ಕಾರವಾರ : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕುಮಟಾದ ಅರ್ಚಕರೊಬ್ಬರನ್ನು ಪೂಜೆಯ ನೆಪವೊಡ್ಡಿ ಕರೆದೊಯ್ದು ಭೀಕರವಾಗಿ ಹತ್ಯೆಗೈದು ತೋಟದಲ್ಲೇ ಹೂತುಹಾಕಿದ್ದ ಆರು ವರ್ಷಗಳ ಹಿಂದಿನ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಪರಮೇಶ್ವರ ಪ್ರಸನ್ನ ಅವರು, ಕೃತ್ಯವೆಸಗಿದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಕುಮಟಾ ತಾಲೂಕಿನ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಮತ್ತು ಸೊರಬ ಮೂಲದ ಧನಂಜಯ ನಾಯ್ಕ ಶಿಕ್ಷೆಗೆ ಗುರಿಯಾದವರು ಎಂದು ಎಪಿಪಿ ತನುಜಾ ಹೊಸಪಟ್ಟಣ ತಿಳಿಸಿದ್ದಾರೆ.
2018ರ ಅಕ್ಟೋಬರ್ 16ರಂದು ಭೂಮಿಯ ಪೂಜೆ ಮಾಡಿಕೊಡುವಂತೆ ಅರ್ಚಕರನ್ನು ಕರೆದೊಯ್ದಿದ್ದ ಆರೋಪಿಗಳು, ಕೂಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಶವವನ್ನು ಅಲ್ಲಿಯೇ ಗುಂಡಿ ತೋಡಿ ಮುಚ್ಚಿ ಅವರ ಬೈಕನ್ನು ಸಮೀಪದ ಬಾವಿಗೆ ಎಸೆದು ಪರಾರಿಯಾಗಿದ್ದರು.
ಪತಿ ಕಾಣೆಯಾದ ಬಗ್ಗೆ ವಿಶ್ವೇಶ್ವರ ಭಟ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಕುಮಟಾ ಪೊಲೀಸರು (ಅಂದಿನ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ತಂಡ), ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ನಂತರ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಶವಪರೀಕ್ಷೆ ನಡೆಸಿದ ನಂತರ ಸತ್ಯಾಂಶ ಬಯಲಾಗಿತ್ತು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ಅವರು ಬಲವಾದ ಸಾಕ್ಷ್ಯಾಧಾರಗಳನ್ನು ಮಂಡಿಸಿದ್ದರು. ಪ್ರಾಸಿಕ್ಯೂಷನ್ ಒಟ್ಟು 62 ಸಾಕ್ಷಿಗಳನ್ನು, 177 ನಿರ್ಣಾಯಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಆರೋಪಿಗಳ ಮೇಲಿನ ಕೊಲೆ ಕೃತ್ಯ ನಿಸ್ಸಂದೇಹವಾಗಿ ಸಾಬೀತಾಗಿದ್ದರಿಂದ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ