ಬಾಗಲಕೋಟೆ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಇಂದು, ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಹಾಲಿಂಗಪುರದ ನಿವಾಸಿ ಇಬ್ರಾಹಿಂ ಸುತಾರರಿಗೆ ಬೆಳಗ್ಗೆ 6:30ಕ್ಕೆ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ ಎದೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು,ಶುಕ್ರವಾರ ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣ ಇಬ್ರಾಹಿಂ ಸುತಾರ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 6:30ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೇ 10, 1940ರಂದು ಜನಿಸಿದ ಇಬ್ರಾಹಿಂ ಎನ್. ಸುತಾರ್ ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್, ತಾಯಿ ಅಮೀನಾಬಿ. ಮೂರನೇ ತರಗತಿವರೆಗೆ ಶಿಕ್ಷಣ ಪಡೆದಿದ್ದ ಸುತಾರ್ ಅವರು ನಂತರ ನೇಕಾರ ವೃತ್ತಿ ಮಾಡುತ್ತಿದ್ದರು. ಕುರಾನ್ ಅಧ್ಯಯನ ಮಾಡಿದ ಅವರು, ಬಳಿಕ ಭಗವದ್ಗೀತೆ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರು
ಕನ್ನಡದ ಕಬೀರ ಎಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ್ ಅವರು ಭಾವೈಕ್ಯ ಸಂದೇಶ ಸಾರುವ ಸಂತರಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ, ಶರಣರ ತತ್ವಗಳ ಅಧ್ಯಯನ ಮಾಡಿದವರಗಾಗಿದ್ದರು. ಪ್ರವಚನ, ಭಗವದ್ಗೀತೆ ಪ್ರವಚನಗಳ ಮೂಲಕ ಜನರಲ್ಲಿ ಸಮಾನತೆ ಧರ್ಮ ಸಹಿಷ್ಣುತೆ ಪಾಠ ಮಾಡುತ್ತಿದ್ದರು.
ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆ ಸಂದೇಶ ಸಾರಿ ಹೆಸರು ವಾಸಿಯಾಗಿದ್ದ ಇಬ್ರಾಹಿಂ ಸುತಾರ್ ಅವರು, ಹಿಂದೂ-ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚಕರಾಗಿದ್ದರು. ಸೂಫಿ ಸಂತರಾಗಿದ್ದ ಸುತಾರ್1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. 2018ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ