧ್ಯಮ ಹಾಗೂ ಮನರಂಜನೆ ಸೇರಿದಂತೆ ಹನ್ನೊಂದು ಕ್ಷೇತ್ರಗಳಲ್ಲಿ ವಹಿವಾಟು ಹೊಂದಿದೆ. ಅದರ ಕೆಲವು ಪ್ರಮುಖ ಬ್ರ್ಯಾಂಡ್ಗಳಲ್ಲಿ ಅಶೋಕ ಲೇಲ್ಯಾಂಡ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಎನ್ಎಕ್ಸ್ಟಿಡಿಜಿಟಲ್ ಲಿಮಿಟೆಡ್ ಸೇರಿವೆ.
ಬ್ರಿಟನ್ನ ಅತ್ಯಂತ ಶ್ರೀಮಂತ ಕುಟುಂಬ
೨೦೨೫ ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಗೋಪಿಚಂದ ಹಿಂದುಜಾ ಅವರ ಕುಟುಂಬವು ೩೨.೩ ಬಿಲಿಯನ್ ಪೌಂಡ್ಗಳ ನಿವ್ವಳ ಮೌಲ್ಯದೊಂದಿಗೆ ಬ್ರಿಟನ್(ಯುನೈಟೆಡ್ ಕಿಂಗ್ಡಮ್)ನ ಅತ್ಯಂತ ಶ್ರೀಮಂತ ಕುಟುಂಬವೆಂದು ಸ್ಥಾನ ಪಡೆದಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ