ಫಿರೋಜಾಬಾದ್ : ಮಹಿಳೆಯನ್ನು ಮದುವೆಯಾಗುವ ಉದ್ದೇಶದಿಂದ ಆಕೆಯ ಒಂದೂವರೆ ವರ್ಷದ ಮಗನನ್ನು ಪದೇಪದೇ ನೆಲಕ್ಕೆ ಅಪ್ಪಳಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗೆ ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಜಿಲ್ಲಾ ಸರ್ಕಾರಿ ಅಭಿಯೋಜಕ ರಾಜೀವ ಉಪಾಧ್ಯಾಯ ನೀಡಿದ ಮಾಹಿತಿಯ ಪ್ರಕಾರ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಾ. ಬಬ್ಬು ಸಾರಂಗ್ ಅವರು ಗುರುವಾರ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ ಎಂಬಾತನನ್ನು ತಪ್ಪಿತಸ್ಥನೆಂದು ಘೋಷಿಸಿದ್ದು, ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಮರಣದಂಡನೆ ವಿಧಿಸಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, ಮೇ 30ರಂದು ವಿರಾಜ್ ಅರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಮೈ ಗ್ರಾಮದ ನಿವಾಸಿಯಾಗಿರುವ ತನ್ನ ಅತ್ತಿಗೆ ರತಿ ಅವರನ್ನು ಭೇಟಿ ಮಾಡಲು ಶಿಕೋಹಾಬಾದ್ಗೆ ತೆರಳಿದ್ದ. ರತಿ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು.
ಈ ವೇಳೆ ವಿರಾಜ್, ರತಿ ಅವರಿಗೆ ಮದುವೆಯಾಗುವಂತೆ ಪ್ರಸ್ತಾಪಿಸಿದ್ದ. ಆದರೆ ರತಿ ಅದನ್ನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ವಿರಾಜ್, ರತಿ ಅವರ ಒಂದೂವರೆ ವರ್ಷದ ಪುತ್ರ ಆರವ್ ಎಂಬವನನ್ನು ಪದೇಪದೇ ನೆಲಕ್ಕೆ ಅಪ್ಪಳಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಹತ್ಯೆಯ ಬಳಿಕ ಮಗುವಿನ ಮೃತದೇಹವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ವಿರಾಜ್ನನ್ನು ಸ್ಥಳೀಯರು ಗಮನಿಸಿದ್ದಾರೆ. ಜನರು ಕಂಡಿರುವುದನ್ನು ಅರಿತ ಆತ, ಮೃತದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು. ಅಲ್ಲದೆ, ಕೇವಲ ಆರು ದಿನಗಳಲ್ಲೇ ಎಲ್ಲ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸುವ ಕಾರ್ಯವನ್ನು ಪೂರ್ಣಗೊಳಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ಒಟ್ಟು 13 ಮಂದಿ ಸಾಕ್ಷಿದಾರರು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದರು. ಪ್ರಕರಣವನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸಿದ ಫಿರೋಜಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಾ. ಬಬ್ಬು ಸಾರಂಗ್ ಅವರು ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸಿ, ಆರೋಪಿ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ಗೆ ಮರಣದಂಡನೆ ವಿಧಿಸಿದರು.
ವಿಚಾರಣೆ ವೇಳೆ ಹಾಗೂ ಪೊಲೀಸ್ ತನಿಖೆಯಲ್ಲಿ, ತನ್ನ ರತಿ ಅವರನ್ನು ಮದುವೆಯಾಗಲು ಬಯಸಿದ್ದೆ. ಆಕೆಯ ಮಗ ಆರವ್ ತನ್ನ ಉದ್ದೇಶಕ್ಕೆ ಅಡ್ಡಿಯಾಗಿದ್ದ ಕಾರಣ ಆತನನ್ನು ಹತ್ಯೆಗೈದೆ ಎಂದು ವಿರಾಜ್ ಪೊಲೀಸರಿಗೆ ತಿಳಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ