ಮಲೇಷ್ಯಾದ ಉದ್ಯಮಿ ಆನಂದ ಕೃಷ್ಣನ್ ಅವರ ಪುತ್ರ ವೆನ್ ಅಜಾನ್ ಸಿರಿಪಾನ್ಯೊ ಅವರು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾದ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆನಂದ ಕೃಷ್ಣನ್ ಅವರು ಸರಿಸುಮಾರು ₹45,339 ಕೋಟಿ ನಿವ್ವಳ ಸಂಪತ್ತನ್ನು ಹೊಂದಿರುವ ಉದ್ಯಮಿಯಾಗಿದ್ದಾರೆ. ಅವರು ಟೆಲಿಕಾಂ, ಮಾಧ್ಯಮ, ತೈಲ, ಅನಿಲ, ರಿಯಲ್ ಎಸ್ಟೇಟ್ ಮತ್ತು ಉಪಗ್ರಹಗಳನ್ನು ವ್ಯಾಪಿಸಿರುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿರುವ ಮಲೇಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಅಗಾಧ ಸಂಪತ್ತಿನ ಹೊರತಾಗಿಯೂ, ಆನಂದ ಕೃಷ್ಣನ್ ಅವರು ತಮ್ಮ ಲೋಕೋಪಕಾರಿ ಕೆಲಸಗಳಿಗೂ ಹೆಸರುವಾಸಿಯಾಗಿದ್ದಾರೆ. ಶಿಕ್ಷಣ ಮತ್ತು ಮಾನವೀಯ ಕೆಲಸಗಳಿಗೆ ಅವರು ಬೆಂಬಲಿಸುತ್ತಾರೆ.
ಅಂತಹ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸಿರಿಪಾನ್ಯೊ ಅವರನ್ನು ತಮ್ಮ ತಂದೆಯ ಬಹು-ಶತಕೋಟಿ ಡಾಲರ್ ಸಾಮ್ರಾಜ್ಯದ ಉತ್ತರಾಧಿಕಾರಿ ಎಂದೇ ನೋಡಲಾಗುತ್ತಿತ್ತು. ಆದರೆ, ಸಿರಿಪಾನ್ಯೊ ತಮ್ಮ18 ನೇ ವಯಸ್ಸಿನಲ್ಲಿ ತಮ್ಮ ಜೀವನವನ್ನೇ ಬದಲಾಯಿಸುವ ಅನಿರೀಕ್ಷಿತ ನಿರ್ಧಾರವನ್ನು ಕೈಗೊಂಡರು. ಕುತೂಹಲದಿಂದ ಸನ್ಯಾಸಿಗಳ ಜೀವನದ ಬಗ್ಗೆ ಅನ್ವೇಷಿಸಲು ಪ್ರಾರಂಭಿಸಿದ ಅವರಿಗೆ ನಂತರ ಅದುವೇ ಆಜೀವ ಸನ್ಯಾಸಿಯಾಗಿ ಮಾರ್ಪಡಲು ಕಾರಣವಾಯಿತು.
ಈಗ, 20 ವರ್ಷಗಳ ನಂತರ, ಸಿರಿಪಾನ್ಯೊ ಸನ್ಯಾಸಿ ಮಾರ್ಗವನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ ಮತ್ತು ಥೈಲ್ಯಾಂಡ್‌ನ ಡಿಟಾವೊ ದಮ್ ಬೌದ್ಧ ಮಠದ ಮಠಾಧೀಶರಾಗಿದ್ದಾರೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಅವರ ತಾಯಿ ಮೊಮ್ವಜಾರೋಂಗ್ಸೆ ಸುಪ್ರಿಂದಾ ಚಕ್ರಬನ್ ಅವರು ಥಾಯ್ ರಾಜಮನೆತನದ ವಂಶಸ್ಥರು. ಅಜಾನ್ ಸಿರಿಪಾನ್ಯೊ 18 ವರ್ಷ ವಯಸ್ಸಿನವನಾಗಿದ್ದಾಗ, ತನ್ನ ಥಾಯ್ ತಾಯಿಯ ಕುಟುಂಬಕ್ಕೆ ಗೌರವ ಸಲ್ಲಿಸಲು ಥೈಲ್ಯಾಂಡ್‌ಗೆ ಹೋಗಿದ್ದರು. ಅವರ ಪ್ರವಾಸದ ಸಮಯದಲ್ಲಿ, ವಿನೋದಕ್ಕಾಗಿ ತಾತ್ಕಾಲಿಕವಾಗಿ ದೀಕ್ಷೆ ಪಡೆದರು ಎಂದು ವರದಿಯಾಗಿದೆ. ಆದಾಗ್ಯೂ, ತಾತ್ಕಾಲಿಕವಾಗಿ ಪ್ರಾರಂಭವಾದದ್ದು ಅಂತಿಮವಾಗಿ ಶಾಶ್ವತ ಬದ್ಧತೆಯಾಗಿ ವಿಕಸನಗೊಂಡಿತು. ನಂತರ ಅವರು ಸಂಪೂರ್ಣ ಸನ್ಯಾಸಿಯ ದೀಕ್ಷೆ ಪಡೆದಿದ್ದಾರೆ.
ಅಜಾನ್ ಸಿರಿಪಾನ್ಯೊ ತನ್ನ ಇಬ್ಬರು ಸಹೋದರಿಯರೊಂದಿಗೆ ಲಂಡನ್‌ನಲ್ಲಿ ಬೆಳೆದರು. ಅವರು ಬ್ರಿಟನ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ಇಂಗ್ಲಿಷ್ ಸೇರಿದಂತೆ ಕನಿಷ್ಠ ಎಂಟು ಭಾಷೆಗಳನ್ನು ಮಾತನಾಡುತ್ತಾರೆ. ವರದಿಯ ಪ್ರಕಾರ, ಕೌಟುಂಬಿಕ ಪ್ರೇಮವು ಬೌದ್ಧಧರ್ಮದ ನಿಯಮಗಳಲ್ಲಿ ಒಂದಾಗಿರುವುದರಿಂದ, ಅಜಾನ್ ಸಿರಿಪಾನ್ಯೊ ತನ್ನ ತಂದೆಯನ್ನು ಆಗೊಮ್ಮೆ ಈಗೊಮ್ಮೆ ನೋಡಲು ಬರುತ್ತಾರೆ.
ಸಿರಿಪಾನ್ಯೊ ಅವರ ಪ್ರಯಾಣವು ಅವರ ಶ್ರೀಮಂತ ಹಿನ್ನೆಲೆಯಿಂದ ಬಂದರೂ ಅವರು ಬದುಕಲು ಆಯ್ಕೆ ಮಾಡಿಕೊಂಡಿರುವ ಸರಳತೆ ಮತ್ತು ಸಮರ್ಪಣಾ ಮನೋಭಾವವು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಎಂಟು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಅವರು ಆಳವಾದ ಆಧ್ಯಾತ್ಮಿಕ ಬೋಧನೆಗಳಿಗಾಗಿ ಹೆಸರು ಪಡೆದಿದ್ದಾರೆ. ಥೇರವಾಡ ಬೌದ್ಧ ಸಂಪ್ರದಾಯವನ್ನು ಅನುಸರಿಸುವ ಅವರು, ತಮ್ಮ ಬೋಧನೆಗಳಲ್ಲಿ ಸಾವಧಾನತೆ, ಆಂತರಿಕ ಶಾಂತಿ ಮತ್ತು ಸರಳತೆಯನ್ನು ಒತ್ತಿಹೇಳುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ