ದಿಢೀರ್ ಬೆಳವಣಿಗೆಯಲ್ಲಿ ಸೆಪ್ಟೆಂಬರ್ 11 ಶನಿವಾರದಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದ ರೂಪಾನಿ, ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ನಾಯಕತ್ವ ಬದಲಾವಣೆ ಸಹಜ ಮತ್ತು ಮುಂದೆತಮಗೆ ಯಾವುದೇ “ಜವಾಬ್ದಾರಿ” ನೀಡಿದರೂ ಅದನ್ನು ವಹಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
ಇದರೊಂದಿಗೆ, ಇತ್ತೀಚೆಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಬಿಜೆಪಿ ಮುಖ್ಯಮಂತ್ರಿಗಳ ಪಟ್ಟಿಗೆ ರೂಪಾನಿ ಸೇರಿದ್ದಾರೆ – ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ, ಉತ್ತರಾಖಂಡದಲ್ಲಿ ತೀರಥ್ ಸಿಂಗ್ ರಾವತ್ ಮತ್ತು ತ್ರಿವೇಂದ್ರ ರಾವತ್ ಹಾಗೂ ಈಗ ಈ ಪಟ್ಟಿಗೆ ಗುಜರಾತಿನ ವಿಜಯ ರೂಪಾನಿ ಸೇರ್ಪಡೆಯಾಗಿದ್ದಾರೆ.
2016ರ ಆಗಸ್ಟ್ 7 ರಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ರೂಪಾನಿ, ರಾಜ್ಯದಲ್ಲಿ ಐದು ವರ್ಷಗಳನ್ನು ಪೂರ್ಣಗೊಳಿಸಿದ ನರೇಂದ್ರ ಮೋದಿ ನಂತರ ಎರಡನೇ ಬಿಜೆಪಿ ಮುಖ್ಯಮಂತ್ರಿ.
ಆದರೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಗುಜರಾತ್ ಸಜ್ಜಾಗುತ್ತಿರುವ ಸಂದರ್ಭದಲ್ಲಿ ರೂಪಾನಿಯವರ ರಾಜೀನಾಮೆ ಅನೇಕರನ್ನು ಅಚ್ಚರಿಗೊಳಿಸಿದೆ. ರೂಪಾನಿಯ ನಿರ್ಗಮನಕ್ಕೆ ಕಾರಣವಾದ ಸಾಧ್ಯಾಸಾಧಯತೆ ಅಂಶಗಳು ಯಾವವು..?
ಚುನಾವಣಾ ವರ್ಷ ಮತ್ತು ಅಧಿಕಾರ ವಿರೋಧಿ ಅಲೆ..
ಚುನಾವಣಾ ವರ್ಷಕ್ಕೆ ಮುಂಚಿತವಾಗಿ ನಡೆಸಿದ ಆಂತರಿಕ ಸಮೀಕ್ಷೆಯು ರೂಪಾನಿ ನಾಯಕತ್ವದಲ್ಲಿ ಕೇಸರಿ ಪಕ್ಷಕ್ಕೆ ಗೆಲುವಿನ ಮುನ್ಸೂಚನೆ ನೀಡಿಲ್ಲ, ಇದು ಪಕ್ಷದ ಹೈಕಮಾಂಡ್ ರೂಪಾನಿ ಅವರನ್ನು ಕೆಳಗಿಳಿಯುವಂತೆ ಕೇಳಲು ಒಂದು ಕಾರಣವಾಗಿದೆ ಎಂದು ಹೇಳಲಾಗಾತ್ತಿದೆ.
ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ ಹಾಗೂ ಎರಡು ದಶಕಗಳ ಆಡಳಿತದ ಬೃಹತ್ ಅಧಿಕಾರ ವಿರೋಧಿ ಅಲೆಯನ್ನು ಪಕ್ಷ ನೋಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರೂಪಾನಿ ನೇತೃತ್ವದಲ್ಲಿ ಬಿಜೆಪಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದರೂ ಸಹ ಈ ಬದಲಾವಣೆ ಪಕ್ಷಕ್ಕೆ ಮುಖ್ಯವಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಮುನ್ಸಿಪಲ್ ಕಾರ್ಪೊರೇಶನ್, ಪುರಸಭೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವುಗಳನ್ನು ದಾಖಲಿಸಿದೆ – ಈ ಪ್ರದರ್ಶನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ, ಅವರ ಹೆಸರು ಮತ್ತು ಬ್ಯಾನರ್ ಅಡಿಯಲ್ಲಿ ಚುನಾವಣೆ ಸ್ಪರ್ಧಿಸಲಾಗಿದೆ. .
ಪಾಟಿದಾರ್ ಆಂದೋಲನ ಮತ್ತು ಗ್ರಾಮೀಣರ ಅತೃಪ್ತಿ..
2016ರಲ್ಲಿ, ಆನಂದಿಬೆನ್ ಪಟೇಲ್ ಗುಜರಾತಿನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ರಾಜಕೀಯ ವೀಕ್ಷಕರು ಇನ್ನೊಬ್ಬ ಪಾಟಿದಾರ್, ಬಹುಶಃ ನಿತಿನ್ ಪಟೇಲ್ ಅಥವಾ ಸೌರಭ್ ಪಟೇಲ್ ರಾಜ್ಯದ ಆಡಳಿತವನ್ನು ವಹಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದರು.
ನಿತಿನ್ ಪಟೇಲ್ ಪ್ರಸ್ತುತ ಉಪಮುಖ್ಯಮಂತ್ರಿ ಮತ್ತು ಸೌರಭ್ ಪಟೇಲ್ ರಾಜ್ಯದ ಇಂಧನ ಸಚಿವರಾಗಿದ್ದಾರೆ.
ಅಲ್ಪಸಂಖ್ಯಾತ ಜೈನ ಸಮುದಾಯದ ನಾಯಕರಾದ ರೂಪಾನಿಯವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದು ಅನೇಕರಿಗೆ ಅಚ್ಚರಿ ತಂದರೂ ರೂಪಾನಿಯು ಪಾಟಿದಾರ ಆಂದೋಲನದ ಜ್ವಾಲೆಯಿಂದ ಆಡಳಿತ ನಿಭಾಯಿಸುವಲ್ಲಿ ಯಶಸ್ವಿಯಾದರು.
ಆದಾಗ್ಯೂ, ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ನಿಂದ ಹಾರಿ ಆಮ್ ಆದ್ಮಿ ಪಕ್ಷ (ಎಎಪಿ) ಸೇರುವ ಬಗ್ಗೆ ವದಂತಿಗಳು ಈ ವರ್ಷ ಜನವರಿಯಲ್ಲಿ ಆರಂಭವಾಗುತ್ತಿದ್ದಂತೆ, 2022 ರ ಚುನಾವಣೆಗೂ ಮುನ್ನ ಈ ಪಾಟಿದಾರ ಮೀಸಲು ಚಳುವಳಿಯ ಪುನರುಜ್ಜೀವನದ ಸಾಧ್ಯತೆಯ ಮುನ್ಸೂಚನೆ ಬಿಜೆಪಿಗೆ ಸಿಕ್ಕಿದೆ ಎಂದೂ ಹೇಳಲಾಗುತ್ತಿದೆ.
ಇದಲ್ಲದೆ, ಖಾಸಗೀಕರಣ ಮತ್ತು ನಿರುದ್ಯೋಗದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿನ ರೈತ ಸಮೂಹಗಳಲ್ಲಿನ ಅಶಾಂತಿಯು ರೂಪಾನಿಯ ತಲೆದಂಡಕ್ಕೆ ಮತ್ತೊಂದು ಕಾರಣ ಎಂದು ಸಹ ಹೇಳಲಾಗುತ್ತಿದೆ.
ರೂಪಾನಿ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ, ಬಿಜೆಪಿ ಗುಜರಾತ್ ಅಧ್ಯಕ್ಷ ಸಿ.ಆರ್. ಪಾಟೀಲ್, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಗುಜರಾತ್ ಮಾಜಿ ಸಚಿವ ಗೋರ್ಧನ್ ಜಡಾಫಿಯಾ, ಗುಜರಾತ್ ಕ್ಯಾಬಿನೆಟ್ ಮಂತ್ರಿ ಆರ್. ಸಿ. ಫಲ್ದು ಮತ್ತು ಕೇಂದ್ರ ಸಚಿವ ಪರಶೋತ್ತಮ್ ರೂಪಾಲ ಅವರ ಹೆಸರುಗಳು ರೂಪಾನಿಯವರ ಉತ್ತರಾಧಿಕಾರಿಯಾಗಿ ಚಾಲ್ತಿಗೆ ಬಂದಿದೆ. ಇಲ್ಲಿ ಸಿ.ಆರ್. ಪಾಟೀಲ್ ಹೊರತುಪಡಿಸಿ ಉಳಿದವರೆಲ್ಲರೂ ಪಾಟಿದಾರ್ ನಾಯಕರು ಎಂಬುದು ಗಮನಾರ್ಹ.
ಬಿಜೆಪಿ ಒಳಜಗಳ
2016 ರಲ್ಲಿ ರೂಪಾನಿಯವರ ಮುಖ್ಯಮಂತ್ರಿಯಾಗಿ ನೇಮಕಾತಿಯು ಪಾಟಿದಾರ್ ನಾಯಕ ಮತ್ತು ಈಗ ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೆ ಅಸಮಾಧಾನಕ್ಕೆ ಕಾರಣವಾಯಿತು ಎಂಬುದು ಬಿಜೆಪಿ ಹಲವರ ಅನಿಸಿಕೆ.
ಖಾತೆಗಳ ಹಂಚಿಕೆಗಳ ಬಗ್ಗೆ ಪಟೇಲರು ಸ್ಪಷ್ಟವಾಗಿ ಅಸಮಾಧಾನಗೊಂಡಾಗ ಪಕ್ಷದೊಳಗಿನ ಅಸಮಾಧಾನ ಆರಂಭಿಕ ಹಂತಗಳಲ್ಲಿ ತೋರಿಸಲು ಪ್ರಾರಂಭಿಸಿದವು. ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿಯಾದ ರೂಪಾನಿ ಅವರು ಪಟೇಲರಿಂದ ಹಲವಾರು ಪ್ರಮುಖ ಖಾತೆಗಳನ್ನು ತೆಗೆದುಕೊಂಡರು – ವಿಶೇಷವಾಗಿ ಹಣಕಾಸು, ಪೆಟ್ರೋಕೆಮಿಕಲ್ಸ್ ಮತ್ತು ನಗರಾಭಿವೃದ್ಧಿ. ವಿಷಯಗಳನ್ನು ವಿಂಗಡಿಸಲು, ಕೇಂದ್ರ ನಾಯಕತ್ವವು ಮಧ್ಯಪ್ರವೇಶಿಸಬೇಕಾಯಿತು.
ಅಂದಿನಿಂದ, ವದಂತಿಗಳು, ವರ್ಷಗಳಲ್ಲಿ ಹಲವು ಬಾರಿ, ಗುಜರಾತ್ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗೆ ಕಾರಣವಾದವು.
ಕೋವಿಡ್ ನಿರ್ವಹಣೆಯ ವೈಫಲ್ಯ..
ಇತ್ತೀಚೆಗೆ ರಾಜ್ಯ ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ವಿಫಲವಾದ ನಂತರ ಅದರಲ್ಲಿಯೂ ಮುಖ್ಯವಾಗಿ ಸಾಂಕ್ರಾಮಿಕ ರೋಗಗಳ ಎರಡನೇ ಅಲೆಯ ಸಮಯದಲ್ಲಿ ದಿವ್ಯಾ ಭಾಸ್ಕರ್ ಮತ್ತು ಇತರ ಹಲವಾರು ಸುದ್ದಿ ಸಂಸ್ಥೆಗಳು ರಾಜ್ಯದಲ್ಲಿ ಕೋವಿಡ್ ಸಾವುಗಳ ಬೃಹತ್ ಲೆಕ್ಕಾಚಾರವನ್ನು ಬಹಿರಂಗಪಡಿಸಿದವು.
ಈ ಎಲ್ಲ ಕಾರಣಗಳಿಂದಾಗಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚೆಯೇ ಮುಂದಿನ ಚುನಾವಣೆ ತಯಾರಿಯ ಅಂಗವಾಗಿ ಬಿಜೆಪಿಯ ಹೆಜ್ಜೆಯಾಗಿ ರೂಪಾನಿ ರಾಜೀನಾಮೆ ಕಂಡುಬರುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ