ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಅಮಾಯಕರ ಜೀವಹಾನಿಗೆ ಪುತಿನ್ ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ದಾಳಿಯ ಅಪರಾಧಿಗಳನ್ನು ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ರಷ್ಯಾ ಮತ್ತು ಚೀನಾದ ಒಳಗೊಳ್ಳಬೇಕು ಎಂದು ಪಾಕಿಸ್ತಾನದ ಒತ್ತಾಯದ ಮಧ್ಯೆ ರಷ್ಯಾ ಅಧ್ಯಕ್ಷ ಪುತಿನ್ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಹಾಗೂ ಪಾಕಿಸ್ತಾನಕ್ಕೆ ಶಾಕ್ ಆಗಿದೆ.
ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ವಿಜಯ ದಿನದ 80 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪುತಿನ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಈ ವರ್ಷ ಭಾರತದಲ್ಲಿ ನಡೆಯಲಿರುವ ವಾರ್ಷಿಕ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಗೆ ಅವರನ್ನು ಆಹ್ವಾನಿಸಿದರು.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಚರ್ಚಿಸಲು ಸೋಮವಾರದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಚ್ಚಿದ ಬಾಗಿಲಿನ ಸಭೆಯ ಮೊದಲು ಪುತಿನ್ ಅವರು ಬೆಂಬಲ ನೀಡಿದ್ದಾರೆ.
“ಈ ಬೆಳವಣಿಗೆಗಳಿಗೆ ಸಂಬಂಧಿಸಿದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಪಾಕಿಸ್ತಾನವು ಒತ್ತಾಯಿಸುತ್ತದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೂಲಗಳ ಪ್ರಕಾರ, ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬಹಿರಂಗಪಡಿಸಲು ಭಾರತ ಸೋಮವಾರದ ಅವಕಾಶವನ್ನು ಬಳಸಿಕೊಳ್ಳಲಿದೆ.
ಭಾರತಕ್ಕೆ ರಷ್ಯಾದ ಬೆಂಬಲ
ಪಹಲ್ಗಾಮ್ ದುರಂತದ ಬಗ್ಗೆ ರಷ್ಯಾ ಅಧ್ಯಕ್ಷರು ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಸಂತಾಪ ಸೂಚಿಸಿದ್ದರು, ಈ ಘಟನೆಯನ್ನು “ಯಾವುದೇ ಸಮರ್ಥನೆ ಇಲ್ಲದ” ಹಾಗೂ “ಕ್ರೂರ ಅಪರಾಧ” ಎಂದು ಬಲವಾಗಿ ಖಂಡಿಸಿದ್ದರು.
ಪಾಕಿಸ್ತಾನದ ಜೊತೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಭಾರತದ ಸೇನೆಯು ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯೊಂದಿಗೆ ಇಗ್ಲಾ-ಎಸ್ ಕ್ಷಿಪಣಿಗಳ ಸರಕನ್ನು ಪಡೆದುಕೊಂಡಿತು, ಇದು ಭಾರತದ ವೈಮಾನಿಕ ರಕ್ಷಣಾ ವ್ಯವಸ್ಥೆಗೆ ಪ್ರಮುಖ ಉತ್ತೇಜನವಾಗಿದೆ. ಈ ರಕ್ಷಣಾ ವ್ಯವಸ್ಥೆಯನ್ನು 2009 ರಿಂದ ರಷ್ಯಾದ ಸಹಾಯದಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ