
ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ನಡೆದ ‘ಎಐ ಸಮಿಟ್’ (AI Summit) ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ವಿಚಾರವಾಗಿ, ಶಿಮ್ಲಾದಲ್ಲಿ ಬುಧವಾರ ತಡರಾತ್ರಿ ದೆಹಲಿ ಮತ್ತು ಹಿಮಾಚಲ ಪ್ರದೇಶ ಪೊಲೀಸರ ನಡುವೆ ಅಸಾಧಾರಣ ಜಟಾಪಟಿ ನಡೆದಿದೆ. ಅಂತರರಾಜ್ಯ ಪೊಲೀಸ್ ಕಾರ್ಯಾಚರಣೆಯಾಗಿ ಆರಂಭವಾದ ಈ ಘಟನೆ, ವಾಹನಗಳ ತಡೆ, ವಾಗ್ವಾದ ಮತ್ತು ಪರಸ್ಪರ ಕಿಡ್ನ್ಯಾಪ್ ಪ್ರಕರಣ ದಾಖಲಿಸುವ ಹಂತಕ್ಕೆ ತಲುಪಿ 24 ಗಂಟೆಗಳ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಬಂಧನ: ಬುಧವಾರ ಬೆಳಗ್ಗೆ ದೆಹಲಿ ಪೊಲೀಸರು ಶಿಮ್ಲಾದ ಹೋಟೆಲ್ ಒಂದರಲ್ಲಿದ್ದಮೂವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು.

ಹಿಮಾಚಲ ಪೊಲೀಸರ ಆಕ್ಷೇಪ: ನಿಯಮಗಳನ್ನು ಗಾಳಿಗೆ ತೂರಿ “ಅನಧಿಕೃತ ಬಂಧನ” ಮಾಡಲಾಗಿದೆ ಎಂದು ಆರೋಪಿಸಿದ ಹಿಮಾಚಲ ಪೊಲೀಸರು, ದೆಹಲಿ ಪೊಲೀಸರ ಬೆಂಗಾವಲು ಪಡೆಯನ್ನು ತಡೆದರು.
ಕಿಡ್ನ್ಯಾಪ್ ಕೇಸ್: ದೆಹಲಿ ಪೊಲೀಸರು ನಾಗರಿಕ ಉಡುಪಿನಲ್ಲಿ ಬಂದು ಯಾವುದೇ ದಾಖಲೆ ನೀಡದೆ ಕಾರ್ಯಕರ್ತರನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಶಿಮ್ಲಾ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದರು.
ಟ್ರಾನ್ಸಿಟ್ ರಿಮಾಂಡ್: ವೈದ್ಯಕೀಯ ಪರೀಕ್ಷೆಯ ನಂತರ, ದೆಹಲಿ ಪೊಲೀಸರು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಿ, ದೆಹಲಿಗೆ ಕರೆದೊಯ್ಯಲು ‘ಟ್ರಾನ್ಸಿಟ್ ರಿಮಾಂಡ್’ ಪಡೆದರು.
ಮತ್ತೆ ತಡೆದ ಪೊಲೀಸರು: ಗುರುವಾರ ಮುಂಜಾನೆ ಶಿಮ್ಲಾದ ಕಾನ್ಲೋಗ್‌ನಲ್ಲಿ ದೆಹಲಿ ಪೊಲೀಸರನ್ನು ಮತ್ತೆ ತಡೆಯಲಾಯಿತು. “ಅಪಹರಣದ ತನಿಖೆಗೆ ಸಹಕರಿಸಲು ಕೆಲವು ದೆಹಲಿ ಪೊಲೀಸರು ಇಲ್ಲಿಯೇ ಇರಬೇಕು” ಎಂದು ಶಿಮ್ಲಾ ಪೊಲೀಸರು ಪಟ್ಟು ಹಿಡಿದರು. ಆದರೆ ಇದಕ್ಕೆ ದೆಹಲಿ ಪೊಲೀಸರು ಒಪ್ಪಲಿಲ್ಲ.
ಬೆಳಗಿನ ಜಾವ 4 ಗಂಟೆಗೆ ಸೋಘಿ ಗಡಿಯಲ್ಲಿ ದೆಹಲಿ ಪೊಲೀಸರ ವಾಹನವನ್ನು ತಡೆದು ಬ್ಯಾರಿಕೇಡ್ ಹಾಕಲಾಯಿತು. ಸಿಸಿಟಿವಿ ದೃಶ್ಯಾವಳಿಗಳಿದ್ದ ಡಿವಿಆರ್ (DVR) ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಒಂದು ವಾಹನವನ್ನು ಶಿಮ್ಲಾ ಪೊಲೀಸರು ಜಪ್ತಿ ಮಾಡಿದರು.
ನಂತರ, ದೆಹಲಿ ಪೊಲೀಸರು ತಮ್ಮ ಬಳಿಯಿರುವ ಪುರಾವೆಗಳ ಪಟ್ಟಿಯನ್ನು (Seizure Memo) ಹಂಚಿಕೊಂಡ ನಂತರ ಸಂಘರ್ಷ ತಣ್ಣಗಾಯಿತು. 18 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ಅವಧಿಯಲ್ಲಿ ಈಗಾಗಲೇ ಹೆಚ್ಚಿನ ಸಮಯ ವ್ಯರ್ಥವಾಗಿದ್ದರಿಂದ, ದೆಹಲಿ ತಂಡವು ಆರೋಪಿಗಳೊಂದಿಗೆ ದೆಹಲಿಯತ್ತ ಪ್ರಯಾಣ ಬೆಳೆಸಿತು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ರಾಜಕೀಯ ಆಯಾಮವು ಪೊಲೀಸರ ನಡುವಿನ ಈ ಸಂಘರ್ಷಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ