ಮುಂಬೈ: ದೇಶದ ವಿವಿಧ ಭಾಗಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ವಿರುದ್ಧ ಜನರೇಷನ್ ಝಡ್ (Gen Z) ಯುವಕರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಆರ್ಎಸ್ಎಸ್ ಸರಸಂಘಚಾಲಕ ಮೋಹನ ಭಾಗವತ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಹವಾಲುಗಳು ನ್ಯಾಯಸಮ್ಮತವಾಗಿದ್ದು, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆ ಅಗತ್ಯವಿದೆ ಎಂದು ಅವರು ಗುರುವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಪ್ರತಿಭಟನಾಕಾರರನ್ನು “ದೇಶದ್ರೋಹಿಗಳು” ಎಂದು ಕರೆಯುವ ಪ್ರವೃತ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “Gen Z ಪ್ರತಿಭಟಿಸುತ್ತಿದೆ ಎಂದರೆ ಅವರು ದೇಶದ್ರೋಹಿಗಳಲ್ಲ. ಅವರು ನಮ್ಮವರೇ, ನಮ್ಮ ಮುಂದಿನ ಪೀಳಿಗೆ. ನಾನು ಹಾಗೆ ನಂಬುವುದಿಲ್ಲ. ಇಂದಿನ ಜನ್ ಝಡ್ (Gen Z) ಮತ್ತು ಜನ್ ಆಲ್ಫಾ (Gen Alpha) ಪೀಳಿಗೆ ನಮ್ಮ ತಲೆಮಾರಿಗಿಂತ ಹೆಚ್ಚು ಪ್ರಾಮಾಣಿಕವಾಗಿದೆ. ದೇಶಭಕ್ತಿ ಮತ್ತು ಸೇವೆಯ ಪ್ರಾಮಾಣಿಕ ಕರೆಗೆ ಅವರು ಉತ್ತಮವಾಗಿ ಸ್ಪಂದಿಸುತ್ತಾರೆ” ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಹ ಒಮ್ಮತದ ಮಾರ್ಗ
ಪ್ರಜಾಪ್ರಭುತ್ವದಲ್ಲಿ ಒಮ್ಮತ ನಿರ್ಮಿಸಲು ಪ್ರತಿಭಟನೆಯೂ ಒಂದು ವಿಧಾನ ಎಂದು ಭಾಗವತ್ ಹೇಳಿದರು. ವಿವಿಧ ಅಭಿಪ್ರಾಯಗಳು ಒಂದಾಗಿ ಚರ್ಚೆಯ ಮೂಲಕ ಒಮ್ಮತ ಮೂಡುತ್ತದೆ. ಸಂವಾದದ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ನಡೆಸಬಹುದು. ಆದರೆ ಪ್ರತಿಭಟನೆಯ ಉದ್ದೇಶ ಸಮಾಜದಲ್ಲಿ ವಿಭಜನೆ ಉಂಟುಮಾಡುವುದಲ್ಲ, ಬದಲಿಗೆ ಒಮ್ಮತವನ್ನು ರೂಪಿಸುವುದಾಗಿರಬೇಕು ಎಂದು ಅವರು ಹೇಳಿದರು.
“ಇತ್ತೀಚೆಗೆ ನಡೆದ ಝನ್ ಝಡ್ ಪ್ರತಿಭಟನೆಗಳಲ್ಲಿ ಅವರ ಅಹವಾಲುಗಳು ನಿಜವಾದವು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಆದರೆ ಅದು ಆಗುತ್ತಿಲ್ಲ. ಅದಕ್ಕಾಗಿಯೇ ಅವರು ಧ್ವನಿ ಎತ್ತುತ್ತಿದ್ದಾರೆ. ಆದ್ದರಿಂದ ಅವರೊಂದಿಗೆ ಸಂವಾದ ನಡೆಸುವುದು ಅಗತ್ಯ” ಎಂದು ಅವರು ಹೇಳಿದರು.
ಅವರು ತಾರ್ಕಿಕ ಉತ್ತರ ಬಯಸುತ್ತಾರೆ….
ತಮ್ಮ ಕಾಲದಲ್ಲಿ ಹಿರಿಯರು ಹೇಳಿದ್ದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ಅಭ್ಯಾಸವಿತ್ತು. ಆದರೆ ಇಂದಿನ ಜನ್ ಝಡ್ (Gen Z) ಮತ್ತು ಜನ್ ಆಲ್ಫಾ (Gen Alpha) ತಲೆಮಾರಿನವರು ಪ್ರಶ್ನಿಸುತ್ತಾರೆ, ತಾರ್ಕಿಕ ಉತ್ತರ ಮತ್ತು ಪ್ರೀತಿಯನ್ನು ಬಯಸುತ್ತಾರೆ ಎಂದು ಭಾಗವತ್ ಹೇಳಿದರು.
“ಇಂಗ್ಲಿಷ್ನಲ್ಲಿ ಇದನ್ನು ‘ಡಿಬೇಟ್’ ಎನ್ನುತ್ತಾರೆ. ನಮ್ಮ ಸಂಪ್ರದಾಯದಲ್ಲಿ ಇದನ್ನು ‘ಶಾಸ್ತ್ರಾರ್ಥ’ ಎಂದು ಕರೆಯಲಾಗುತ್ತದೆ. ಇಲ್ಲಿ ಕೇವಲ ವಾದ-ಪ್ರತಿವಾದವಲ್ಲ; ‘ಪೂರ್ವಪಕ್ಷ’ ಮತ್ತು ‘ಉತ್ತರಪಕ್ಷ’ ಎಂಬ ಎರಡು ದೃಷ್ಟಿಕೋನಗಳಿವೆ. ಪ್ರತಿಯೊಬ್ಬರ ಅಭಿಪ್ರಾಯವೂ ಹೊಸ ಆಯಾಮವನ್ನು ತೆರೆದಿಡುತ್ತದೆ. ವಿವಿಧ ಅಭಿಪ್ರಾಯಗಳು ಮತ್ತು ಪ್ರತಿವಾದಗಳು ಸೇರಿ ಸತ್ಯದ ಸಮಗ್ರ ಚಿತ್ರಣ ನೀಡುತ್ತವೆ” ಎಂದು ಅವರು ವಿವರಿಸಿದರು.
“ಜನ್ ಝಡ್ ಪ್ರತಿಭಟಿಸಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ವಿಧಾನಗಳಿವೆ. ಸಂವಿಧಾನ ರಚಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾಷಣಗಳಲ್ಲಿ ಇದರ ಬಗ್ಗೆ ಮಾರ್ಗದರ್ಶನವಿದೆ. ಜನ್ ಝಡ್ ಕೇವಲ ವಿರೋಧಕ್ಕಾ ಪ್ರತಿಭಟಿಸುತ್ತಿಲ್ಲ, ತಮ್ಮ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಉದ್ದೇಶದಿಂದ ಮಾತನಾಡುತ್ತಿದ್ದಾರೆ. ಪ್ರತಿಭಟನೆ ವ್ಯಕ್ತಿಗಳ ವಿರುದ್ಧವಲ್ಲ, ವ್ಯವಸ್ಥೆಯ ಸುಧಾರಣೆಗಾಗಿ ಆಗಬೇಕು” ಎಂದು ಅವರು ಹೇಳಿದರು.
ಶಿಕ್ಷಣ ವಾಣಿಜ್ಯ ವ್ಯವಹಾರವಾಗಬಾರದು
“ಶಿಕ್ಷಣವು ವಾಣಿಜ್ಯ ವ್ಯವಹಾರವಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಲಭ್ಯವಾಗುವ ರೀತಿಯಲ್ಲಿ ವ್ಯವಸ್ಥೆ ರೂಪುಗೊಳ್ಳಬೇಕು. Gen Z ಪ್ರತಿಭಟಿಸಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಂವಿಧಾನಾತ್ಮಕ ಮಾರ್ಗಗಳಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕೇವಲ ಎರಡು ಭಾಷಣಗಳನ್ನು ಓದಿದರೂ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬ ಸೂಚನೆಗಳು ದೊರೆಯುತ್ತವೆ” ಎಂದು ಭಾಗವತ್ ಹೇಳಿದರು.
ಲಾಠಿ ಚಾರ್ಜ್ ಏಕೆ ನಡೆಯಿತು ಗೊತ್ತಿಲ್ಲ; ಜನ್ ಝಡ್ (Gen Z) ಮೇಲೆ ನನಗೆ ಸಂಪೂರ್ಣ ನಂಬಿಕೆ
ಜನ್ ಝಡ್ (Gen Z) ಮತ್ತು ಜನ್ ಆಲ್ಫಾ (Gen Alpha) ತಲೆಮಾರಿನವರು ತಾರ್ಕಿಕ ಉತ್ತರಗಳನ್ನು ಬಯಸುತ್ತಾರೆ. ಹಿರಿಯರು ಹೇಳಿದ್ದನ್ನೇ ಪ್ರಶ್ನಿಸದೆ ಒಪ್ಪಿಕೊಳ್ಳುವ ಹಳೆಯ ಮನೋಭಾವ ಈಗ ಅನ್ವಯಿಸುವುದಿಲ್ಲ ಎಂದು ಭಾಗವತ್ ಹೇಳಿದರು.
“ಜನ್ ಝಡ್ (Gen Z) ಪ್ರತಿಭಟಿಸಬಾರದು ಎಂಬ ಪ್ರಶ್ನೆಯೇ ಇಲ್ಲ. ಆದರೆ ಅವರು ಧ್ವನಿ ಎತ್ತಿದಾಗ ನಾವು ಅದನ್ನು ಆಲಿಸಬೇಕು. ಹಿಂದಿನ ಪ್ರತಿಭಟನೆಗಳಲ್ಲಿ ಸಂವಾದದ ಕೊರತೆ ಇತ್ತು. ಅವರು ನಮ್ಮ ಮುಂದಿನ ಪೀಳಿಗೆ; ನಮ್ಮವರೇ. ಅವರನ್ನು ಹೇಗೆ ‘ದೇಶದ್ರೋಹಿಗಳು’ ಎಂದು ಕರೆಯಬಹುದು? ಜನ್ ಝಡ್ (Gen Z) ಮತ್ತು ಜನ್ ಆಲ್ಫಾ (Gen Alpha) ಅತ್ಯಂತ ಪ್ರಾಮಾಣಿಕ ತಲೆಮಾರುಗಳು. ಲಾಠಿ ಚಾರ್ಜ್ ಏಕೆ ನಡೆಯಿತು, ಹೇಗೆ ನಡೆಯಿತು ಎಂಬ ಸಂಪೂರ್ಣ ಮಾಹಿತಿ ನನಗೂ ಇಲ್ಲ, ನಿಮಗೂ ಇಲ್ಲ. ಆದರೆ ನನಗೆ ಜನ್ ಝಡ್ (Gen Z) ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ