ಉರಿ ಬಿಸಿಲಿನಲ್ಲಿ ʼತಲೆಗವಸುʼ..: ಸಿಸಿಟಿವಿ ಸುಳಿವಿನ ಮೇಲೆ ಪೊಲೀಸರು ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಭೇದಿಸಿದ್ದು ಹೇಗೆ ?

ಪುಣೆ: ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾಗಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ ಅಗರ್ವಾಲ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ಇದು ಆಕಸ್ಮಿಕ ಸಾವಲ್ಲ, ಇದು ಭೀಕರ ಕೊಲೆ ಎಂಬುದು ಬೆಳಕಿಗೆ ಬಂದಿದೆ. ನವೆಂಬರ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕಾಗಿದ್ದ ಭಾವಿ ಪತ್ನಿಯೇ ತನ್ನ ಪ್ರೇಮಿಯೊಂದಿಗೆ ಸೇರಿ ಕೇತನ್‌ ಅವರನ್ನು ಲೋಹಗಢ ಕೋಟೆಯಿಂದ 400 ಅಡಿ ಆಳದ ಕಂದಕಕ್ಕೆ ನೂಕಿ ಕೊಲೆಗೈದಿರುವುದು ತನಿಖೆಯಿಂದ ಗೊತ್ತಾಗಿದೆ.
ಲೋನಾವಾಲಾ ಗ್ರಾಮಾಂತರ ಪೊಲೀಸರು ಈ ಸಂಬಂಧ ಕೇತನ್‌ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್‌ ಬಾಬುಲಾಲ ಚೌಧರಿ (22) ಎಂಬಾತನನ್ನು ಬಂಧಿಸಿ, ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಸಿಯಾ ಬೇಕರಿ ಉದ್ಯಮಿಯ ಪುತ್ರಿಯಾಗಿದ್ದರೆ ಚೇತನ್ ಕುಟುಂಬದವರು ಡ್ರೈ ಫ್ರೂಟ್ಸ್ ಉತ್ಪಾದನಾ ಕಂಪನಿ ಹೊಂದಿದ್ದಾರೆ. ವ್ಯಾಪಾರದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕೇತನ್ ತಮ್ಮ ಪ್ರೀತಿ ಹಾಗೂ ಆಸ್ತಿಗೆ ಅಡ್ಡಿಯಾಗುತ್ತಾನೆಂದು ಭಾವಿಸಿ ಈ ದಾರುಣ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಬಾಲಿಗೆ ಹೋಗಬೇಕಿದ್ದ ಪ್ರವಾಸ ತಡೆದಿದ್ದೇ ಸಿಯಾ?
ಕೇತನ್ ಮತ್ತು ಸಿಯಾ ಅವರ ನಿಶ್ಚಿತಾರ್ಥ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ಜೂನ್ 6 ರಂದು ಇವರಿಬ್ಬರು ಪ್ರೀ-ವೆಡ್ಡಿಂಗ್ ಶೂಟಿಂಗ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ತೆರಳಬೇಕಿತ್ತು. ಆದರೆ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್ ಪಾಸ್‌ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಕೇತನ್ ತಂದೆ ವಿಶಾಲ ಅಗರ್ವಾಲ್, “ಮನೆಯಿಂದ ಹೊರಡುವಾಗ ಕಾರಿನಲ್ಲಿ ನನ್ನ ಮಗ, ಮಗಳು, ಸಿಯಾ ಮತ್ತು ಆಕೆಯ ಸಹೋದರ ಸಾಹಿಲ್ ಮಾತ್ರ ಇದ್ದರು. ಎಲ್ಲರ ಪಾಸ್‌ಪೋರ್ಟ್‌ಗಳನ್ನು ಒಂದೇ ಬ್ಯಾಗ್‌ನಲ್ಲಿ ಇಡಲಾಗಿತ್ತು. ಹಾದಿಯಲ್ಲಿ ಫುಡ್ ಮಾಲ್‌ ಒಂದರ ಬಳಿ ನಿಲ್ಲಿಸಿದಾಗ, ತನ್ನ ಮೊಬೈಲ್ ಮರೆತು ಬಂದಿರುವುದಾಗಿ ಹೇಳಿ ಸಿಯಾ ಒಬ್ಬಳೇ ಕಾರಿನ ಬಳಿ ಹೋಗಿದ್ದಳು. ಅಲ್ಲಿಗೆ ತಲುಪಿದಾಗ ಕೇವಲ ಕೇತನ್ ಪಾಸ್‌ಪೋರ್ಟ್ ಮಾತ್ರ ಕಳ್ಳತನವಾಗಿತ್ತು. ಇದು ಸಿಯಾಳ ಸಂಚಿನ ಭಾಗವೇ ಆಗಿತ್ತು” ಎಂದು ಆರೋಪಿಸಿದ್ದಾರೆ.

ಜೂನ್ 14 ರ ಮೊದಲ ಕೊಲೆ ಯತ್ನ ಹಾಗೂ ‘ಹಾವಿನ’ ನಾಟಕ !
ಬಾಲಿ ಪ್ರವಾಸ ರದ್ದಾದ ಮೂರ್ನಾಲ್ಕು ದಿನಗಳ ನಂತರ ಸಿಯಾ ಜೂನ್ 14 ರಂದು ಕೇತನ್‌ನನ್ನು ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಅಲ್ಲಿ ಆಕೆ ಕೇತನ್‌ನನ್ನು ಕೋಟೆಯಿಂದ ಕೆಳಗೆ ನೂಕಿದ್ದಳು. ಆದರೆ ಅದೃಷ್ಟವಶಾತ್ ಕೇತನ್ ಅಲ್ಲಿದ್ದ ಪೊದೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದ. ಈ ವೇಳೆ ತನ್ನ ರಹಸ್ಯ ಬಯಲಾಗಬಹುದೆಂಬ ಭಯದಿಂದ ಸಿಯಾ ತಕ್ಷಣ “ಹಾವು, ಹಾವು” ಎಂದು ಜೋರಾಗಿ ಕಿರುಚುತ್ತಾ, ಆತನನ್ನು ತಬ್ಬಿಕೊಂಡು ನಾಟಕವಾಡಿದ್ದಳು ಎಂದು ವಿಶಾಲ ಅಗರ್ವಾಲ್ ತಿಳಿಸಿದ್ದಾರೆ.
ಜೂನ್ 18 ರಂದು ನಡೆದ ಕ್ರೂರ ಹತ್ಯೆ
ಜೂನ್ 19 ರಂದು ಸಿಯಾಳ ಜನ್ಮದಿನವಾಗಿದ್ದರಿಂದ, ಜೂನ್ 18 ರಂದೇ ಪ್ರೀ-ಬರ್ತ್‌ಡೇ ಆಚರಿಸಬೇಕೆಂದು ಹಠ ಹಿಡಿದು ಕೇತನ್‌ನನ್ನು ಮತ್ತೆ ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಜೂನ್ 18 ರ ಬೆಳಗ್ಗೆ 8:20ಕ್ಕೆ ಕೇತನ್ ಮನೆಯಿಂದ ಹೊರಟಿದ್ದ. ಆದರೆ ಬೆಳಗ್ಗೆ 10:45ರ ಸುಮಾರಿಗೆ ಕೇತನ್ ಕಂದಕಕ್ಕೆ ಬಿದ್ದಿರುವುದಾಗಿ ಸಿಯಾಳ ತಾಯಿ ಕೇತನ್ ಕುಟುಂಬಕ್ಕೆ ಕರೆ ಮಾಡಿ ತಿಳಿಸಿದ್ದರು. ಸಿಯಾ ಮತ್ತು ಆಕೆಯ ಪ್ರೇಮಿ ಚೇತನ್ ಸಂಚು ರೂಪಿಸಿ, ಚೇತನ್‌ನನ್ನು ಕೋಟೆಗೆ ಬರಮಾಡಿಕೊಂಡು ಇಬ್ಬರೂ ಸೇರಿ ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದರು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್‌ 24ರಿಂದ 4 ದಿನ ಭಾರಿ ಮಳೆ ಮುನ್ಸೂಚನೆ ; ಆರೆಂಜ್ ಅಲರ್ಟ್ ಘೋಷಣೆ

ಅನುಮಾನ ಮೂಡಿಸಿದ ಸಿಯಾಳ ನಡವಳಿಕೆ
ಆರಂಭದಲ್ಲಿ ಜೋರಾದ ಗಾಳಿಯಿಂದಾಗಿ ಕೇತನ್ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಕೇತನ್ ಶವವನ್ನು ತಂದಾಗ ಸಿಯಾಳ ಮುಖದಲ್ಲಿ ಯಾವುದೇ ದುಃಖದ ಭಾವನೆ ಇರಲಿಲ್ಲ. ಈ ನಡವಳಿಕೆ ಕೇತನ್ ತಂದೆಗೆ ತೀವ್ರ ಅನುಮಾನ ಮೂಡಿಸಿತ್ತು.
“ನನ್ನ ಮಗನ ಸಾವು ಆಕೆಗೆ ಕೊಂಚವೂ ಬೇಸರ ತಂದಿರಲಿಲ್ಲ. ಈ ಮದುವೆ ಉಭಯ ಕುಟುಂಬಗಳ ಒಪ್ಪಿಗೆಯಿಂದ ನಡೆದಿತ್ತು. ಆದರೆ ಸಿಯಾಳ ಪ್ರೇಮ ಸಂಬಂಧದ ಬಗ್ಗೆ ನಮಗೆ ತಿಳಿದಿರಲಿಲ್ಲ. ಆಕೆಯ ಇಡೀ ಕುಟುಂಬಕ್ಕೆ ಈಕೆಯ ನಡವಳಿಕೆ ಗೊತ್ತಿತ್ತು. ಆದರೂ ನಮ್ಮನ್ನು ಉದ್ದೇಶಪೂರ್ವಕವಾಗಿ ಈ ಮದುವೆಗೆ ಒಪ್ಪಿದ್ದರು” ಎಂದು ವಿಶಾಲ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ.

ಪತ್ತೆಯಾಗಿದ್ದು ಹೇಗೆ..? ಪೊಲೀಸರಿಗೆ ಅನುಮಾನ ಮೂಡಿಸಿದ ‘ತಲೆಗವಸು’
ಜೂನ್ 18 ರಂದು ಉದ್ಯಮಿ ಕೇತನ್ ಅಗರ್ವಾಲ್ ಮತ್ತು ಅವರ ಭಾವಿ ಪತ್ನಿ ಸಿಯಾ ಗೋಯಲ್ ಕೋಟೆಯ ಟ್ರಕ್ಕಿಂಗ್ ಮಾರ್ಗದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕೋಟೆಯ ಟಿಕೆಟ್ ಕೌಂಟರ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯಾವಳಿಗಳನ್ನು ಪರಿಶೀಲಿಸುವಾಗ, ಈ ಜೋಡಿಯನ್ನು ಸ್ವಲ್ಪ ದೂರದಿಂದಲೇ ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆತನ ವೇಷಭೂಷಣವೇ ತನಿಖಾಧಿಕಾರಿಗಳಲ್ಲಿ ಮೊದಲ ಅನುಮಾನ ಮೂಡಿಸಿತ್ತು. ಆ ವ್ಯಕ್ತಿ ಶಾರ್ಟ್ಸ್ ಮತ್ತು ತಲೆಗವಸು (Hoodie) ಧರಿಸಿದ್ದ, ಮುಖ ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ತಲೆಗವಸನ್ನು ಕೆಳಗೆ ಎಳೆದುಕೊಂಡಿದ್ದ ಹಾಗೂ ತಲೆಗವಸಿನ ಮೇಲೆಯೇ ಹೆಡ್‌ಸೆಟ್ ಧರಿಸಿದ್ದ. ಅಂದು ಮಧ್ಯಾಹ್ನ ಆ ಭಾಗದಲ್ಲಿ ಬರೋಬ್ಬರಿ 33 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಅಷ್ಟೊಂದು ಸುಡುವ ಬಿಸಿಲಿನಲ್ಲಿ ಯಾರಾದರೂ ಈ ರೀತಿ ತಲೆಗವಸು ಧರಿಸಲು ಸಾಧ್ಯವೇ ಎಂದು ಪೊಲೀಸರು ಹವಾಮಾನ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡರು.
ಮತ್ತೊಂದು ಸಿಸಿಟಿವಿ ಕ್ಲಿಪ್‌ನಲ್ಲಿ, ಸಿಯಾ ಇದ್ದಕ್ಕಿದ್ದಂತೆ ಹಿಂದಿರುಗಿ ನೋಡುವುದು ಮತ್ತು ಅದೇ ಕ್ಷಣದಲ್ಲಿ ಆ ಹುಡ್ ಧರಿಸಿದ ವ್ಯಕ್ತಿ ತಕ್ಷಣವೇ ಕೆಳಗೆ ಕುಳಿತುಕೊಳ್ಳುವುದು ಕಂಡುಬಂದಿದೆ. ಇದು ಪೊಲೀಸರ ಸಂಶಯವನ್ನು ಮತ್ತಷ್ಟು ಬಲಪಡಿಸಿತು.
ಅಪಘಾತ ಎಂದು ಕಥೆ ಕಟ್ಟಿದ್ದ ಪ್ರೇಯಸಿ:
26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಕೋಟೆಯ ಆಳವಾದ ಕಣಿವೆಗೆ ಬಿದ್ದು ಸಾವಿಗೀಡಾಗಿದ್ದರು. ಘಟನೆ ನಡೆದ ತಕ್ಷಣ ಕೇತನ್ ಕಾಲು ಜಾರಿ ಬಿದ್ದಿದ್ದಾರೆ ಎಂದು ಸಿಯಾ ಆತನ ಕುಟುಂಬದವರಿಗೆ ತಿಳಿಸಿದ್ದರಿಂದ ಪೊಲೀಸರು ಇದನ್ನು ಮೊದಲು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳ ತೀವ್ರ ತನಿಖೆಯ ನಂತರ ಪೊಲೀಸರು ತಲೆಗವಸು ಧರಿಸಿದ್ದ ವ್ಯಕ್ತಿ ಚೇತನ್ ಚೌಧರಿ (22) ಎಂಬುದನ್ನು ಪತ್ತೆಹಚ್ಚಿದರು.

ಪ್ರಮುಖ ಸುದ್ದಿ :-   ಇರಾನ್-ಅಮೆರಿಕ ಒಪ್ಪಂದದ ನಂತ್ರ ಹಾರ್ಮುಜ್ ಜಲಸಂಧಿ ದಾಟಿದ ಭಾರತಕ್ಕೆ ಬರುವ 11 ಹಡಗುಗಳು ; ಇನ್ನೂ 10 ಹಡಗುಗಳು ಬಾಕಿ

ಲವ್ ಅಫೇರ್, ಅರಮನೆ ಮದುವೆ …:
ಪೊಲೀಸರ ತನಿಖೆಯ ವೇಳೆ ಸಿಯಾ (20) ಮತ್ತು ಚೇತನ್ ಚೌಧರಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಜೂನ್ 18 ರಂದು ಪ್ಲಾನ್ ಪ್ರಕಾರ ಸಿಯಾ ಮತ್ತು ಚೇತನ್ ಇಬ್ಬರೂ ಸೇರಿ ಕೇತನ್‌ನನ್ನು ಕಣಿವೆಗೆ ತಳ್ಳಿ ಕೊಂದಿದ್ದಾರೆ ಎಂದು ಮಂಗಳವಾರ ಪೊಲೀಸರು ಆರೋಪಿಸಿದ್ದಾರೆ. ಸದ್ಯ ಇಬ್ಬರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಕೇತನ್ ಕುಟುಂಬಸ್ಥರು ತೀವ್ರ ಶೋಕದಲ್ಲಿದ್ದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕುಟುಂಬವನ್ನು ಹೆಚ್ಚು ಪ್ರಶ್ನಿಸಿರಲಿಲ್ಲ. ಆದರೆ ತನಿಖೆ ಮುಂದುವರಿದಂತೆ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ ಮತ್ತು ಮದುವೆಯನ್ನು ಕನಿಷ್ಠ ಒಂದು ವರ್ಷ ಮುಂದೂಡಲು ಸಾಧ್ಯವೇ ಎಂದು ಆಕೆ ಈ ಹಿಂದೆ ಕೇಳಿದ್ದಳು ಎಂಬ ವಿಷಯವನ್ನು ಕೇತನ್ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ಮೃತ ಕೇತನ್ ಮತ್ತು ಸಿಯಾಗೆ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಿತ್ತು ಮತ್ತು ಇದೇ ನವೆಂಬರ್‌ನಲ್ಲಿ ಉದಯಪುರದ ಐಷಾರಾಮಿ ಅರಮನೆಯೊಂದನ್ನು (Palace) ಬುಕ್ ಮಾಡಿ ಅದ್ಧೂರಿ ವಿವಾಹಕ್ಕೆ ತಯಾರಿ ನಡೆಸಲಾಗಿತ್ತು. ಆದರೆ ಪ್ರಿಯತಮನೊಂದಿಗೆ ಸೇರಿ ತನ್ನ ಭಾವಿ ಪತಿಯನ್ನೇ ಕಣಿವೆಗೆ ತಳ್ಳಿ ಸಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಇದೀಗ ತಂದೆಯ ದೂರಿನ ಮೇರೆಗೆ ಲೋನಾವಾಲಾ ಗ್ರಾಮಾಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಅಪರಾಧ ವಿಭಾಗದ ಪೊಲೀಸರು ಮೊದಲು ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ಕೃತ್ಯದ ರಹಸ್ಯ ಬಯಲಾಗಿದೆ. ಸದ್ಯ ಇಬ್ಬರೂ ಆರೋಪಿಗಳು  ಪೊಲೀಸ್ ವಿಚಾರಣೆಗೆ ಒಳಗಾಗಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement