ಒಳ ಮೀಸಲಾತಿ ಹಂಚಿಕೆ : ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾವ ಸಮುದಾಯಗಳಿಗೆ ಎಷ್ಟು?

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಚಿವ ಸಂಪುಟ ಸಭೆ ಶುಕ್ರವಾರ ಮಹತ್ವದ ನಿರ್ಣಯ ಕೈಗೊಂಡಿದೆ.
ವಿಶೇಷ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25 ಹಾಗೂ ಇತರೆ ಸಮುದಾಯಕ್ಕೆ 4.5ರಷ್ಟು ಒಳ ಮೀಸಲಾತಿ (internal reservation) ಕಲ್ಪಿಸಲು ನಿರ್ಧರಿಸಲಾಗಿದ್ದು, 56,432 ಹುದ್ದೆಗಳ ನೇಮಕಾತಿಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್ ನಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಒಳ ಮೀಸಲಾತಿ ಅಂತಿಮವಾಗದ ಕಾರಣದಿಂದ ನೇಮಕಾತಿಗೆ ತೊಂದರೆಯಾಗಿತ್ತು. ಈಗ ಎಡಗೈ 5.25, ಬಲಗೈ 5.25 ಹಾಗೂ ಇತರೆ ವರ್ಗದವರಿಗೆ 4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ 56,432 ಹುದ್ದೆಗಳ ನೇಮಕಾತಿಗೆ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲಾಗುವುದು. ಕೋರ್ಟ್ ಮುಂದಿನ ಆದೇಶದವರೆಗೂ ಈ ಒಳ ಮೀಸಲಾತಿಯ ಅನುಸಾರವೇ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಗೊಂದಲ ಪರಿಹರಿಸಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಿದ್ದೆವು. ಅವರು ಇಂದು ತನ್ನ ವರದಿಯನ್ನು ನೀಡಿದೆ. ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3, ಇತರಿಗೆ 4.4 ರೋಸ್ಟರ್‌ನಂತೆ ಮೀಸಲಾತಿ ನಿಗದಿ ಪಡಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದರೆ, ನಾವು ಅಂತಿಮವಾಗಿ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25, ಇತರೆ ಸಮುದಾಯಕ್ಕೆ 4.5 ಮೀಸಲಾತಿ ಕಲ್ಪಿಸಲು ನಿರ್ಧರಿಸಿದ್ದೇವೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅನುಪಾತ ಅನ್ವಯವಾಗಲಿದ್ದು, ನೇಮಕಾತಿ ವೇಳೆ ಪ್ರವರ್ಗ ಎ-5.25, ಬಿ-5.25, ಸಿ-4.5 ಮೀಸಲಾತಿಯೊಂದಿಗೆ ಅಧಿಸೂಚನೆಯನ್ನು ಮತ್ತೊಮ್ಮೆ ಪ್ರಕಟ ಮಾಡುತ್ತೇವೆ. ಎಂದು ತಿಳಿಸಿದರು.
ಬಜೆಟ್​ನಲ್ಲಿ 56,432 ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಿಸಿದ್ದೇವೆ. ಈ 56,432 ಹುದ್ದೆಗಳನ್ನು ಭರ್ತಿ ಮಾಡುವಾಗ ಇದೇ ಮೀಸಲಾತಿ ಅನುಪಾತ ಅನ್ವಯವಾಗಲಿದೆ ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement