ತಾಯ್ತನ ಅಂದ್ರೆ ಇದೇ ಅಲ್ಲವೇ..: ಕೌಟುಂಬಿಕ ಕಲಹದ ಕಾರಣ ಅಪಹರಣಕ್ಕೊಳಗಾಗಿದ್ದ 12 ದಿನದ ಮಗುವಿಗೆ ತನ್ನ ಎದೆ ಹಾಲುಣಿಸಿ ಮಗು ಕಾಪಾಡಿದ ಮಹಿಳಾ ಪೋಲೀಸ್ ಅಧಿಕಾರಿ…!

ಕೋಝಿಕ್ಕೋಡ್: ಅಪಹರಣಕ್ಕೀಡಾಗಿದ್ದ 12 ದಿನಗಳ ಮಗುವಿಗೆ ಹೃದಯಸ್ಪರ್ಶಿ ತಾಯಿಯಾಗುವ ಮೂಲಕ ಚೇವಾಯೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ (ಸಿಪಿಒ) ಎಂ. ರಮ್ಯಾ ಅವರು ಈಗ ಹೃದಯಗಳನ್ನು ಗೆಲ್ಲುತ್ತಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಪಹರಣಕ್ಕೊಳಗಾಗಿದ್ದ 12 ದಿನಗಳ ಮಗುವಿಗೆ ಈ ಮಹಿಳಾ ಪೊಲೀಸ್‌ ಅಧಿಕಾರಿ ತನ್ನ ಎದೆ ಹಾಲುಣಿಸಿ ತಾಯಿಯ ಆರೈಕೆ ಮಾಡಿದ್ದಾರೆ. ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿದಾಗಿನಿಂದ, ಆಕೆಯ ಉದಾತ್ತ ಕಾರ್ಯಕ್ಕೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.
ಅಕ್ಟೋಬರ್ 22 ರಂದು ಪೂಲಕ್ಕಡವು ಮೂಲದ ಆಶಿಖಾ ಎಂಬ ಮಹಿಳೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತಿ ಆದಿಲ್ ಮತ್ತು ಆತನ ತಾಯಿ ತನ್ನ ಮಗುವನ್ನು ಅಪಹರಿಸಿದ್ದಾರೆ ಎಂದು ಅವರ ವಿರುದ್ಧ ಚೇವಾಯೂರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಪೊಲೀಸರಿಗೆ ಆದಿಲ್‌ ಮತ್ತು ಆತನ ತಾಯಿ ಅಪಹರಿಸಿದ ಮಗುವಿನ ಜೊತೆ ಸುಲ್ತಾನ್ ಬತ್ತೇರಿಯಲ್ಲಿ ಇರುವುದು ಗೊತ್ತಾಯಿತು. ಮಹಿಳಾ ಪೊಲೀಸ್ ಅಧಿಕಾರಿ ರಮ್ಯಾ ಸೇರಿದಂತೆ ಅಧಿಕಾರಿಗಳ ತಂಡ ಮಗುವನ್ನು ರಕ್ಷಿಸಲು ಅಲ್ಲಿಗೆ ತಲುಪಿತು. ಮಗುವನ್ನು ವಶಕ್ಕೆ ಪಡೆದ ಪೊಲೀಸರಿಗೆ ಬಹಳ ದಿನಗಳಿಂದ ಆಹಾರ ಹಾಗೂ ತಾಯಿ ಹಾಲು ನೀಡದ ಕಾರಣ ಆರೋಗ್ಯದಲ್ಲಿ ಏರುಪೇರು ಆಗಿರುವುದು ಕಂಡುಬಂದಿದೆ. ತಕ್ಷಣವೇ ಕಲ್ಪೆಟ್ಟಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿನ ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿಗೆ ಶುಗರ್ ಲೆವೆಲ್ ತುಂಬಾ ಕಡಿಮೆಯಾಗಿದೆ ಎಂದು ವೈದ್ಯರು ಗುರುತಿಸಿದ್ದಾರೆ.
ನಂತರ ಮಗು ಅಳಲು ಆರಂಭಿಸಿದ್ದು, ಪೊಲೀಸ್‌ ಅಧಿಕಾರಿ ಇದನ್ನು ಗಮನಿಸಿದ್ದಾರೆ. ತಕ್ಷಣವೇ ರಮ್ಯಾ ಅವರು ತಾನು ಒಂದು ವರ್ಷದ ಮಗುವಿನ ತಾಯಿಯಾಗಿದ್ದು, ಈ ಮಗುವಿಗೆ ಹಾಲುಣಿಸಬಹುದೇ ಎಂದು ವೈದ್ಯರ ಬಳಿ ಕೇಳಿದ್ದಾರೆ. ಅದಕ್ಕೆ ವೈದ್ಯರು ಅನುಮತಿಸಿದ್ದಾರೆ. ಮತ್ತು ಅವರು ಮಗುವಿಗೆ ಹಾಲುಣಿಸಿದರು. ಆ ಕ್ಷಣಗಳಲ್ಲಿ, ಮಗುವನ್ನು ತನ್ನ ಸ್ವಂತ ಮಗು ಎಂದು ಭಾವಿಸಿದ್ದೇನೆ. ಹಾಗೂ ಇದು ತನ್ನ ಜೀವನದ ಅತ್ಯಂತ ಅಪೂರ್ವ ಕ್ಷಣ ಎಂದು ರಮ್ಯಾ ಹೇಳಿದ್ದಾರೆ. ಈ ದಿನವನ್ನು ತನ್ನ ವೃತ್ತಿ ಜೀವನದಲ್ಲಿ ಅತ್ಯಂತ ಅರ್ಥಪೂರ್ಣ ದಿನ ಎಂದು ಅವರು ಉಲ್ಲೇಖಿಸಿದ್ದಾರೆ. ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ಆದಿಲ್ ಅವರನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement