ಬೆಂಗಳೂರು: ಅಮ್ಮ ಮಲಗಿದ್ದಾಳೆಂದು ಭಾವಿಸಿ ಅಮ್ಮನ ಶವದ ಜೊತೆಗೆ 2 ದಿನ ಕಳೆದ ಬಾಲಕ…!

ಬೆಂಗಳೂರು: ತಾಯಿ ಮಲಗಿದ್ದಲ್ಲೇ ಮೃತಪಟ್ಟಿದ್ದರೂ ಇದನ್ನು ಅರಿಯದ ಬಾಲಕನೊಬ್ಬ ತಾಯಿಯ ಶವದ ಜೊತೆಯಲ್ಲೇ ಎರಡು ದಿನ ಕಾಲ ಕಳೆದ ಮನಕಲಕುವ ಘಟನೆ ಬೆಂಗಳೂರು ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಆರ್‌.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾ ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಅಣ್ಣಮ್ಮ(45) ಮಲಗಿದಲ್ಲಿಯೇ ಮೃತಪಟ್ಟಿದ್ದರು. ಆದರೆ ಅವರ ೧೧ ವರ್ಷದ ಮಗ ತಾಯಿ ಇನ್ನೂ ಮಲಗಿದ್ದಾಳೆಂದು ಭಾವಿಸಿ ರಾತ್ರಿ ತಾಯಿಯ ಶವದ ಪಕ್ಕದಲ್ಲಿಯೇ ಮಲಗಿದ್ದಾನೆ. ಎರಡು ದಿನಗಳ ನಂತರ ತಾಯಿ ಸತ್ತಿದ್ದಾಳೆಂದು ಗೊತ್ತಾಗಿದೆ.
ಗಂಗಾ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅಣ್ಣಮ್ಮ ಎಂಬವರು ಮಗ ಸೂರ್ಯ ಜೊತೆ ವಾಸವಾಗಿದ್ದರು. ಒಂದು ವರ್ಷದ ಹಿಂದೆ ಅವರ ಪತಿ ಮೃತಪಟ್ಟಿದ್ದರು. ಹೀಗಾಗಿ ತಾಯಿ, ಮಗ ಇಬ್ಬರೇ ವಾಸವಾಗಿದ್ದರು. ಲೋ ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದಾಗಿ ಫೆಬ್ರವರಿ 26ರಂದು ಅಣ್ಣಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರು ಮಲಗಿದ್ದಾಗಲೇ ಮೃತಪಟ್ಟಿದ್ದಾರೆ.

ಆದರೆ ಮಗ ಸೂರ್ಯ ಅಮ್ಮ ಮಲಗಿದ್ದಾಳೆ ಎಂದು ಭಾವಿಸಿದ್ದಾನೆ.. ಹೊರಗೆ ಹೋಗಿ ಊಟ-ತಿಂಡಿ ತೆಗೆದುಕೊಂಡು ಮನೆಗೆ ಬರುತ್ತಿದ್ದನಂತೆ. 2 ದಿನಗಳ ಕಾಲ ತಾಯಿಯ ಶವದ ಪಕ್ಕದಲ್ಲಿಯೇ ಮಲಗಿ ರಾತ್ರಿ ಕಳೆದಿದ್ದ. ಆತ ಫೆಬ್ರವರಿ 28ರಂದು ಹೊರಗೆ ಹೋಗಿದ್ದಾಗ ತಂದೆಯ ಸ್ನೇಹಿತರು ಸಿಕ್ಕಿದ್ದಾರೆ, ಆಗ ಅವರ ಬಳಿ ತಾಯಿ ಮಾತನಾಡುತ್ತಿಲ್ಲ, ಯಾಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾನೆ.
ಬಾಲಕನ ಮಾತಿನಿಂದ ಅನುಮಾನಗೊಂಡ ಸ್ನೇಹಿತರು ಮನೆ ಬಳಿ ಹೋಗಿ ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ನಂತರ ಅವರು ಈ ಬಗ್ಗೆ ಅವರು ಆರ್‌.ಟಿ.ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ಅಣ್ಣಮ್ಮ ಪತಿ ಮೃತಪಟ್ಟಿದ್ದರು. ಈಗ ತಾಯಿ ಕೂಡ ಮೃತಪಟ್ಟಿದ್ದಾರೆ. ಇದೀಗ ತಾಯಿ ಕಳೆದುಕೊಂಡ ಬಾಲಕ ಸೂರ್ಯ ತಬ್ಬಲಿಯಾಗಿದ್ದಾನೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement